ADVERTISEMENT

ಗೆಲ್ಲಲೇಬೇಕು, ಸೋಲುವ ಮಾತೇ ಇಲ್ಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 10:23 IST
Last Updated 1 ಫೆಬ್ರುವರಿ 2018, 10:23 IST
ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ನಡೆದ ರಾಜಕೀಯ ಸಮಾಲೋಚನಾ ಸಭೆಯಲ್ಲಿ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು
ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ನಡೆದ ರಾಜಕೀಯ ಸಮಾಲೋಚನಾ ಸಭೆಯಲ್ಲಿ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು   

ಕೊಳ್ಳೇಗಾಲ: ‘ಈ ಬಾರಿ ಚುನಾವಣೆಗೆ ನಿಂತರೆ ಗೆಲ್ಲಲೇಬೇಕು, ಸೋಲುವ ಮಾತೇ ಇಲ್ಲ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ’ ಎಂದು ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ನಗರದಲ್ಲಿ ಬುಧವಾರ ನಡೆದ ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ನಡೆದ ರಾಜಕೀಯ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘2004ರ ಚುನಾವಣೆಯಲ್ಲಿ ಒಂದೇ ಒಂದು ಮತದಿಂದ ಸೋತಿದ್ದೆ. ಇಂಥಾ ಸೋಲು ನನ್ನ ಎದುರಾಳಿಗೂ ಬರಬಾರದು. ಇದರಿಂದ 14ವರ್ಷ ವನವಾಸ ಅನುಭವಿಸಿದ್ದೇನೆ’ ಎಂದು ಹೇಳುತ್ತಾ ಭಾವುಕರಾದರು.

‘ಅಧಿಕಾರ ಇಲ್ಲದಿದ್ದರೂ ಸಾಕಷ್ಟು ಜನಸೇವೆ ಮಾಡಿದ್ದೇನೆ. ಅಧಿಕಾರ ದಲ್ಲಿದ್ದಾಗ ಅನೇಕ ಜನೋಪಯೋಗಿ ಕೆಲಸಗಳನ್ನೂ ಮಾಡಿದ್ದೇನೆ. ಅದರ ಫಲವೇ, ಯಾವುದೇ ವಾಹನ ವ್ಯವಸ್ಥೆ ಕಲ್ಪಿಸದಿದ್ದರೂ ಇಷ್ಟೊಂದು ಅಭಿಮಾನಿಗಳು ಈ ಸಭೆಯಲ್ಲಿ ಭಾಗವ ಹಿಸಿರುವುದು’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

‘ನಾನೊಬ್ಬ ಭಾರತೀಯನಾಗಿ, ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಟೀಕೆ ಮಾಡಿದ್ದೆ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅದನ್ನು ತಪ್ಪು ತಿಳಿದುಕೊಂಡರು. ಆದರೆ ಈಗಲೂ ಅವರನ್ನು ಗೌರವಿಸುತ್ತೇನೆ’ ಎಂದರು.

‘ಪಕ್ಷದ ಕಾರ್ಯಕ್ರಮಗಳಿಗೆ ನನ್ನನ್ನು ಸರಿಯಾಗಿ ಕರೆಯುತ್ತಿರಲಿಲ್ಲ. ನಾನು ಒಂದು ವಾರ ಕಾದು ನೋಡಿದೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪಕ್ಷದ ಯಾವೊಬ್ಬ ಮುಖಂಡರೂ ಸೌಜನ್ಯಕ್ಕೂ ಪಕ್ಷ ಬಿಡಬೇಡಿ ಎಂದು ಹೇಳಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೊಂಚ ಕಾಲಾವಕಾಶ ತೆಗೆದು ಕೊಂಡು ಒಂದು ಒಳ್ಳೆಯ ನಿರ್ಧಾರಕ್ಕೆ ಬರುತ್ತೇನೆ. ನಾಲ್ಕು ಸೋಲುಗಳಾದರೂ ಇದುವರೆಗೂ ಧೃತಿಗೆಟ್ಟಿಲ್ಲ. ಈ ಚುನಾವಣೆಯಲ್ಲಿ ಸೋಲಬಾರದು ಹಾಗಾಗಿ ಮುಂದಿನ ನಿಲುವಿನ ಬಗ್ಗೆ ಖಚಿತ ಪಡಿಸಿಕೊಂಡೇ ಬಹಿರಂಗಪಡಿಸುತ್ತೇನೆ’ ಎಂದರು.

ಬೆಂಬಲಿಗರಾದ ಶಿವಕುಮಾರ್, ಎಸಿ.ಪ್ರವೀಣ್, ಬೋರೇಗೌಡ, ಮಾಂಬಳಿ ಮೋಹನ್, ಮಹಾದೇವನಾಯಕ, ಪ್ರಭಾಕರ್, ಹೊಂಗನೂರು ಪುಟ್ಟಸ್ವಾಮಿ, ದುಂಡಯ್ಯ, ಪಾಯಿಕ್ ಅಹಮದ್, ಶಿವಮೂರ್ತಿ, ನಾಗರಾಜು, ಅಕ್ರಮುಲ್ಲಾ, ಮಹಾಲಕ್ಷ್ಮಿ, ಗೋವಿಂದರಾಜು, ಅಲ್ತಾಫ್, ಜುಬೇರ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.