ADVERTISEMENT

ಕಾರ್ಯಾದೇಶ ನೀಡಲು ಲಂಚ: ಆರೋಗ್ಯ ಇಲಾಖೆಯ ಎಫ್‌ಡಿಎ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 12:19 IST
Last Updated 26 ಜುಲೈ 2022, 12:19 IST
ಮಹೇಶ್‌
ಮಹೇಶ್‌   

ಚಾಮರಾಜನಗರ: ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗೆ ಕಾರ್ಯಾದೇಶ (ವರ್ಕ್‌ ಆರ್ಡರ್‌) ಹಾಗೂ ವೇತನ ಪಾವತಿ ಬಿಲ್‌ (ಸ್ಯಾಲರಿ ಕ್ರೆಡಿಟ್‌ ಬಿಲ್‌) ನೀಡಲು ₹3,000 ಲಂಚ ಪಡೆಯುತ್ತಿದ್ದ ಆರೋಗ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರೊಬ್ಬರು (ಎಫ್‌ಡಿಎ) ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಬಲೆಗೆ ಮಂಗಳವಾರ ಬಿದ್ದಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಆರೋಗ್ಯ ಇಲಾಖೆ ಕಚೇರಿಯಲ್ಲಿ ಕೇಸ್‌ವರ್ಕರ್‌ ಆಗಿರುವ ಮಹೇಶ್‌ ಎಸಿಬಿ ಬಲೆಗೆ ಬಿದ್ದಿರುವ ಎಫ್‌ಡಿಎ.

ಕೊಳ್ಳೇಗಾಲ ತಾಲ್ಲೂಕು ಹಂಪಾಪುರ ಗ್ರಾಮದ ವ್ಯಕ್ತಿಯೊಬ್ಬರು (ದೂರುದಾರ) ಉಡುಪಿಯ ಸಾಯಿ ಸೆಕ್ಯೂರಿಟಿಸ್ ಸಂಸ್ಥೆಯ ಮೂಲಕ ಹನೂರು ತಾಲ್ಲೂಕು ಪಿ.ಜಿ.ಪಾಳ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಹೊರಗುತ್ತಿಗೆ ಆಧಾರದಲ್ಲಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಸಂಸ್ಥೆಯು ನೇಮಕ ಮಾಡಿಕೊಂಡಿರುವ ಬಗ್ಗೆ ಕಾರ್ಯಾದೇಶ ಹಾಗೂ ವೇತನ ಪಾವತಿ ಬಿಲ್‌ ಗಳನ್ನು ಪಿ.ಜಿ.ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲು ಅವರು ಇದೇ 19ರಂದು ಮಹೇಶ್‌ ಅವರನ್ನು ಭೇಟಿ ಮಾಡಿದ್ದರು. 21ರಂದು ಕರೆ ಮಾಡಿ ವಿಚಾರಿಸಿದಾಗ, ಮಹೇಶ್‌ ಅವರು ₹5,000 ಕೊಡುವಂತೆ ಬೇಡಿಕೆ ಇಟ್ಟಿದ್ದರು.

ಸೋಮವಾರ (ಜುಲೈ 25) ಆರೋಗ್ಯ ಇಲಾಖೆ ಕಚೇರಿಯಲ್ಲಿ ಮಹೇಶ್‌ ಅವರನ್ನು ಸಂಪರ್ಕಿಸಿದಾಗ ₹3,000 ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ‌ದೂರುದಾರ ಮಂಗಳವಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ಮಂಗಳವಾರ ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಮಹೇಶ್‌ ಅವರು ದೂರುದಾರರಿಂದ ₹3,000 ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅವರನ್ನು ಬಂಧಿಸಿ ನಗದು ಹಣವನ್ನು ವಶಕ್ಕೆ ಪಡೆದುಕೊಂಡರು.

ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಸಿಬಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.