ADVERTISEMENT

ಮುಂಗಾರು ಕೃಪೆ: ಉತ್ತಮ ಇಳುವರಿ ನಿರೀಕ್ಷೆ

ಜಿಲ್ಲೆಯಲ್ಲಿ ಚೆನ್ನಾಗಿ ಸುರಿಯುತ್ತಿದೆ ವರ್ಷಧಾರೆ, ವೇಗ ಪಡೆದ ಬಿತ್ತನೆ ಕಾರ್ಯ

ಸೂರ್ಯನಾರಾಯಣ ವಿ
Published 14 ಆಗಸ್ಟ್ 2021, 3:23 IST
Last Updated 14 ಆಗಸ್ಟ್ 2021, 3:23 IST
ಕೊಳ್ಳೇಗಾಲ ಸಮೀಪ ರೈತರೊಬ್ಬರು ಭತ್ತ ನಾಟಿಗಾಗಿ ಗದ್ದೆಯನ್ನು ಉಳುಮೆ ಮಾಡುತ್ತಿರುವುದು 
ಕೊಳ್ಳೇಗಾಲ ಸಮೀಪ ರೈತರೊಬ್ಬರು ಭತ್ತ ನಾಟಿಗಾಗಿ ಗದ್ದೆಯನ್ನು ಉಳುಮೆ ಮಾಡುತ್ತಿರುವುದು    

ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯಲ್ಲಿ ಮುಂಗಾರುಪೂರ್ವ ಅವಧಿಯಲ್ಲಿ ಮುನಿಸಿದ್ದ ವರುಣ, ಮುಂಗಾರು ಅವಧಿಯಲ್ಲಿ ಜಿಲ್ಲೆಯ ರೈತರ ಮೇಲೆ ಕೃಪೆ ತೋರಿದ್ದಾನೆ. ಪರಿಣಾಮ, ಮುಂಗಾರು ಅವಧಿಯಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.

ಮೇ ಅಂತ್ಯ– ಜೂನ್‌ ತಿಂಗಳ ಆರಂಭದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆರಂಭವಾಗಿರಲಿಲ್ಲ. ಎಲ್ಲಿ ಮತ್ತೆ ಬರ ಪರಿಸ್ಥಿತಿ ನಿರ್ಮಾಣವಾಗಲಿದೆಯೋ ಎಂಬ ಆತಂಕ ರೈತರನ್ನು ಕಾಡಿತ್ತು. ಆದರೆ, ಜೂನ್‌ ಕೊನೆಯ ವಾರದಿಂದ ನಂತರ ಜುಲೈ ತಿಂಗಳಲ್ಲಿ ಸುರಿದ ವರ್ಷಧಾರೆ ರೈತನ ಮೊಗದಲ್ಲಿ ಮಂದಹಾಸ ಅರಳುವಂತೆ ಮಾಡಿದೆ.

ಜುಲೈ ತಿಂಗಳ ನಂತರ ಬಿತ್ತನೆ ಕಾರ್ಯ ಮತ್ತಷ್ಟು ಬಿರುಸುಕೊಂಡಿದೆ. ಕೃಷಿ ಇಲಾಖೆ ಈ ಬಾರಿಯ ಮುಂಗಾರು ಅವಧಿಗೆ 1.26 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹಾಕಿಕೊಂಡಿದ್ದು, 78,329 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 61.79ರಷ್ಟು ಬಿತ್ತನೆ ಪೂರ್ಣಗೊಂಡಿದೆ. ರಾಗಿ, ಭತ್ತ ಜೋಳ ಮುಸುಕಿನ ಜೋಳ ಬಿತ್ತನೆ ಇತ್ತೀಚೆಗಷ್ಟೆ ಆರಂಭವಾಗಿದ್ದು, ಶೀಘ್ರದಲ್ಲಿ ಗುರಿ ತಲುಪುವ ವಿಶ್ವಾಸದಲ್ಲಿ ಅಧಿಕಾರಿಗಳಿದ್ದಾರೆ.

