ADVERTISEMENT

ಕುತೂಹಲ ಮೂಡಿಸಿದ ಕೃತಕ ತಾರಾಲಯ

ನಾ.ಮಂಜುನಾಥ ಸ್ವಾಮಿ
Published 10 ಫೆಬ್ರುವರಿ 2018, 9:00 IST
Last Updated 10 ಫೆಬ್ರುವರಿ 2018, 9:00 IST
ಯಳಂದೂರು ಪಟ್ಟಣದ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳು ಸಂಚಾರಿ ತಾರಾಲಯದಲ್ಲಿ ಅಳವಡಿಸಿದ ಫೀಶ್–ಐ–ಲೆನ್ಸ್ ಬಗ್ಗೆ ಮಾಹಿತಿ ಪಡೆದರು
ಯಳಂದೂರು ಪಟ್ಟಣದ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಕ್ಕಳು ಸಂಚಾರಿ ತಾರಾಲಯದಲ್ಲಿ ಅಳವಡಿಸಿದ ಫೀಶ್–ಐ–ಲೆನ್ಸ್ ಬಗ್ಗೆ ಮಾಹಿತಿ ಪಡೆದರು   

ಯಳಂದೂರು: ಭೂಮಿಯ ಮೇಲೆ ಕತ್ತಲೇ ಇಲ್ಲವಾಗಿದ್ದರೆ ಏನಾಗುತ್ತಿತ್ತು?, ನಕ್ಷತ್ರ, ಗ್ರಹ, ಧೂಮಕೇತುಗಳ ವೀಕ್ಷಣೆ ಹೇಗೆ? ಗ್ರಹಣಗಳ ವೈಜ್ಞಾನಿಕ ಹಿನ್ನೆಲೆಯನ್ನು ಸರಳವಾಗಿ ಹೇಗೆ ತಿಳಿಯುವುದು. ಬಾಹ್ಯಾಕಾಶದಲ್ಲಿ ರಾಕೆಟ್ ಮತ್ತು ಉಪಗ್ರಹಗಳು ಹೇಗೆ ಚಲಿಸುತ್ತವೆ.., ಮೊದಲಾದ ಹತ್ತು ಹಲವು ಕುತೂಹಲದ ಪ್ರಶ್ನೆಗಳಿಗೆ ಅಲ್ಲಿ ಉತ್ತರಗಳ ದೊರೆಯತ್ತಿದ್ದವು.

ಅದು, ಪಟ್ಟಣದಲ್ಲಿ ಇತ್ತೀಚಿಗೆ ‘ವರ್ಣಾಸ್ ಟೆಕ್ನಾಲಜಿ ಸಂಸ್ಥೆ’ ಹಾಗೂ ‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ’ (ಕೆಸ್ಟೆಪ್ಸ್‌) ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಖಗೋಳ ವಿಜ್ಞಾನ ಪ್ರದರ್ಶನ ‘ತಾರಾಲಯ’ದಲ್ಲಿ.

