ADVERTISEMENT

6ರಿಂದ ಶಾಲಾ ಪ್ರವೇಶ ಪ್ರಕ್ರಿಯೆ ಆರಂಭ

ಉಚಿತ– ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ

ಪ್ರಜಾವಾಣಿ ವಿಶೇಷ
Published 2 ಜನವರಿ 2014, 8:31 IST
Last Updated 2 ಜನವರಿ 2014, 8:31 IST

ಚಾಮರಾಜನಗರ: ಜಿಲ್ಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪೂರ್ವ ಪ್ರಾಥಮಿಕ ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿ ಪ್ರಕ್ರಿಯೆಯು ಜ. 6ರಿಂದ ಆರಂಭವಾಗಲಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2009 ಹಾಗೂ ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ನಿಯಮ– 2012 ಅನುಷ್ಠಾನಗೊಂಡಿದೆ. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಈ ಕಾಯ್ದೆಯ ಗುರಿಯಾಗಿದೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಮಾನ್ಯತೆ ಪಡೆದ ಹಾಗೂ ಎಲ್ಲ ಅನುದಾನರಹಿತ (ಅಲ್ಪಸಂಖ್ಯಾತ ಶಾಲೆ ಹೊರತುಪಡಿಸಿ), ಸಿಬಿಎಸ್ಸಿ, ಐಸಿಎಸ್ಇ ಶಾಲೆಗಳು ಪೂರ್ವ ಪ್ರಾಥಮಿಕ ಹಾಗೂ 1ನೇ ತರಗತಿ ಅಥವಾ ಆ ಶಾಲೆಯಲ್ಲಿನ ಪ್ರಾರಂಭಿಕ ತರಗತಿಗೆ ಶೇ 25ರಷ್ಟು ಸೀಟುಗಳನ್ನು ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳಿಗೆ ಮೀಸಲಿಡಬೇಕಿದೆ. ಲಭ್ಯವಿರುವ ಸೀಟುಗಳ ಪೈಕಿ ಶೇ 25ರಷ್ಟನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ ಉಚಿತ ಪ್ರವೇಶ ದಾಖಲಾತಿಗೆ ಅವಕಾಶ ಮಾಡಿಕೊಡುವುದು ಕಡ್ಡಾಯ.

ಸರ್ಕಾರ, ಸ್ಥಳೀಯ ಆಡಳಿತದಿಂದ ಪೂರ್ಣ ಅಥವಾ ಭಾಗಶಃ ಅನುದಾನ ಪಡೆದು ನಡೆಸುತ್ತಿರುವ ಖಾಸಗಿ ಅನುದಾನಿತ ಶಾಲೆಗಳು ಕೂಡ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಕಾಯ್ದೆಯಡಿ ಸೀಟು ಒದಗಿಸಬೇಕಿದೆ.

ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮದ ಪ್ರಕಾರ 2014–15ನೇ ಸಾಲಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವ ಶಾಲೆಗಳು ಹಲವು ಕ್ರಮಗಳನ್ನು ಅನುಸರಿಸಬೇಕಿದೆ. ಪ್ರವೇಶ ನೀಡುವಾಗ ಶಾಲೆಯಲ್ಲಿ ಪಡೆಯಲಾಗಿರುವ ಶುಲ್ಕದ ವಿವರವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕಿದೆ.

ಶುಲ್ಕದ ವಿವರದ ಅರಿವು ಮೂಡಿಸುವುದು ಶಾಲಾ ಆಡಳಿತ ಮಂಡಳಿಯ ಹೊಣೆಯಾಗಿದೆ. ಕಡ್ಡಾಯ ಶಿಕ್ಷಣದಡಿ ದಾಖಲಾಗುವ ಮಕ್ಕಳಿಂದ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ. ಶಾಲೆಯ ಇತರೇ ಮಕ್ಕಳು ಹಾಗೂ ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳ ನಡುವೆ ಯಾವುದೇ ತಾರತಮ್ಯ ಮಾಡುವಂತಿಲ್ಲ.

ಪ್ರವೇಶ ನೀಡುವ ಮೊದಲು ಮಕ್ಕಳು ಮತ್ತು ಅವರ ಪೋಷಕರಿಗೆ ಯಾವುದೇ ಬಗೆಯ ಸಂದರ್ಶನ ಸೇರಿದಂತೆ ಇತರೇ ಆಯ್ಕೆ ಪರೀಕ್ಷೆ ನಡೆಸುವಂತಿಲ್ಲ.

