ADVERTISEMENT

26ರಿಂದ ಮಲೆಮಹದೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 9:45 IST
Last Updated 24 ಸೆಪ್ಟೆಂಬರ್ 2011, 9:45 IST

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹ ದೇಶ್ವರ ಬೆಟ್ಟದಲ್ಲಿ ಸೆ. 26ರಿಂದ 28 ರವರೆಗೆ ಮಹಾಲಯ ಜಾತ್ರಾ ಮಹೋತ್ಸವ ಹಾಗೂ ಅ. 4ರಿಂದ 6ರವರೆಗೆ ದಸರಾ ಜಾತ್ರಾ ಮಹೋತ್ಸವ ನಡೆಯಲಿದೆ.

26ರಂದು ಎಣ್ಣೆಮಜ್ಜನ ಮತ್ತು ತೈಲಾಭಿಕೇಷಕ ನಡೆಯಲಿದೆ. 27ರಂದು ಮಹಾಲಯ ಅಮಾವಾಸ್ಯೆ ವಿಶೇಷ ಉತ್ಸವಾದಿ ನಡೆಯಲಿವೆ. 28ರಿಂದ ಅ. 4ರವರೆಗೆ ಪ್ರತಿದಿನ ರಾತ್ರಿ 8.30ಗಂಟೆಯಿಂದ ನವರಾತ್ರಿ ಉಯ್ಯಾಲೋತ್ಸವ ನಡೆಯಲಿದೆ.

ಅ. 5ರಂದು ರಾತ್ರಿ 8.30ಗಂಟೆಗೆ ಮಹಾನವಮಿ, ಆಯುಧ ಪೂಜೆ, ಅ. 6ರಂದು ರಾತ್ರಿ 8.30ಗಂಟೆಗೆ ವಿಜಯದಶಮಿ ಕುದುರೆ ವಾಹನೋತ್ಸವ ನಡೆಯಲಿದೆ. ನೈವೇದ್ಯದ ನಂತರ ತೆಪ್ಪೋತ್ಸವ ನಡೆಯಲಿದೆ.

ವಿಜಯದಶಮಿ- ಕುದುರೆ ವಾಹನೋತ್ಸವ ಹಾಗೂ ತೆಪ್ಪೋತ್ಸವಕ್ಕೆ ದೇವಸ್ಥಾನದಿಂದ ವರ್ಣರಂಜಿತ ದೀಪಾಲಂಕಾರ ಹಾಗೂ ಬಾಣಬಿರುಸು ಏರ್ಪಾಡು ಮಾಡಲಾಗಿದೆ. ಎಲ್ಲ ಸೇವೆ ಉತ್ಸವಾದಿಗಳು ಸಾಲೂರು ಮಠದ ಗುರು ಸ್ವಾಮೀಜಿ ನೇತೃತ್ವದಲ್ಲಿ ನಡೆ ಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಹಕಾಧಿಕಾರಿ ತಿಳಿಸಿದ್ದಾರೆ.

ಹೆಚ್ಚುವರಿ ಬಸ್ ಸೌಲಭ್ಯ: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಹಾಲಯ ಅಮಾವಾಸ್ಯೆ ಜಾತ್ರೆ ಪ್ರಯುಕ್ತ ಸೆ. 24ರಿಂದ 30ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗದಿಂದ ವಿವಿಧ ಕಡೆಯಿಂದ ಭಕ್ತರು ತೆರಳಲು 100 ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯ ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಸಂತೇಮರಹಳ್ಳಿ, ಮೈಸೂರು ಜಿಲ್ಲೆಯ ಟಿ. ನರಸೀಪುರ, ನಂಜನಗೂಡು, ಮೈಸೂರು, ಬೆಂಗಳೂರು, ಕನಕಪುರ, ಮೆಟ್ಟೂರು ಮುಂತಾದ ಕಡೆಗಳಿಂದ ಭಕ್ತಾದಿಗಳು ಬೆಟ್ಟಕ್ಕೆ ತೆರಳಲು ಅನುಕೂಲವಾಗುವಂತೆ ಬಸ್‌ಗಳ ಕಾರ್ಯಾಚರಣೆಗೆ ಕ್ರಮವಹಿಸ ಲಾಗಿದೆ. ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಜಿ. ಪಾರ್ಥಸಾರಥಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.