ADVERTISEMENT

ಚಾಮರಾಜನಗರ: 18 ಕಳ್ಳತನ ಪ್ರಕರಣಗಳ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 2:36 IST
Last Updated 16 ಫೆಬ್ರುವರಿ 2024, 2:36 IST
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನದ ಸರ, ಬೈಕ್‌ಗಳೊಂದಿಗೆ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ 
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನದ ಸರ, ಬೈಕ್‌ಗಳೊಂದಿಗೆ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ    

ಚಾಮರಾಜನಗರ: ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ವಿವಿಧೆಡೆ ಚಿನ್ನದ ಸರ ಹಾಗೂ ಬೈಕ್‌ ಕಳ್ಳತನ ಮಾಡಿರುವ ಆರೋಪಿಯನ್ನು ಸಂತೇಮರಹಳ್ಳಿ ಮತ್ತು ಕುದೇರು ಠಾಣೆ ಪೊಲೀಸರ ತಂಡ ಬಂಧಿಸಿದೆ. ಆತನಿಂದ 80.30 ಗ್ರಾಂ ತೂಕದ ಚಿನ್ನದ ಸರಗಳು, ಮೂರು ಬೈಕ್‌ ಮತ್ತು ಒಂದು ಟಿವಿಯನ್ನು ವಶಕ್ಕೆ ಪಡೆಯಲಾಗಿದೆ. 

ಆರೋಪಿಯ ಗುರುತನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಕಳ್ಳತನ ಪ್ರಕರಣವೊಂದರಲ್ಲಿ ಇದೇ 10ರಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಹಿಂದೆ ಆತ ಎಸಗಿದ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿವೆ. 

ಎರಡೂ ಜಿಲ್ಲೆಗಳಲ್ಲಿ ತಲಾ ಒಂಬತ್ತು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಏಳು ಸರ ಕಳ್ಳತನ, ಒಂದು ಬೈಕ್‌ ಮತ್ತು ಒಂದು ಮನೆಗಳ್ಳತನ ಪ್ರಕರಣ ನಡೆಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮೂರು ಸರ ಕಳ್ಳತನ, ಐದು ಬೈಕ್‌ ಕಳವು ಮತ್ತು ಒಂದು ಮನೆ ಕಳ್ಳತನ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಸಂತೇಮರಹಳ್ಳಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಬಸವರಾಜು ನೇತೃತ್ವದಲ್ಲಿ ಸಂತೇಮರಹಳ್ಳಿ ಪಿಎಸ್‌ಐ ಚಂದ್ರಹಾಸ ನಾಯಕ, ಕುದೇರು ಪಿಎಸ್‌ಐ ಮಂಜುನಾಥನಾಯಕ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.