ಶಾಲಾ ಮಂಡಳಿಯು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕು. ವಿದ್ಯಾರ್ಹತೆ ಹೊಂದಿದ ಶಿಕ್ಷಕರನ್ನು ಸೂಕ್ತ ವೇತನ ನೀಡಿ ನೇಮಕ ಮಾಡಿಕೊಳ್ಳಬೇಕು. ಶಾಲೆಗಳಲ್ಲಿ ಅನುಮತಿ ಇಲ್ಲದೆ ಹೆಚ್ಚುವರಿ ವಿಭಾಗ ತೆರೆಯುವಂತಿಲ್ಲ.

ಮಾಧ್ಯಮ ಬದಲಾವಣೆ ಮಾಡಬಾರದು. ಶಾಲಾ ಬ್ಯಾಗ್, ನೋಟ್‌ಬುಕ್, ಸಮವಸ್ತ್ರ, ಶೂ ಮಾರಾಟದಂತಹ ವಾಣಿಜ್ಯ ಚಟುವಟಿಕೆ  ನಡೆಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಾಗಿ ಸೂಚಿಸಿದೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ₨ 3.50 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವ ಎಲ್ಲ ವರ್ಗದವರು ತಮ್ಮ ಮಕ್ಕಳಿಗೆ ಪ್ರವೇಶ ಅವಕಾಶ ಪಡೆಯಲು ಅರ್ಜಿ ಸಲ್ಲಿಸಬಹುದು. ಮಕ್ಕಳನ್ನು ಆಯ್ಕೆ ಮಾಡುವ ವೇಳೆ ವಾರ್ಷಿಕ ಆದಾಯ ₨ 1 ಲಕ್ಷಕ್ಕಿಂತ ಕಡಿಮೆ ಇರುವ ಪೋಷಕರ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು.

ಆ ಮಕ್ಕಳ ಸಂಖ್ಯೆ ಹೆಚ್ಚು ಇದ್ದರೆ ಲಾಟರಿ ಮೂಲಕವೇ ಆಯ್ಕೆ ಮಾಡಬೇಕು. ಇನ್ನು ಸೀಟುಗಳು ಲಭ್ಯವಿದ್ದರೆ ₨ 1 ರಿಂದ 3.5 ಲಕ್ಷ  ಆದಾಯವಿರುವವರನ್ನು ಪರಿಗಣಿಸಬೇಕು.

ಪ್ರತಿ ಶಾಲೆಯು ಆರ್‌ಟಿಇ ಅಡಿ ಲಭ್ಯವಿರುವ ಶೇ 25ರಷ್ಟು ಸೀಟುಗಳ ಸಂಖ್ಯೆಯನ್ನು ಪ್ರಕಟಿಸಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮವಹಿಸಬೇಕಿದೆ.

ಮಕ್ಕಳ ಪ್ರವೇಶ ನೀಡುವ ಸಂಬಂಧ ಜಿಲ್ಲೆಯ ಎಲ್ಲ ತಾಲ್ಲೂಕು, ಶಿಕ್ಷಣ ವಲಯದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ  ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಶಿಕ್ಷಣ ನಿಯಂತ್ರಣ ಮಂಡಳಿ ಸಭೆ ಕರೆದು ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಸ್ಥಳೀಯ ಜನಪ್ರತಿನಿಧಿಗಳಿಗೂ ಈ ಸಂಬಂಧ ಮಾಹಿತಿ ಒದಗಿಸಬೇಕು.

ದೂರು, ಸಮಸ್ಯೆಗಳನ್ನು ಪರಿಹರಿಸಲು ತಾಲ್ಲೂಕು ಹಂತದಲ್ಲಿಯೇ ಸಭೆ ನಡೆಸಿ ಕ್ರಮವಹಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
‘ಅರ್ಜಿ ನಮೂನೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಆಯಾ ಶಾಲೆಗಳಲ್ಲಿಯೇ ಉಚಿತವಾಗಿ ಪಡೆಯಬಹುದು. ಅರ್ಜಿ ಸ್ವೀಕರಿಸಲು ನಿರಾಕರಿಸುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಯಾವುದೇ, ಶಾಲಾ ಮಂಡಳಿಯು ಅರ್ಜಿ ತಿರಸ್ಕರಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪೋಷಕರು ದೂರು ಸಲ್ಲಿಸಬೇಕು.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ  ಉಲ್ಲಂಘಿಸುವ ಶಾಲೆಗಳ ಮಾನ್ಯತೆಯನ್ನು ಹಿಂಪಡೆಯಲಾಗುವುದು’ ಎನ್ನುತ್ತಾರೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.