
ಚಾಮರಾಜನಗರ: ‘ಎಐ ತಂತ್ರಜ್ಞಾನ (ಕೃತಕ ಬುದ್ಧಿಮತ್ತೆ) ಹಾಗೂ ಥರ್ಮಲ್ ಡ್ರೋನ್‌ನಂತಹ ಉಪಕರಣಗಳ ಸಹಾಯದಿಂದ ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ತಡೆದು ಮಾನವ–ಪ್ರಾಣಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಹೇಳಿದರು.
ಮಂಗಳವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಅರಣ್ಯದೊಳಗೆ ಅಲ್ಲಲ್ಲಿ ಅಳವಡಿಸಿರುವ ಎಐ ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳು ಹಾಗೂ ಥರ್ಮಲ್ ಡ್ರೋನ್ ಕ್ಯಾಮೆರಾಗಳು ಪ್ರಾಣಿಗಳ ಚಲನವನಗಳ ಮೇಲೆ ನಿಗಾ ಇರಿಸಿವೆ.
ಹುಲಿ, ಆನೆ ಸಹಿತ ಕಾಡುಪ್ರಾಣಿಗಳು ಕಾಡುಬಿಟ್ಟು ನಾಡಿನತ್ತ ನುಗ್ಗಲು ಯತ್ನಿಸಿದರೆ ಕೂಡಲೇ ಕಮಾಂಡ್ ಸೆಂಟರ್‌ಗೆ ಪ್ರಾಣಿಗಳ ಚಿತ್ರಸಹಿತ ಸ್ಥಳದ ಮಾಹಿತಿ ರವಾನೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಪ್ರಾಣಿಗಳನ್ನು ಮತ್ತೆ ಕಾಡಿನೊಳಗೆ ಓಡಿಸಲಿದ್ದಾರೆ. ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದ ಮಾನವ ಶ್ರಮ ತಗ್ಗಿದೆ ಎಂದರು.
ಕಾಡುಬಿಟ್ಟು ನಾಡಿನತ್ತ ನುಗ್ಗದಂತೆ ಸಾಂಪ್ರದಾಯಿಕ ವಿಧಾನಗಳಾದ ಸೋಲಾರ್ ತಡೆಬೇಲಿ, ರೈಲ್ವೆ ಬ್ಯಾರಿಕೇಡ್, ತಡೆ ಗೋಡೆ, ಗುಂಡಿಗಳನ್ನು ತೋಡಿ ಪ್ರಾಣಿಗಳು ಹೊರಬಾರದಂತೆ ತಡೆಯಲಾಗುತ್ತಿದೆ ಎಂದು ಪ್ರಭಾಕರನ್ ಹೇಳಿದರು.
ಹುಲಿಗಳ ಸಂಖ್ಯೆ ಹೆಚ್ಚಳ: ಬಂಡೀಪುರ ಅರಣ್ಯದೊಳಗೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೆ ಒಂದು ಹುಲಿಯ ಆವಾಸ 25 ಚ.ಕಿ.ಮೀ ವಿಸ್ತೀರ್ಣದವರೆಗೂ ವ್ಯಾಪಿಸಿತ್ತು. ಪ್ರಸ್ತುತ 10 ರಿಂದ 15 ಚ.ಕಿ.ಮೀಗೆ ಇಳಿಕೆಯಾಗಿದೆ. ಕಾದಾಟದಲ್ಲಿ ಬಲಾಢ್ಯ ಹುಲಿ ನೆಲೆ ಉಳಿಸಿಕೊಂಡರೆ ಅಶಕ್ತ ಹಾಗೂ ಗಾಯಗೊಂಡ ಹುಲಿಗಳು ಕಾಡಿನಿಂದ ಹೊರದೂಡಲ್ಪಡುತ್ತವೆ.
ನೆಲೆ ಕಳೆದುಕೊಳ್ಳುವ ಹುಲಿಗಳು ಕಾಡಂಚಿನ ಭಾಗಗಳಿಗೆ ಬಂದು ನೆಲೆ ಕಂಡುಕೊಳ್ಳುತ್ತಿರುವುದರಿಂದ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಕಾಡಂಚಿನ ಜಮೀನುಗಳಲ್ಲಿ ಮೇಯಲು ಬರುವ ಜಾನುವಾರುಗಳ ಮೇಲೆ ಪ್ರಾಣಿಗಳು ದಾಳಿ ಮಾಡುತ್ತಿವೆ, ಕೆಲವು ಬಾರಿ ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ ಎಂದರು.
