ADVERTISEMENT

ಆಕಸ್ಮಿಕ ಬೆಂಕಿ: 8 ಅಂಗಡಿಗಳು ಭಸ್ಮ

ಬಿಳಿಗಿರಿಬೆಟ್ಟದ ರಥದ ಬೀದಯಲ್ಲಿ ತಡರಾತ್ರಿ ಅಗ್ನಿ ಅವಘಡ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:33 IST
Last Updated 10 ಜನವರಿ 2026, 6:33 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಥದ ಬೀದಿಯಲ್ಲಿ ಅಂಗಡಿಗಳು ಹೊತ್ತಿ ಉರಿದವು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಥದ ಬೀದಿಯಲ್ಲಿ ಅಂಗಡಿಗಳು ಹೊತ್ತಿ ಉರಿದವು   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಥದ ಬೀದಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 8 ಅಂಗಡಿಗಳು ಭಸ್ಮವಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಬಿಳಿಗಿರಿಬೆಟ್ಟ ಗ್ರಾಮದ ನಾಯಕ ಸಮುದಾಯಕ್ಕೆ ಸೇರಿದ ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿವೆ. ಸ್ವಾಮಿ, ಭಾಗ್ಯಮ್ಮ, ಕಾರ್ತಿಕ ಪ್ರಿಯ, ಸುಮಾ, ಶ್ರೀನಿವಾಸ್, ಮೀನಾಕ್ಷಿ ಹಾಗೂ ಗೌತಮ್ ಅವರಿಗೆ ಸೇರಿದ 7 ಅಂಗಡಿಗಳು ಸುಟ್ಟುಹೋಗಿವೆ. 1 ಅಂಗಡಿಗೆ ಭಾಗಶಃ ಹಾನಿಯಾಗಿದ್ದು, ₹25 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಸ್ತು ಮತ್ತು ಪೆಟ್ಟಿಗೆ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ.

‘ಮಧ್ಯರಾತ್ರಿ 2ರ ಸುಮಾರಿಗೆ ಅಂಗಡಿಗಳಿಗೆ ಬೆಂಕಿ ತಗುಲಿದೆ. ಈ ಸಮಯದಲ್ಲಿ ಬಸ್ ಸಿಬ್ಬಂದಿ ಎಚ್ಚರಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ 3 ಗಂಟೆ ಸುಮಾರಿಗೆ ಅಂಗಡಿ ಮಾಲೀಕರು ಬರುವ ವೇಳೆಗೆ ಅಂಗಡಿಗಳು ಹೊತ್ತಿ ಉರಿದವು. ಮುಂಜಾನೆ ಅಗ್ನಿ ಶಾಮಕ ದಳ ಬರುವಷ್ಟರಲ್ಲಿ ಅಂಗಡಿ ಸಾಮಾನು ಸಮೇತ ಸುಟ್ಟು ಕರಕಲಾದವು’ ಎಂದು ಬೆಟ್ಟದ ವ್ಯಾಪಾರಿ ನಾಗೇಂದ್ರ ಅಳಲು ತೋಡಿಕೊಂಡರು.

ADVERTISEMENT

ಕೂಲರ್ ಸ್ಫೋಟಕ್ಕೆ ಹರಡಿದ ಬೆಂಕಿ?: ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಸ್ಪಷ್ಟ ಕಾರಣ ಪತ್ತೆಯಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿಲ್ಲ. ಆದರೆ. ಅಂಗಡಿ ಹಿಂಭಾಗ ಪಾಳು ಬಿದ್ದ ಮನೆ ಮತ್ತು ಸುತ್ತಮುತ್ತಲ ಸ್ಥಳದಲ್ಲಿ ಚಳಿ ಕಾಯಿಸಲು ಹಾಕಿದ ಬೆಂಕಿ ಕ್ರಮೇಣ ಕಾಗದ, ಒಣ ತ್ಯಾಜ್ಯಕ್ಕೆ ಹರಡಿ ಅಂಗಡಿಗೆ ಹರಡಿರಬಹುದು. ಅಂಗಡಿಗಳಲ್ಲಿ ಸಂಗ್ರಹಿಸಿದ್ದ ಮಾರಾಟ ವಸ್ತುಗಳಿಗೆ ಸ್ಪರ್ಶಿಸಿದೆ. ನಂತರ ಕೂಲರ್ ಸ್ಫೂಟವಾಗಿ ಬೆಂಕಿ ವ್ಯಾಪಿಸಿದೆ. ಕೆಲವು ಅಂಗಡಿಗಳಲ್ಲಿ ಇಟ್ಟಿದ್ದ ಸಿಲಿಂಡರ್ ಸ್ಫೋಟವಾಗಿಲ್ಲ. ಆದರೆ, ಗ್ಯಾಸ್ ಸೋರಿಕೆ ಆಗಿರುವ ಬಗ್ಗೆ ಅನುಮಾನಗಳಿವೆ’ ಎಂದು ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ತಹಶೀಲ್ದಾರ್ ಎಸ್.ಎನ್.ನಯನ. ಎಸ್ಐ ಆಕಾಶ್, ಸರ್ಕಲ್ ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ ಡಿವೈಎಸ್ಪಿ ಧರ್ಮೇಂದ್ರ, ಕೆಇಬಿ ಎಇಇ ಲಿಂಗರಾಜು, ಪಿಡಿಇ ಶಶಿಕಲಾ ಇದ್ದರು.

‘ಸಂಕ್ರಾಂತಿ ಚಿಕ್ಕ ಜಾತ್ರೆ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ತಿನಿಸು, ತಂಪು ಪಾನೀಯ ಹಾಗೂ ಆಂಟಿಕ್ ವಸ್ತುಗಳನ್ನು ಶೇಖರಿಸಿಟ್ಟಿದ್ದೆವು. ಆದರೆ, ಬೆಂಕಿ ಅನಾಹುತದಿಂದ ₹4 ಲಕ್ಷ ಮೌಲ್ಯದ ವಸ್ತು ಸುಟ್ಟು ನಷ್ಟವಾಗಿದೆ’ ಎಂದು ಸಂತ್ರಸ್ತೆ ಸುಮಾ ಅಳಲು ತೋಡಿಕೊಂಡರು.

ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಥದ ಬೀದಿಯಲ್ಲಿ ಅಗ್ನಿ ಆಕಸ್ಮಿಕದಿಂದ ಭಸ್ಮವಾದ ಅಂಗಡಿಗಳನ್ನು ಪೊಲೀಸರು ಪರಿಶೀಲಿಸಿ ಮಾಲೀಕರಿಂದ ಮಾಹಿತಿ ಸಂಗ್ರಹಿಸಿದರು
ಅಂಗಡಿಗಳಲ್ಲಿ ಸಿಡಿಯದೆ ಉಳಿದ ಗ್ಯಾಸ್ ಸಿಲಿಂಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.