‘ನಮ್ಮ ಶಾಲಾ ಕೊಠಡಿಯಲ್ಲಿಯೇ ನಿರ್ಮಿಸಿದ ಕೃತಕ ತಾರಾಲಯದಲ್ಲಿ ಬಾಹ್ಯಾಕಾಶಕ್ಕೆ ಚಿಮ್ಮುವ ಕೃತಕ ಉಪಗ್ರಹ ಹಾಗೂ ಕ್ಷೀರಪಥಗಳನ್ನು ವೀಕ್ಷಿಸುವ ಅನುಭವ ಹೊಸಲೋಕವನ್ನು ತೆರೆದಿಟ್ಟಿತು. 30 ನಿಮಿಷಗಳ ಖಗೋಳ ಪ್ರದರ್ಶನ ಗ್ರಹ–ನಕ್ಷತ್ರಗಳ ಬಗ್ಗೆ ಆಸಕ್ತಿ ಮೂಡಿಸಿದೆ’ ಎಂದುರೆ ಸರ್ಕಾರಿ ಬಾಲಕಿಯರ ಶಾಲೆಯ ರಂಜನ ಮತ್ತು ರೂಪಶ್ರೀ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಸಂಚಾರಿ ತಾರಾಲಯ ವಿಶೇಷ: 30ರಿಂದ 40 ವಿದ್ಯಾರ್ಥಿಗಳು ಕೂರಬಹು ದಾದ ಕೊಠಡಿಯಲ್ಲಿ, ಗಾಳಿ ತುಂಬುವ ಮೂಲಕ ರಚಿತವಾದ ಪ್ರೊಜೆಕ್ಟರ್, ಫೀಶ್–ಐ–ಲೆನ್ಸ್ ಜೋಡಿಸಿದ ಡಿಜಿಟಲ್ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಎಂಜಿನಿಯರಿಂಗ್ ಮತ್ತು ಗಣಿತ ಶಾಸ್ತ್ರ (STEM) ವಿಷಯಗಳ ವಿಡಿಯೊಗಳನ್ನು 360 ಡಿಗ್ರಿಯಲ್ಲಿ ಪ್ರೊಜೆಕ್ಟ್ ಮಾಡಿ, 180 ಡಿಗ್ರಿ ಕೋನದಲ್ಲಿ ವೀಕ್ಷಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಗುಣ ಮಟ್ಟದ ಶಬ್ಧ ವ್ಯವಸ್ಥೆಯನ್ನೂ ಕಲ್ಪಿಸಲಾಗದೆ ಎಂದು ಮಂಗಳೂರು ಡಯಟ್ ಉಪನ್ಯಾಸಕ ಮಲ್ಲಿಕಾರ್ಜುನ ಮಾಹಿತಿ ನೀಡಿದರು.

‘ಸಂಜೆಯಾಕಾಶದಲ್ಲಿ ಅನೇಕ ನಕ್ಷತ್ರ ಪುಂಜಗಳು ಗೋಚರಿಸುತ್ತವೆ. ಅವುಗಳಲ್ಲಿ ಮಹಾವ್ಯಾಧ ನಕ್ಷತ್ರ ಪುಂಜ ವಿಶೇಷ. ಬೇಟೆಗಾರನ ಆಕಾರದಲ್ಲಿ ಕಂಡುಬರುವ ಇದು ಬೀಟಲ್ ಗೀಸ್ (ಆರಿದ್ರಾ), ಮೃಗಶಿರ, ರೀಗಲ್ ಎಂಬ 3 ನಕ್ಷತ್ರಗಳನ್ನು ಒಳಗೊಂಡಿದೆ. ಇವುಗಳ ಸುತ್ತಮುತ್ತಲೇ ವಿಜಯಸಾರಥಿ, ವೃಷಭ, ಮಿಥುನ ಪುಂಜಗಳನ್ನು ನೋಡಬಹುದು’ ಇಂತಹ ನಕ್ಷತ್ರಗಳ ಅಧ್ಯಯನ ಫೆಬ್ರುವರಿಯಲ್ಲಿ ಸುಲಭ. ಹಾಗಾಗಿ ತಾರಾಲಯ ಪ್ರದರ್ಶನದಲ್ಲಿ ಅವುಗಳಿಗೆ ಒತ್ತು ನೀಡಲಾಗಿದೆ’ ಎಂದು ವರ್ಣಾಸ್ ಟೆಕ್ನಾಲಜಿಯ ಚರಣ್‌ತಯ್ಯಾ ಭೂಸನೂರುಮಠ ತಿಳಿಸಿದರು.

‘ವಿದ್ಯಾರ್ಥಿಗಳು ಮನೆಯ ಮಾಡನ್ನು ಏರಿ ಆಕಾಶವನ್ನು ಗಮನಿಸಿದರೆ ಇಂತಹ ನೂರಾರು ವಿಷ್ಮಯಗಳನ್ನು ಕಣ್ತುಂಬಿಕೊಳ್ಳಬಹುದು. ಫೆ. 16 ರಂದು ಶುಕ್ರಗ್ರಹದ ಪಕ್ಕದಲ್ಲಿಯೇ ಚಂದ್ರನನ್ನು ಕಾಣಬಹುದು. ಚಂದ್ರನಿಗೆ ರೋಹಿಣಿ ಅತ್ಯಂತ ಪ್ರೀತಿ ಪಾತ್ರ ನಕ್ಷತ್ರ. 23 ರಂದು ಚಂದ್ರ ರೋಹಿಣಿ ನಕ್ಷತ್ರದ ಪಕ್ಕದಲ್ಲಿ ರುವುದನ್ನು ವೀಕ್ಷಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.