ಕಾಡಂಚಿನಲ್ಲಿ ಕೃಷಿ ಜಮೀನು ಹೆಚ್ಚಳ, ಬದಲಾದ ಬೆಳೆ ಪದ್ಧತಿ, ನೀರಾವರಿ ಸೌಲಭ್ಯ ವಿಸ್ತರಣೆ, ತರಕಾರಿ, ಹಣ್ಣು ಸಹಿತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಆನೆ, ಜಿಂಕೆ, ಕಾಡೆಮ್ಮೆ, ಕಾಡು ಹಂದಿ ಸಹಿತ ಸಸ್ಯಾಹಾರಿ ಪ್ರಾಣಿಗಳು ರೈತರ ಬೆಳೆಗಳನ್ನು ತಿಂದು ಹಾಕುತ್ತಿವೆ. ಮಾನವ ಪ್ರಾಣಿ ಸಂಘರ್ಷವೂ ಹೆಚ್ಚಾಗಿದೆ ಎಂದು ಪ್ರಭಾಕರನ್ ತಿಳಿಸಿದರು.
ಸ್ಥಳೀಯರ ಜೀವನೋಪಾಯಕ್ಕೆ ಒತ್ತು: ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ರಕ್ಷಣೆಯಲ್ಲಿ ಕಾಡಂಚಿನ ನಿವಾಸಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯರ ಜೀವನೋಪಾಯಕ್ಕೆ ಇಕೋ ಟೂರಿಸಂಗೆ ಒತ್ತು ನೀಡಲಾಗಿದೆ. ಪರಿಸರ ಪ್ರವಾಸೋದ್ಯಮದಿಂದ ಬರುವ ಒಟ್ಟು ಆದಾಯದಲ್ಲಿ ಶೇ 30ರಷ್ಟನ್ನು ಸ್ಥಳೀಯರ ಅಭಿವೃದ್ಧಿಗೆ ವ್ಯಯ ಮಾಡಲಾಗುತ್ತಿದೆ ಎಂದರು.
43 ಇಕೋ ಡೆವಲಪ್‌ಮೆಂಟ್ ಸಮಿತಿ ರಚಿಸಲಾಗಿದ್ದು ಸ್ಥಳೀಯರು ಉತ್ಪಾದಿಸುವ ವಸ್ತುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಡಂಚಿನ ಗ್ರಾಮಗಳಿಗೆ ಸೋಲಾರ್ ಲೈಟ್, ಸಿಲಿಂಡರ್ ಸಂಪರ್ಕ, ವಿದ್ಯಾರ್ಥಿ ವೇತನ, ಕ್ರೀಡಾ ಪರಿಕರಗಳ ಕಿಟ್ ನೀಡಲಾಗುತ್ತಿದೆ. ಟೈಲರಿಂಗ್, ಬ್ಯುಟಿಷಿಯನ್ ತರಬೇತಿ, 150 ಮಂದಿಗೆ ಚಾಲನಾ ಪರವಾನಗಿ ವಿತರಿಸಲಾಗಿದೆ. ಸಮುದಾಯದ ಅಭಿವೃದ್ಧಿ ಆಧಾರಿತ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಪ್ರಭಾಕರನ್ ತಿಳಿಸಿದರು.
ಯಂತ್ರಗಳ ಬಳಕೆ ಅನಿವಾರ್ಯ: ಕಾಡಿನೊಳಗೆ ಲಂಟಾನಾ ಸಹಿತ ಕಳೆಗಿಡಗಳ ಹಾವಳಿಯಿಂದ ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಎದುರಾಗಿದೆ. ಶೇ 40 ರಿಂದ 90ರಷ್ಟು ಅರಣ್ಯವನ್ನು ಆವರಿಸಿಕೊಂಡಿರುವ ಕಳೆಗಿಡಗಳ ನಿರ್ಮೂಲನೆ ಮಾನವ ಶ್ರಮದಿಂದ ಸಾಧ್ಯವಿಲ್ಲ. ಕಳೆದ 10 ವರ್ಷಗಳಲ್ಲಿ ಮಾನವ ಶ್ರಮ ಬಳಸಿಕೊಂಡು ಶೇ 1ರಷ್ಟು ಕಳೆಗಿಡಗಳನ್ನು ಮಾತ್ರ ತೆರವು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕೆಲವು ಸಲ ಯಂತ್ರಗಳ ಬಳಕೆ ಅನಿವಾರ್ಯವಾಗುತ್ತದೆ ಎಂದು ಪ್ರಭಾಕರನ್ ಹೇಳಿದರು.
