
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಹೊಸಪೋಡು ಸೋಲಿಗ ನಿವಾಸಿಗಳು ಶನಿವಾರ ನ.17ರಂದು ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸದಿರುವ ನಿರ್ಣಯ ಕೈಗೊಂಡರು
ಯಳಂದೂರು: ಜಿಲ್ಲೆಯ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಓದುತ್ತಿರುವ ಆದಿವಾಸಿ ಸಮುದಾಯಗಳಿಗೆ ಸೇರಿದ ಮಕ್ಕಳು ಆಧಾರ್ ಕಾರ್ಡ್ ಇಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆದಿವಾಸಿ ಹಿತರಕ್ಷಣ ಸಮಿತಿ ದೂರಿರುವುದು ವಾಸ್ತವಾಂಶಕ್ಕೆ ವಿರುದ್ಧವಾಗಿದ್ದು ನ.17ರಂದು ಚಾಮರಾಜನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಎದುರು ಆದಿವಾಸಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡುವುದಿಲ್ಲ ಎಂದು ಯಳಂದೂರು ತಾಲ್ಲುಕು ಸೋಲಿಗ ಅಭಿವೃದ್ಧಿ ಸಂಘ ತಿಳಿಸಿದೆ.
ಆಶ್ರಮ ಶಾಲೆಯ ಶೇ90 ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಸಿಕ್ಕಿದೆ. ಉಳಿದ ಮಕ್ಕಳಿಗೆ ಜನನ ಪ್ರಮಾಣದ ದಾಖಲೆ ಅಗತ್ಯವಿದ್ದು, ಲಭ್ಯವಾದ ಕೂಡಲೇ ಆಯಾ ತಾಲ್ಲೂಕು ಅಧಿಕಾರಿಗಳು ಆಧಾರ್ ಕಾರ್ಡ್ ಮಾಡಿಸಿಕೊಡಲಿದ್ದಾರೆ. ಆದರೆ, ಆದಿವಾಸಿ ಹಿತರಕ್ಷಣ ಸಮಿತಿ ಸ್ಥಳೀಯ ಸಂಘ ಮತ್ತು ಮುಖಂಡರನ್ನು ಸಂಪರ್ಕಿಸದೆ ಏಕ ಪಕ್ಷೀಯವಾಗಿ ಸಮಿತಿ ಅಧ್ಯಕ್ಷ ನಾಗೇಂದ್ರ ಗಾಣಿಗಮಂಗಲ ಉಪವಾಸ ಸತ್ಯಾಗ್ರಹ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ, ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ತಾಲ್ಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ಬೇದಮ್ಮ ತಿಳಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ಹೊಸಪೋಡು ಸೋಲಿಗ ನಿವಾಸಿಗಳು ಶನಿವಾರ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸದಿರಲು ಸಭೆಯಲ್ಲಿ ನಿರ್ಣಯ ಕೈಗೊಂಡರು. ಈ ಸಂದರ್ಭ ಮುಖಂಡರಾದ ನಂಜೇಗೌಡ, ರಂಗಸ್ವಾಮಿ, ಕಲ್ಲಿಮಾದೇವ, ವಿರೇಗೌಡ, ಸಿ.ಡಿ.ಮಾದೇವ, ಸಿದ್ದೇಗೌಡ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.