ಸಂತೇಮರಹಳ್ಳಿ: ಬಸವ ವಸತಿ ಯೋಜನೆಯಡಿಯಲ್ಲಿ ಅಂಗವಿಕಲ ಮಹಿಳೆ ಕಟ್ಟಿಕೊಂಡಿದ್ದ ಸಣ್ಣದೊಂದು ಸೂರು ಕೂಡ ಈಚೆಗೆ ಸುರಿದ ಭಾರಿ ಮಳೆ ಗಾಳಿಗೆ ನೆಲಕ್ಕುರುಳಿದೆ. ಚಿಕ್ಕದೊಂದು ಸೂರಿಗೆ ಹಲವು ವರ್ಷಗಳ ಕಾಲ ಅಲೆದಾಡಿದ್ದ ಅಂಗವಿಕಲ ಮಹಿಳೆ ರೂಪಾ ಇದೀಗ ಕುಸಿದ ಮನೆಯ ಒಂದು ಭಾಗದಲ್ಲಿ ವೃದ್ಧ ತಾಯಿಯ ಜೊತೆ ದಿನ ದೂಡುತ್ತಿದ್ದಾರೆ.
ಹೊಸದಾಗಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಮರ್ಥ್ಯವಿಲ್ಲದ ಮಹಿಳೆ ಮಳೆ, ಗಾಳಿ, ಚಳಿ, ಬಿಸಿಲಿನಲ್ಲಿ ನೆರವಿನ ನಿರೀಕ್ಷೆಯಲ್ಲಿ ಹಾದಿ ನೋಡುತ್ತಿದ್ದಾರೆ. ಮನೆಯ ಮುಂಭಾಗ ಪ್ಲಾಸ್ಟಿಕ್ ಚೀಲ, ಟಾರ್ಪಲ್ ಕಟ್ಟಿಕೊಂಡು ಆಶ್ರಯ ಪಡೆದಿದ್ದಾರೆ. ಮಳೆ ಬಂದರೆ ಅಕ್ಕಪಕ್ಕದ ಮನೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಈ ಕುಟುಂಬದ್ದು.
ಮಳೆಗಾಳಿಗೆ ಉಳಿದಿರುವ ಗೋಡೆಗಳೂ ಬೀಳುವ ಹಂತದಲ್ಲಿದ್ದು ಪ್ರಾಣ ಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಬಡ ಅಂಗವಿಕಲ ಮಹಿಳೆಯ ಕುಟುಂಬಕ್ಕೊಂದು ಸೂರಿನ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆತ್ರಹಿಸಿದ್ದಾರೆ.
ಸಿಗದ ಪರಿಹಾರ: ಮನೆ ಕುಸಿದು 2 ತಿಂಗಳಾದರೂ ಇದುವರೆಗೂ ಪರಿಹಾರ ದೊರೆತಿಲ್ಲ. ಮನೆ ಕುಸಿದ ಸಂದರ್ಭ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ಪ್ರಕೃತಿ ವಿಕೋಪದಡಿ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿ ಹೋಗಿದ್ದಾರೆ. ಆದರೆ, ಇಂದಿಗೂ ಅಂಗವಿಕಲ ಮಹಿಳೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ.
ತಾಯಿ ಮತ್ತು ಮಗಳು ವೃದ್ಧಾಪ್ಯ ಹಾಗೂ ಅಂಗವಿಕಲರಿಗೆ ನೀಡುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದು ಮತ್ತೆ ಹೊಸದಾಗಿ ಮನೆಕಟ್ಟಿಕೊಳ್ಳುವ ಸಾಮರ್ಥ್ಯ ಇಲ್ಲದಂತಾಗಿದೆ.
ಆರು ತಿಂಗಳಿಗೆ ಕುಸಿಯಿತು ಮನೆ: ಉಮ್ಮತ್ತೂರು ಗ್ರಾಮಪಂಚಾಯಿತಿ ವತಿಯಿಂದ ಬಸವ ವಸತಿ ಯೋಜನೆಯಡಿ 2017–18ನೇ ಸಾಲಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಮಹಿಳೆಗೆ ಸರ್ಕಾರದಿಂದ ₹ 1.31 ಲಕ್ಷ ಅನುದಾನ ಮಂಜೂರಾಯಿತು. ಈ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳದೆ ನೆರವಿನ ನಿರೀಕ್ಷೆಯಲ್ಲಿದ್ದ ಮಹಿಳೆಯೊಬ್ಬರಿಗೆ ಗುತ್ತಿಗೆದಾರರೊಬ್ಬರು ಮನೆ ನಿರ್ಮಿಸಿಕೊಟ್ಟರು.
ಮನೆ ನಿರ್ಮಾಣವಾಗಿ 6 ತಿಂಗಳು ಕಳೆಯುವಷ್ವರಲ್ಲಿ ಗಾಳಿ ಮಳೆಗೆ ಮನೆಯ ಮುಂದಿನ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಮೇಲ್ಛಾವಣಿ ಹಾರಿ ಹೋಗಿದೆ. ಕಳಪೆ ಕಾಮಗಾರಿ ಮನೆ ಕುಸಿತಕ್ಕೆ ಕಾರಣ ಎಂದು ಗ್ರಾಮಸ್ಥರು ದೂರುತ್ತಾರೆ.
ಗ್ರಾಮಪಂಚಾಯಿತಿಯಿಂದ ಪರಿಹಾರ ನೀಡಲು ಬರುವುದಿಲ್ಲ. ಕಂದಾಯ ಇಲಾಖೆ ಗಮನ ಹರಿಸಿ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಬೇಕು–ಫ್ರಭು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡಲು ವರದಿ ಸಲ್ಲಿಸಲಾಗಿದೆ. ಪರಿಹಾರ ಬರುವ ಹಂತದಲ್ಲಿದೆ.–ಅಂಜಲಿ ಗ್ರಾಮ ಲೆಕ್ಕಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.