ಹುಲಿ ಗಣತಿ: ಬಂಡೀಪುರ ಅರಣ್ಯದಲ್ಲಿ 2 ಚ.ಕಿ.ಮೀ ಒಂದು ಗ್ರಿಡ್‌ನಂತೆ ವಿಂಗಡಿಸಿ ಕ್ಯಾಮೆರಾ ಅಳವಡಿಸಲಾಗಿದ್ದು 612 ಗ್ರಿಡ್‌ಗಳಿಗೆ 1,124 ಕ್ಯಾಮೆರಾಗಳನ್ನು ಅಳವಡಿಸಿ ಹುಲಿಗಳ ಗಣತಿ ಮಾಡಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಕರಾರುವಕ್ಕಾಗಿ ಗಣತಿ ನಡೆಯುತ್ತಿದೆ. ಕಳೆದ ಗಣತಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ನವೀನ್ ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು ಇದ್ದರು.
‘1.36 ಲಕ್ಷ ಚ.ಕಿ.ಮೀ ವಿಸ್ತೀರ್ಣ’
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹುಲಿ ಹಾಗೂ ಆನೆಗಳ ವಿಶಿಷ್ಟ ಆವಾಸಸ್ಥಾನವಾಗಿದ್ದು ತಮಿಳುನಾಡಿನ ಮಧುಮಲೈ ಸತ್ಯಮಂಗಲ ಕೇರಳದ ವಯನಾಡು ವನ್ಯಜೀವಿ ಧಾಮ ಕಾವೇರಿ ಮಲೆ ಮಹದೇಶ್ವರ ವನ್ಯಜೀವಿ ಧಾಮ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಮಡಿಕೇರಿ ತಲಕಾವೇರಿ ಪುಷ್ಪಗಿರಿ ಹೀಗೆ ಹಲವು ವನ್ಯಜೀವಿ ಧಾಮಗಳಿಂದ ಸುತ್ತುವರಿದಿದೆ. ಬಂಡೀಪುರ ಅರಣ್ಯ 1.36 ಲಕ್ಷ ಚ.ಕಿ.ಮೀ ವಿಸ್ತೀರ್ಣದಲ್ಲಿ ಚಾಚಿಕೊಂಡಿದೆ.
ಕಾಡ್ಗಿಚ್ಚು ತಡೆಗೆ ಬೆಂಕಿ ರೇಖೆ ನಿರ್ಮಾಣ
ಬೇಸಿಗೆಯಲ್ಲಿ ಅರಣ್ಯದೊಳಗೆ ಸಂಭವಿಸಬಹುದಾದ ಕಾಡ್ಗಿಚ್ಚು ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆಗೆ 500 ಸ್ಥಳೀಯ ಫೈರ್ ವಾಚರ್ಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಒಂದು ಬ್ಲಾಕ್‌ನಿಂದ ಮತ್ತೊಂದು ಬ್ಲಾಕ್‌ಗೆ ಬೆಂಕಿ ಹರಡದಂತೆ ಮಧ್ಯಭಾಗದಲ್ಲಿ ಬೆಂಕಿ ರೇಖೆಗಳನ್ನು ಹಾಕುವುದು ಕಾಡ್ಗಿಚ್ಚು ವ್ಯಾಪಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಗಿದೆ ಕಾಡಂಚಿನ ರೈತರ ಜಮೀನಿಂದ ಬೆಂಕಿ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಭಾಕರನ್ ತಿಳಿಸಿದರು.
‘ಸಫಾರಿ ಬಂದ್ ಸಮಸ್ಯೆಗೆ ಪರಿಹಾರವಲ್ಲ’
ಅರಣ್ಯದೊಳಗೆ ಸಫಾರಿ ಬಂದ್ ಮಾಡುವುದರಿಂದ ಮಾನವ –ಪ್ರಾಣಿ ಸಂಘರ್ಷ ತಡೆಯಬಹುದು ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಸಫಾರಿ ಆದಾಯವನ್ನು ನೌಕಕರು ಹಾಗೂ ಸಿಬ್ಬಂದಿ ವೇತನಕ್ಕೆ ಸ್ಥಳೀಯರ ಜೀವನೋಪಾಯ ಅಭಿವೃದ್ಧಿ ಕಾಮಗಾರಿಗಳು ಸಹಿತ ಇತರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಮತ್ತೆ ಸಫಾರಿ ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು ಆದೇಶ ಬಂದ ಕೂಡಲೇ ಆರಂಭಿಸಲಾಗುವುದು ಎಂದು ಬಂಡೀಪುರ ಸಿಎಫ್ ಪ್ರಭಾಕರನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.