ADVERTISEMENT

ಈ ತಿಂಗಳು 45 ಡೆಂಗಿ ಪ್ರಕರಣ ಪತ್ತೆ

ಸ್ವಚ್ಛತೆಗೆ ಒತ್ತು ನೀಡಲು ಮನವಿ, ತಜ್ಞ ವೈದ್ಯರನ್ನು ಕಾಣಲು ವೈದ್ಯಾಧಿಕಾರಿಗಳ ಸಲಹೆ

ಸೂರ್ಯನಾರಾಯಣ ವಿ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
   

ಚಾಮರಾಜನಗರ: ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಜನರನ್ನು ಡೆಂಗಿ ಜ್ವರ ಕಾಡಲು ಆರಂಭಿಸಿದ್ದು,ಈ ತಿಂಗಳಲ್ಲಿ ಇದುವರೆಗೆ 45 ಪ್ರಕರಣಗಳು ಪತ್ತೆಯಾಗಿವೆ.

ಜನವರಿಯಿಂದ ಲೆಕ್ಕ ಹಾಕಿದರೆ, ಇಲ್ಲಿವರೆಗೆ 53 ಡೆಂಗಿ ಪ್ರಕರಣಗಳು ಬೆಳಕಿಗೆ ಬಂದಿವೆ. ಹವೆ ಬದಲಾಗಿರುವುದರಿಂದಜಿಲ್ಲೆಯಾದ್ಯಂತ ಜನರಿಗೆ ವೈರಲ್‌ ಜ್ವರವೂ ಬಾಧಿಸುತ್ತಿದ್ದು, ಡೆಂಗಿ ಜ್ವರ ಇರಬಹುದೇನೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿ, ಆಸ್ಪತ್ರೆಗಳತ್ತ ಜನರು ದೌಡಾಯಿಸುತ್ತಿದ್ದಾರೆ.

ನಗರ‍ಪ್ರದೇಶಗಳಲ್ಲಿ ಹೆಚ್ಚು: ಗ್ರಾಮೀಣ ಪ್ರದೇಶಗಳಲ್ಲಿ ಹೋಲಿಸಿದರೆ, ನಗರ ಪ‍್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 32 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ.

ADVERTISEMENT

ಜನರು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ಸುತ್ತಮುತ್ತಲಿನ ಪ‍ರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಡೆಂಗಿ ಹರಡುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

‘ಮಳೆಗಾಲ ಆರಂಭದ ಸಮಯದಲ್ಲಿ, ಅಂದರೆ ಜೂನ್‌, ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಸಾಮಾನ್ಯವಾಗಿ ಡೆಂಗಿ ಜ್ವರ ಕಾಣಿಸಿಕೊಳ್ಳುತ್ತದೆ. ಈಗ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಡೆಂಗಿ ಪ್ರಕರಣಗಳಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ವೈರಲ್‌ ಜ್ವರವೂ ಹೆಚ್ಚಾಗಿ ಕಂಡು ಬರುತ್ತದೆ. ಎಲ್ಲ ಜ್ವರ ಡೆಂಗಿಯಲ್ಲ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್‌.ಕಾಂತರಾಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಡೀಸ್‌ ಈಜಿಪ್ಟೈ ಎಂಬ ಸೊಳ್ಳೆಯಿಂದ ಡೆಂಗಿ ಹರಡುತ್ತದೆ. ಈ ಸೊಳ್ಳೆಗಳು ಸ್ವಚ್ಛವಾದ ನೀರನ್ನೇ ಆವಾಸಸ್ಥಾನವನ್ನಾಗಿ ಮಾಡಿಕೊಂಡಿರುತ್ತವೆ. ನೀರಿನಲ್ಲಿ ಮೊಟ್ಟೆ ಇಟ್ಟ 8 ರಿಂದ 11 ದಿನಗಳಲ್ಲಿ ಸೊಳ್ಳೆ ಹೊರಬರುತ್ತದೆ. ಹಗಲು ಹೊತ್ತಿನಲ್ಲೇ ಇವು ಮನುಷ್ಯರನ್ನು ಕಚ್ಚುತ್ತವೆ. ಇದು ಸೋಂಕು ಜ್ವರವಾಗಿರುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ’ ‌ಎಂದು ಅವರು ಮಾಹಿತಿ ನೀಡಿದರು.

