ADVERTISEMENT

21ರಂದು ಜಾನಪದ ಮಹಾಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 9:19 IST
Last Updated 18 ಜೂನ್ 2017, 9:19 IST
ಚಾಮರಾಜನಗರದಲ್ಲಿ ನಡೆಯಲಿರುವ ಜಿಲ್ಲಾ ಜಾನಪದ ಮಹಾಸಮ್ಮೇಳನದ ಪೋಸ್ಟರ್‌ ಅನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು
ಚಾಮರಾಜನಗರದಲ್ಲಿ ನಡೆಯಲಿರುವ ಜಿಲ್ಲಾ ಜಾನಪದ ಮಹಾಸಮ್ಮೇಳನದ ಪೋಸ್ಟರ್‌ ಅನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು   

ಚಾಮರಾಜನಗರ: ನಗರದ ರಂಗ ವಾಹಿನಿ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜೂನ್‌ 21ರಂದು ಚಾಮರಾಜನಗರ ಜಿಲ್ಲಾ ಪ್ರಥಮ ಜಾನಪದ ಮಹಾಸಮ್ಮೇಳನವನ್ನು ಆಯೋಜಿಸಿದೆ. ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯ ವರೆಗೆ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜಾನಪದ ವಿದ್ವಾಂಸ ಡಾ. ನಂಜಯ್ಯ ಹೊಂಗನೂರು ಸಮ್ಮೇಳನದ ಅಧ್ಯಕ್ಷರಾಗಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ ರಂಗವಾಹಿನಿ ಜಾನಪದ ಹೊಂಬಾಳೆ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.   ಡಾ.ಕಾ. ರಾಮೇಶ್ವರಪ್ಪ, ಡಾ. ವೇಮಗಲ್‌ ನಾರಾಯಣಸ್ವಾಮಿ, ಎಂ.ಕೆ. ಸಿದ್ದರಾಜು, ನಗಾರಿ ಮಂಜುನಾಥ್‌ ಮತ್ತು ಸವಿತಾ ಚಿರಕುನ್ನಯ್ಯ ಅವರನ್ನು ಸನ್ಮಾನಿಸಲಾಗು ವುದು. ಜಿಲ್ಲಾಧಿಕಾರಿ ಬಿ.ರಾಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಂಗ ಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.

ಜಾನಪದ ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಹರೀಶ್‌ಕುಮಾರ್‌ ಉದ್ಘಾಟಿಸಲಿದ್ದಾರೆ. ಮಾರಿಗುಡಿಯಿಂದ 30ಕ್ಕೂ ಹೆಚ್ಚು ವಿವಿಧ ಕಲಾಪ್ರಕಾರಗಳ ತಂಡಗಳು, ಎತ್ತಿನಗಾಡಿ, ಬೈಕ್‌ ಮತ್ತು 50ಕ್ಕೂ ಅಧಿಕ ಕಂಡಾಯಗಳು ಮೆರವಣಿಗೆ ನಡೆಸಲಿವೆ. ಮೆರವಣಿಗೆಯು ಚಾಮರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ತಲುಪಿ, ಶ್ರೀ ಭುವನೇಶ್ವರಿ ವೃತ್ತದ ಮೂಲಕ ಮಾರಿಗುಡಿಗೆ ಮರಳಲಿದೆ.

ADVERTISEMENT

ಬೆಳಿಗ್ಗೆ 11ಕ್ಕೆ ಸಮಾರಂಭವನ್ನು ಉಸ್ತುವಾರಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಪ್ರಾಧ್ಯಾಪಕ ಪ್ರೊ. ಎಂ.ಕೃಷ್ಣೇಗೌಡ ಸಮ್ಮೇಳನದ ಉದ್ಘಾಟನೆ ನಡೆಸಲಿದ್ದಾರೆ. ಡಾ.ಪಿ.ಮಣಿ ಮತ್ತು ಸಿ.ಎಂ. ನರಸಿಂಹಮೂರ್ತಿ ಸಂಪಾದಿಸಿ ರುವ ‘ಚಂದ್ರಮಂಡಲ’ ಪುಸ್ತಕವನ್ನು ಸಂಸದ ಆರ್. ಧ್ರುವನಾರಾಯಣ್ ಬಿಡುಗಡೆ ಮಾಡಲಿದ್ದಾರೆ.

ಮಧ್ಯಾಹ್ನ ‘ಕತ್ತಲ ರಾಜ್ಯ ಮತ್ತು ಪರಂಜ್ಯೋತಿ ಸ್ವರೂಪದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ’ ಹಾಗೂ ‘ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆಯ ಜಾನಪದ ವೈಶಿಷ್ಟ್ಯಗಳು’ ಕುರಿತು ವಿಚಾರ ಸಂಕಿರಣಗಳು ನಡೆಯಲಿವೆ ಎಂದರು.

ಸಂಜೆ 5ಕ್ಕೆ ಸಮಾರೋಪ ಸಮಾ ರಂಭ ನಡೆಯಲಿದ್ದು, ಹಿರಿಯ ರಂಗಕರ್ಮಿ ಎಚ್‌. ಜನಾರ್ದನ್‌ (ಜನ್ನಿ) ಮುಖ್ಯ ಭಾಷಣ ಮಾಡಲಿದ್ದಾರೆ. ತಾ.ಪಂ ಅಧ್ಯಕ್ಷ ಎಚ್.ವಿ. ಚಂದ್ರು, ರಂಗ ಕಲಾವಿದ ಕೆ.ಆರ್. ಗೋಪಾಲಕೃಷ್ಣ ಸೇರಿದಂತೆ ಹತ್ತು ಸಾಧಕರನ್ನು ಸನ್ಮಾನಿಸ ಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಜಾನಪದದ ಉಳಿವು ಮತ್ತು ಬೆಳವಣಿಗೆಯ ಕುರಿತು ಸಮ್ಮೇಳನದಲ್ಲಿ ಹತ್ತು ನಿರ್ಣಯಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷ ಆರ್‌.ಎಂ. ರಾಜಪ್ಪ, ಹಿರಿಯ ಕಲಾವಿದ ಪುಟ್ಟಮಲ್ಲೇಗೌಡ ಇದ್ದರು.

‘ಜಾನಪದ ನಗರ’ ನಾಮಕರಣವಾಗಲಿ
ಮಂಡ್ಯ ಜಿಲ್ಲೆಗೆ ‘ಸಕ್ಕರೆ ನಾಡು’, ಚನ್ನಪಟ್ಟಣಕ್ಕೆ ‘ಗೊಂಬೆಗಳ ನಾಡು’ ಹೆಸರು ಇರುವಂತೆ ಚಾಮರಾಜನಗರ ವನ್ನು ‘ಜಾನಪದ ನಗರ’ ಎಂದು ಗುರುತಿಸಬೇಕು. ಅದಕ್ಕಾಗಿ ಜಿಲ್ಲೆಯ ನಾಲ್ಕೂ ಮುಖ್ಯ ದ್ವಾರಗಳಲ್ಲಿ ‘ಜಾನಪದ ನಗರಕ್ಕೆ ಸ್ವಾಗತ’ ಎಂಬ ಫಲಕ ಹಾಕಬೇಕು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೆಂಪನಪುರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.