
ಕೊಳ್ಳೇಗಾಲ: ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಕ್ರಿಯಾಶೀಲ ಚಟುವಟಿಕೆಗಳು ಹಾಗೂ ಫಲಿತಾಂಶ ಸುಧಾರಣೆಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ರೂಪಿಸುವಲ್ಲಿ ಆದರ್ಶ ವಿದ್ಯಾಲಯದ ಪರಿಶ್ರಮ ಅನನ್ಯ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಹೇಳಿದರು.
ನಗರದ ಮುಡಿಗುಂಡದ ಪಿ.ಎಂ.ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶಾಲೆಯ 14ನೇ ವಾರ್ಷಿಕೋತ್ಸವ ಹಾಗೂ ಆದರ್ಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಪೈಪೋಟಿಯಿದ್ದರೂ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಕಳೆದ 14 ವರ್ಷಗಳಿಂದ ಆದರ್ಶ ವಿದ್ಯಾಲಯವು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಗಮನಾರ್ಹ ಸಾಧನೆ ಮೆರೆದಿದೆ. ಮಕ್ಕಳ ಶೈಕ್ಷಣಿಕ ಅಭ್ಯಾಸದಲ್ಲಿ ನಿರಂತರ ಸುಧಾರಣೆ ತರುವ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಮಾತನಾಡಿ, ಉತ್ತಮ ಕಲಿಕಾ ಪರಿಸರದೊಂದಿಗೆ ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ಛಲದಿಂದಾಗಿ ಜಿಲ್ಲೆಯಲ್ಲಿ ಆದರ್ಶ ವಿದ್ಯಾಲಯಕ್ಕೆ ವಿಶೇಷ ಮಾನ್ಯತೆ ಸಿಕ್ಕಂತಾಗಿದೆ. ಶೇ 100ರಷ್ಟು ಫಲಿತಾಂಶ ಸಾಧಿಸುವ ಜೊತೆಗೆ ವಿಭಾಗ ಮಟ್ಟದಲ್ಲೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಮಕ್ಕಳ ಭವಿಷ್ಯವನ್ನು ಕಟ್ಟುವ ಇಂತಹ ಕನಸುಗಳು ಸದಾ ಮುಂದುವರಿಯಲಿ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ ಆರ್. ಮಾತನಾಡಿ, ಉತ್ತಮ ಕಲಿಕೆಯ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಪ್ರಜ್ಞೆ ಬೆಳೆಸುವತ್ತ ಶಿಕ್ಷಕರು ಪರಿಶ್ರಮ ವಹಿಸುತ್ತಿದ್ದು, ಉತ್ತಮ ಫಲಿತಾಂಶ ಪಡೆಯುವ ಜೊತೆಗೆ ಮಕ್ಕಳಲ್ಲಿ ಆದರ್ಶ ಚಿಂತನೆಗಳನ್ನು ರೂಢಿಸಲಾಗುತ್ತಿದೆ ಎಂದರು.
ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಎಸ್.ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷೆ ವನಿತಾ, ಸದಸ್ಯ ಸುರೇಶ, ಪ್ರಕಾಶ, ರಾಜೇಶ ನಾಯ್ಕ್, ಅಂಥೋಣಿ ರಾಜು, ಗಿರೀಶ್, ನವೀನ್‌ರಾಜ್, ವೀರೇಂದ್ರ, ಸೋಮಣ್ಣ, ಮಲ್ಲು, ಭಾರತಿ, ಮಮತ ಪ್ರಿಯ, ಕವಿತ, ಲತಾ, ಪ್ರಮೋದಕುಮಾರಿ, ನಂದಿನಿ, ಜ್ಯೋತಿ, ರೂಪಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.