ಎಚ್ಚರಿಕೆ ಅಗತ್ಯ: ‘ಡೆಂಗಿಗೆ ನಿರ್ದಿಷ್ಟ ಔಷಧಗಳಿಲ್ಲ. ರೋಗ ಲಕ್ಷಣಗಳ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ, ಡೆಂಗಿ ಹರಡುವುದಕ್ಕೆ ಮೊದಲೇ ನಾವು ಮುನ್ನೆಚ್ಚರಿಕೆಯನ್ನು ಕೈಗೊಳ್ಳಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಹೆಚ್ಚು ದಿನಗಳ ಕಾಲ ನೀರನ್ನು ಶೇಖರಿಸಿಡುವುದನ್ನು ತಪ್ಪಿಸಬೇಕು. ಶೇಖರಿಸುತ್ತಿದ್ದರೆ, ಅದರಲ್ಲಿ ಸೊಳ್ಳೆ ಇರದಂತೆ ನೋಡಿಕೊಳ್ಳಬೇಕು’ ಎಂದು ಡಾ.ಕಾಂತರಾಜ್‌ ವಿವರಿಸಿದರು.
‘ಜ್ವರ ಬಂದ ತಕ್ಷಣ ಅಥವಾ ಡೆಂಗಿ ರೋಗ ಲಕ್ಷಣಗಳು ಕಂಡು ಬಂದರೆ ಜನರು ನಿರ್ಲಕ್ಷ್ಯ ಮಾಡಬಾರದು. ತಾವೇ ಹೋಗಿ ಮೆಡಿಕಲ್‌ಗಳಿಂದ ಔಷಧಿ ಪಡೆಯಬಾರದು.ತಜ್ಞ ವೈದ್ಯರನ್ನು ಕಾಣಬೇಕು‌. ಆರಂಭದಲ್ಲೇ ಚಿಕಿತ್ಸೆ ಪಡೆದರೆ ಏನೂ ತೊಂದರೆಯಾಗುವುದಿಲ್ಲ. ನಿರ್ಲಕ್ಷ್ಯ ಮಾಡಿದರೆ ಮರಣವೂ ಸಂಭವಿಸಬಹುದು’ ಎಂದು ಅವರು ಎಚ್ಚರಿಸಿದರು.

ಮುಂಜಾಗ್ರತಾ ಕ್ರಮ: ಆರೋಗ್ಯ ಇಲಾಖೆಯು ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಭೆಯನ್ನೂ ನಡೆಸಲಾಗಿದೆ ಎಂದರು.

ಲಾರ್ವಾ ಸಮೀಕ್ಷೆ: ‘ಆಶಾ ಕಾರ್ಯಕರ್ತರು ಹಾಗೂ ಇಲಾಖೆಯ ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ ಮನೆಗಳಲ್ಲಿ ಸಂಗ್ರಹಿಸಿಟ್ಟಿರುವ ನೀರನ್ನು ಪರಿಶೀಲಿಸಿ, ಅದರಲ್ಲಿ ಸೊಳ್ಳೆಗಳು ವಾಸಿಸುತ್ತಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಜೊತೆಗೆ ಡೆಂಗಿ ಜ್ವರದ ಬಗ್ಗೆ ಜನರಿಗೆ ತಿಳಿ ಹೇಳಲಾಗುತ್ತದೆ. ಅಗತ್ಯವಿರುವ ಕಡೆ ಔಷಧವನ್ನೂ ಸಿಬ್ಬಂದಿ ವಿತರಿಸುತ್ತಿದ್ದಾರೆ’ ಎಂದು ಕಾಂತರಾಜ್‌ ತಿಳಿಸಿದರು.

ಡೆಂಗಿ ಜ್ವರ: ರೋಗ ಲಕ್ಷಣಗಳು
ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣು ಗುಡ್ಡೆಗಳ ಹಿಂಭಾಗ ನೋವು, ಮಾಂಸ ಖಂಡಗಳಲ್ಲಿ ನೋವು, ಸುಸ್ತು, ಮೈಮೇಲೆ ರಕ್ತ ಸ್ರಾವದ ಗುರುತುಗಳು, ರಕ್ತ ರಹಿತ ಅಥವಾ ರಕ್ತ ಸಹಿತ ವಾಂ‌ತಿ, ವಿಪರೀತ ಬಾಯಾರಿಕೆ, ರಕ್ತ ಮಿಶ್ರಿತ ಮಲವಿಸರ್ಜನೆ, ಮೂಗು, ಒಸಡಿನಲ್ಲಿ ರಕ್ತ ಸ್ರಾವ

8 ಚಿಕೂನ್‌ಗುನ್ಯ ಪ್ರಕರಣ
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 8 ಚಿಕೂನ್‌ಗುನ್ಯ‌ ಪ್ರಕರಣಗಳು ವರದಿಯಾಗಿವೆ. ಇದು ಕೂಡ ಈಡೀಸ್‌ ಈಜಿಪ್ಟೈ ಸೊಳ್ಳೆಯಿಂದ ಹರಡುತ್ತದೆ.

ಮಾರಣಾಂತಿಕವಲ್ಲದ ಈ ಕಾಯಿಲೆಗೂ ನಿರ್ದಿಷ್ಟ ಔಷಧಿ ಇಲ್ಲ. ರೋಗದ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಕೆಲವು ದಿನಗಳ ನಂತರ ತನ್ನಿಂತಾನೇ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು.

ಅಂಕಿ ಅಂಶ
53:
ಜನವರಿಯಿಂದ ಇಲ್ಲಿವರೆಗೆ ವರದಿಯಾದ ಡೆಂಗಿ ಪ್ರಕರಣಗಳು
45:ಜುಲೈನಲ್ಲಿ ಪತ್ತೆಯಾದ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.