ADVERTISEMENT

ಇದೇ 20ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ‌ಇದುವರೆಗೆ ಬಿತ್ತನೆಯಾಗಿರುವ ಬೆಳೆ ಚೆನ್ನಾಗಿ ಬಂದಿದ್ದು, ಈ ಬಾರಿ ಉತ್ತಮ ಇಳುವರಿ ಸಿಗುವ ನಿರೀಕ್ಷೆಯಲ್ಲಿ ರೈತರು ಹಾಗೂ ಅಧಿಕಾರಿಗಳು ಇದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆ: ಈ ಬಾರಿ ಮುಂಗಾರು ಅವಧಿಯಲ್ಲಿ ಅಂದರೆ, ಜೂನ್‌ 1ರಿಂದ ಆಗಸ್ಟ್‌ 13ರವರೆಗೆ ವಾಡಿಕೆಗಿಂತ ಶೇ 25ರಷ್ಟು ಹೆಚ್ಚು ಮಳೆಯಾಗಿದೆ. ಎರಡೂವರೆ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 14.25 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ. ಈ ಬಾರಿ 18.4 ಸೆಂ.ಮೀ ಮಳೆ ಬಿದ್ದಿದೆ.

ಸಾಮಾನ್ಯವಾಗಿ ಹನೂರು ತಾಲ್ಲೂಕಿನಲ್ಲಿ ಕಡಿಮೆ ಮಳೆಯಾಗುತ್ತದೆ. ಈ ವರ್ಷ ಅಲ್ಲೂ ಶೇ 32ರಷ್ಟು ಹೆಚ್ಚು ಮಳೆಯಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 68ರಷ್ಟು ಜಾಸ್ತಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 58, ಕೊಳ್ಳೇಗಾಲದಲ್ಲಿ ಶೇ 11 ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಶೇ 19ರಷ್ಟು ಹೆಚ್ಚು ಮಳೆ ಸುರಿದಿದೆ.

ಕೃಷಿ ಚಟುವಟಿಕೆಗಳ ಸ್ಥಿತಿಗತಿಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು, ‘ನಮ್ಮಲ್ಲಿ ಮುಂಗಾರು ಪೂರ್ವ ಅವಧಿಯಲ್ಲಿ ಕಡಿಮೆ ಮಳೆಯಾಗಿದ್ದರಿಂದ, ಮಳೆಯಾಶ್ರಿತ ರೈತರಿಗೆ ತೊಂದರೆಯಾಯಿತು. ಇಳುವರಿ ಚೆನ್ನಾಗಿ ಬರಲಿಲ್ಲ. ಮುಂಗಾರು ಅವಧಿಯಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ವೇಗ ಪಡೆದಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.

‘ಜೂನ್‌ ತಿಂಗಳಲ್ಲಿ ಸ್ವಲ್ಪ ಕಡಿಮೆ ಮಳೆಯಾಗಿತ್ತು. ಆದರೆ, ಜುಲೈ ತಿಂಗಳಲ್ಲಿ ಚೆನ್ನಾಗಿ ಮಳೆ ಬಿದ್ದಿದ್ದರಿಂದ ಸಮಸ್ಯೆಯಾಗಿಲ್ಲ. ಆಗಸ್ಟ್‌ನ ಮೊದಲ 13 ದಿನಗಳಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಕಡಿಮೆಯಾಗಿದೆ. ಇದೇ 20ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ಇದುವರೆಗೆ ಮಳೆಯಿಂದಾಗಿ ಯಾವ ರೈತರಿಗೂ ಬೆಳೆಹಾನಿಯಾಗಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಿಂಗಳ ಮೊದಲ ಸೋಮವಾರ ತರಬೇತಿ

ಈ ಮಧ್ಯೆ, ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾ ಎಲ್ಲ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ತ‌ಜ್ಞರು ಕೃಷಿ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

‘ಉತ್ತಮ ಇಳುವರಿ ತೆಗೆಯುವ ವಿಧಾನ, ರಸಗೊಬ್ಬರ, ಕೀಟನಾಶಕಗಳ ಬಳಕೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ಅಲ್ಲಿ ತಜ್ಞರು ತಿಳಿಸಿಕೊಡುತ್ತಾರೆ ಎಂದು ಚಂದ್ರಕಲಾ ಅವರು ಹೇಳಿದರು.

‘ಈ ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಕೃಷಿಗೆ ಪೂರಕವಾದ ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸುತ್ತಾರೆ. ರೈತರು ಸುಲಭವಾಗಿ ಅವರೊಂದಿಗೆ ಸಂವಹನ ನಡೆಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.