ADVERTISEMENT

ಬಿಲ್ವಿದ್ದೆ, ಕತ್ತಿವರಸೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಸಂತೇಮರಹಳ್ಳಿಯಲ್ಲಿರುವ ಕ್ರೀಡಾ ವಸತಿ ಶಾಲೆ, ಸಚಿವರಿಂದ ಸನ್ಮಾನ

ಮಹದೇವ್ ಹೆಗ್ಗವಾಡಿಪುರ
Published 19 ಆಗಸ್ಟ್ 2022, 16:04 IST
Last Updated 19 ಆಗಸ್ಟ್ 2022, 16:04 IST
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಲ್ವಿದ್ಯೆ, ಕತ್ತಿ ವರಸೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಇತರು ಗಣ್ಯರು ಸನ್ಮಾನ ಮಾಡಿದ ಕ್ಷಣ
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಲ್ವಿದ್ಯೆ, ಕತ್ತಿ ವರಸೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಇತರು ಗಣ್ಯರು ಸನ್ಮಾನ ಮಾಡಿದ ಕ್ಷಣ   

ಸಂತೇಮರಹಳ್ಳಿ:ಇಲ್ಲಿನ ಬಿಲ್ವಿದ್ಯೆ ಹಾಗೂ ಕತ್ತಿವರಸೆ ವಸತಿ ಶಾಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದು, ವರ್ಷದ ಅವಧಿಯಲ್ಲಿ 10 ವಿದ್ಯಾರ್ಥಿಗಳು ವಿವಿ ಮಟ್ಟ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಇದೇ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ 10 ಕ್ರೀಡಾಪಟುಗಳನ್ನು ಸನ್ಮಾನಿಸಿದ್ದಾರೆ.

ಈ ವಸತಿ ಶಾಲೆಯಲ್ಲಿ 42 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ 10 ವಿದ್ಯಾರ್ಥಿಗಳು ಬಿಲ್ವಿದ್ಯೆ ಹಾಗೂ ಕತ್ತಿ ವರಸೆ ಕ್ರೀಡೆಯಲ್ಲಿ ವಿಶ್ವ ವಿದ್ಯಾಲಯ ಚಾಂಪಿಯನ್‌ಷಿಪ್‌ನಿಂದ ಹಿಡಿದು ಖೇಲೋ ವಿಶ್ವವಿದ್ಯಾಲಯದವರೆಗೂ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ADVERTISEMENT

2021ರ ಡಿಸೆಂಬರ್‌ನಲ್ಲಿ ಹರಿಯಾಣದ ಸೋನೆಪತ್‌ನಲ್ಲಿ ನಡೆದ 29ನೇ ಜ್ಯೂನಿಯರ್ ರಾಷ್ಟ್ರೀಯ ಕತ್ತಿ ವರಸೆ ಚಾಂಪಿಯನ್‌ಷಿಪ್‌ನಲ್ಲಿ ನಿಖಿಲ್ ಹಾಗೂ ಪವನ್ ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ. ಅದೇ ವರ್ಷ ನಡೆದ 17 ವರ್ಷ ಒಳಪಟ್ಟ ರಾಜ್ಯ ಮಟ್ಟದ ಕತ್ತಿ ವರಸೆ ಚಾಂಪಿಯನ್‌ಷಿಪ್‌ನಲ್ಲಿ ಮನುನಾಯಕ್, ಕೀರ್ತಿನಾಯಕ್, ನಿಂಗರಾಜು, ಧನುಷ್ ಹಾಗೂ ಸಚಿನ್ ಕ್ರಮವಾಗಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ವಿಶ್ವ ವಿದ್ಯಾಲಯ ಕತ್ತಿ ವರಸೆ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದ ಕೆ.ಆರ್.ಸಚಿನ್ ಕಂಚಿನ ಪದಕ ಜಯಿಸಿದ್ದಾರೆ.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ 41ನೇ ಎನ್‌ಟಿಪಿಸಿ ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕೆ.ಎಸ್.ಸುಜಿತ್, ಪ್ರವೀಣ್ ಮತ್ತು ಅರುಣ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಪಂಜಾಬಿನ ಅಮೃತಸರದಲ್ಲಿ ಅಂತರ ವಿಶ್ವವಿದ್ಯಾಲಯ ಖೇಲೋ ಇಂಡಿಯಾ ಚಾಪಿಯನ್ ಷಿಪ್‌ನಲ್ಲಿ ನಿಖಿಲ್, ಗಜಾನಂದ್, ಸಚಿನ್ ಹಾಗೂ ದರ್ಶನ್‌ ಅವರು ಮೈಸೂರು ವಿವಿಯನ್ನು ಪ್ರತಿನಿಧಿಸಿದ್ದರು. ಈ ಪೈಕಿ ಸಚಿನ್ ತಂಡ ಅಲ್ಲದೇ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಈ ವಸತಿ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಮನೋಜ್ಗುಜರಾತ್‌ನ ಔರಂಗಬಾದ್‌ನ ರಾಷ್ಟ್ರೀಯ ಎಕ್ಸೆಲೆನ್ಸಿ ಕತ್ತಿ ವರಸೆ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಗುರಿ’

‘ಪ್ರತಿವರ್ಷವು ಇಲ್ಲಿನ ವಿದ್ಯಾರ್ಥಿಗಳು ದೇಶದ ವಿವಿಧ ಮೂಲೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಾರೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಯುವಜನ ಸಬಲೀಕರಣದ ಜಿಲ್ಲಾ ಸಹಾಯಕ ನಿರ್ದೇಶಕಿ ಅನಿತಾ ಸಹಕಾರದಿಂದ ನಮ್ಮ ಕ್ರೀಡಾಪಟುಗಳಿಗೆ ಸನ್ಮಾನ ದೊರಕಿದೆ. ಇದರಿಂದ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೇರಣೆಯಾಗಲಿದೆ’ ಎಂದು ಶಾಲೆಯ ತರಬೇತುದಾರರು ಹೇಳಿದರು.

‘ಈಗಾಗಲೇ ನಮ್ಮ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ಅವರಿಗೆ ನಿರಂತರವಾದ ತರಬೇತಿ ನೀಡಲಾಗುತ್ತಿದೆ. ನಮ್ಮ ಹುಡುಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಬೇಕೆಂಬ ಆಸೆ ಇದೆ. ಅದಕ್ಕಾಗಿ ನಿರಂತರವಾಗಿ ಶ್ರಮ ಹಾಕಲಾಗುತ್ತಿದೆ’ ಎಂದು ತರಬೇತುದಾರ ಲೋಹಿತ್ ‘ಪ್ರಜಾವಾಣಿ’ಗೆ ತಿಳಿಸಿದರು.

----

ವಸತಿ ಶಾಲೆಯಲ್ಲಿ 42 ವಿದ್ಯಾರ್ಥಿಗಳಿದ್ದಾರೆ. ಉತ್ತಮ ತರಬೇತಿ ನೀಡಲಾಗುತ್ತಿದ್ದು, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ
ಆರ್‌.ಅನಿತಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.