ADVERTISEMENT

ನಾಲೆಗೆ ನೀರು ಹರಿಸಲು ಆಗ್ರಹ

ಹೆದ್ದಾರಿ ತಡೆದು ಪ್ರತಿಭಟಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 9:19 IST
Last Updated 18 ಜನವರಿ 2018, 9:19 IST
ಕಬಿನಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಸಂತೇಮರಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು
ಕಬಿನಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಸಂತೇಮರಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು   

ಸಂತೇಮರಹಳ್ಳಿ: ಕಬಿನಿ ನಾಲೆಗೆ ನೀರು ಹರಿಸಿ ರೈತರ ಫಸಲನ್ನು ಕಾಪಾಡಬೇಕು ಎಂದು ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಡೆಸಿದರು.

ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಪ್ರತಿಭಟನೆಗೆ ಕುಳಿತ ಪ್ರತಿಭಟನಾಕಾರರು ನೀರಾವರಿ ನಿಗಮದ ಅಧಿಕಾರಿಗಳ ವಿರುದ್ದ ಧಿಕ್ಕಾರದ ಘೋಷಣೆಗಳ್ನು ಕೂಗಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ಥಳಕ್ಕೆ ಬಂದು ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಂಬಂಧಪಟ್ಟ ಅಧಿಕಾರಿಗಳ ಸ್ಥಳಕ್ಕೆ ಬಾರದ ಕಾರಣ ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಯ ಮುಂಭಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ADVERTISEMENT

ಯಳಂದೂರು ತಾಲ್ಲೂಕಿನ ಯರಗಂಬಳ್ಳಿ, ಗುಂಬಳ್ಳಿ, ಕೊಮಾರನಪುರ, ಕೃಷ್ಣಪುರ, ಗಣಗನೂರು, ಅಗ್ರಹಾರ, ಗೌಡಹಳ್ಳಿ ಹಾಗೂ ಮಲಾರಪಾಳ್ಯ ಗ್ರಾಮದ ರೈತರು ಕಬಿನಿ ನಾಲೆಯ ನೀರನ್ನು ನಂಬಿ ಭತ್ತ, ಜೋಳ, ರಾಗಿ, ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬೆಳೆಗಳು ಒಣಗಲು ಆರಂಭವಾಗಿವೆ. ಕಬಿನಿ ನಾಲೆ ವ್ಯಾಪ್ತಿಯಲ್ಲಿ 500 ಎಕರೆವರೆಗೂ ಫಸಲು ಹಾಕಲಾಗಿದೆ. ಪ್ರತಿ ಎಕರೆಗೆ ₹ 25,000 ರೈತರಿಗೆ ಖರ್ಚಾಗಿದೆ. ನಾಲೆಯಲ್ಲಿ ನೀರು ಹರಿಸದಿದ್ದರೆ ಬೆಳೆಗಳು ನಾಶವಾಗುತ್ತವೆ. ಕಾಲುವೆಗಳಲ್ಲಿ ನೀರು ಹರಿಸಿ ಕೆರೆ–ಕಟ್ಟೆಗಳನ್ನು ತುಂಬಿಸಿ ರೈತರ ಬೆಳೆಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಮುಖಂಡ ಕೂಡ್ಲೂರು ಶ್ರೀಧರಮೂರ್ತಿ, ದಲಿತ ಸಂಘರ್ಷ ಸಮಿತಿಯ ಕೆ.ಎಂ.ನಾಗರಾಜು, ವೈ.ಸಿ.ನಾಗೇಂದ್ರ, ಆರ್.ಶಿವಕುಮಾರ್, ಎಸ್.ಸಿದ್ದಯ್ಯ, ಆರ್.ರಘು, ಗೋವಿಂದರಾಜು, ರೇವಣ್ಣ, ನಂಜುಂಡಪ್ಪ, ಸತೀಶ್, ಮಹದೇವ, ಬಸವರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.