ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಕಾಡ್ಗಿಚ್ಚು ನಿಯಂತ್ರಣಕ್ಕೆ ಎಐ ತಂತ್ರಜ್ಞಾನ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೃತಕ ಬುದ್ದಿ ಮತ್ತೆ ಹಾಗೂ ಥರ್ಮಲ್ ಡ್ರೋನ್ ಕ್ಯಾಮೆರಾ ಬಳಕೆ: ಬಂಡೀಪುರ ಸಿಎಫ್‌ ಎಸ್‌.ಪ್ರಭಾಕರನ್‌

ಬಾಲಚಂದ್ರ ಎಚ್.
Published 17 ಜನವರಿ 2026, 6:31 IST
Last Updated 17 ಜನವರಿ 2026, 6:31 IST
ಸಂಭವನೀಯ ಕಾಡ್ಗಿಚ್ಚು ತಡೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ಹಾಕುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಸಂಭವನೀಯ ಕಾಡ್ಗಿಚ್ಚು ತಡೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ಹಾಕುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಚಾಮರಾಜನಗರ: ಬೇಸಿಗೆ ಅವಧಿಯಲ್ಲಿ ಅರಣ್ಯದೊಳಗೆ ಕಾಣಿಸಿಕೊಳ್ಳುವ ಕಾಡ್ಗಿಚ್ಚು ನಿಯಂತ್ರಣಕ್ಕೆ ಅರಣ್ಯ ಇಲಾಖೆ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಆಧಾರಿತ ಕ್ಯಾಮೆರಾ ಹಾಗೂ ಥರ್ಮಲ್ ಡ್ರೋನ್ ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. 

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೊದಲ ಬಾರಿಗೆ ಕಾಡ್ಗಿಚ್ಚು ತಡೆಗೆ ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಕಾಡಿನೊಳಗೆ ಅಗ್ನಿ ಅವಘಡಗಳು ಸಂಭವಿಸಿದಾಗ ತುರ್ತು ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಾಗಲಿದೆ. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿಗೆ ಹೆಚ್ಚು ಹಾನಿಯಾಗದಂತೆ ತಡೆಯಬಹುದು ಎನ್ನುತ್ತಾರೆ ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್‌.ಪ್ರಭಾಕರನ್‌.

ಹೇಗೆ ಕಾರ್ಯ ನಿರ್ವಹಿಸಲಿದೆ: ಬಂಡೀಪುರ ಅರಣ್ಯದಲ್ಲಿ ಈಗಾಗಲೇ ಮಾನವ–ಪ್ರಾಣಿ ಸಂಘರ್ಷ ತಡೆಗೆ ಎಐ ತಂತ್ರಜ್ಞಾನ ಆಧಾರಿತ ಕಮಾಂಡ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದೆ. ಇದರ ಜೊತೆಗೆ ಬೆಂಕಿ ಆಕಸ್ಮಿಕಗಳಿಗೆ ತುರ್ತು ಸ್ಪಂದಿಸಲು ಒಂದು ಎಐ ಕ್ಯಾಮೆರಾ ಹಾಗೂ ಮೂರು ಥರ್ಮಲ್ ಡ್ರೋನ್‌ಗಳನ್ನು ಬಳಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ಅರಣ್ಯದೊಳಗೆ ಬೆಂಕಿ ಕಾಣಿಸಿಕೊಂಡ ಕೂಡಲೇ ಎಐ ಕ್ಯಾಮೆರಾ ಫೋಟೊ ಸಹಿತ, ಸ್ಥಳದ ಮಾಹಿತಿಯನ್ನು ಮೊಬೈಲ್‌ಗೆ ರವಾನಿಸಲಿದೆ. ಮಾಹಿತಿ ಆಧಾರಿಸಿ ಕೂಡಲೇ ಅಗತ್ಯ ಸಿಬ್ಬಂದಿಯನ್ನು ಬೆಂಕಿ ಆರಿಸಲು ಸ್ಥಳಕ್ಕೆ ಕಳಿಸಲಾಗುವುದು. ಥರ್ಮಲ್ ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಬೆಂಕಿಯ ಕೆನ್ನಾಲಗೆ ಎಷ್ಟು ದೂರಕ್ಕೆ ವ್ಯಾಪಿಸಿದೆ ಎಂಬುದನ್ನು ಅರಿತು ಕಾರ್ಯಾಚರಣೆ ರೂಪಿಸಲಾಗುವುದು. ಇದರಿಂದ ಹೆಚ್ಚಿನ ಅನಾಹುತ ತಡೆಯಲು ಸಾಧ್ಯವಾಗಲಿದೆ ಎನ್ನುತ್ತಾರೆ ಪ್ರಭಾಕರನ್‌.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯವು 2,800 ಕಿ.ಮೀ ವಿಸ್ತಾರದಲ್ಲಿ ಚಾಚಿಕೊಂಡಿದ್ದು ಡಿಸೆಂಬರ್‌ ಅಂತ್ಯದಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ವಾರದೊಳಗೆ ಮುಕ್ತಾಯವಾಗಲಿದೆ. ಕಾಡಿನೊಳಗೆ ನಿರ್ದಿಷ್ಟ ಭಾಗದಲ್ಲಿ ಕಾಣಿಸಿಕೊಳ್ಳುವ ಬೆಂಕಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡದಂತೆ ತಡೆಯಲು ಬೆಂಕಿ ರೇಖೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಸಿಬ್ಬಂದಿ ಸುಲಭವಾಗಿ ಬೆಂಕಿಯನ್ನು ತಹಬದಿಗೆ ತರಲು ಪೂರಕವಾಗುವಂತೆ ಬೆಂಕಿ ರೇಖೆಗಳನ್ನು ಹಾಕಲಾಗುತ್ತದೆ. ಈ ಕಾರ್ಯಕ್ಕೆ  ಸ್ಥಳೀಯರ ಜೀವನೋಪಾಯದ ದೃಷ್ಟಿಯಿಂದ ಕಾಡಂಚಿನ ನಿವಾಸಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿದಂತೆ 450ಕ್ಕೂ ಹೆಚ್ಚು ಮಂದಿ ಫೈರ್ ವಾಚ‌ರ್ಸ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ. ಮಳೆಗಾಲ ಆರಂಭವಾಗುವವರೆಗೂ ಸ್ಥಳೀಯರಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ ಎಂದು ಪ್ರಭಾಕರನ್ ತಿಳಿಸಿದರು.

ತರಬೇತಿ: ಕಾಡ್ಗಿಚ್ಚನ್ನು ತುರ್ತು ತಹಬದಿಗೆ ತರುವ ನಿಟ್ಟಿನಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ತರಬೇತಿ ಕೊಡಿಸಲಾಗಿದೆ. ಕಾಡಂಚಿನಲ್ಲಿರುವ ಜಮೀನುಗಳಲ್ಲಿ ಒಣಗಿದ ತರಗುಗಳಿಗೆ ಹಚ್ಚುವ ಬೆಂಕಿಯು ಅರಣ್ಯಕ್ಕೆ ವ್ಯಾಪಿಸುವ ಆತಂಕ ಹೆಚ್ಚಾಗಿರುವುದರಿಂದ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಮುಂಚಿತವಾಗಿ ಒಣ ವಸ್ತುಗಳನ್ನು ಸುಟ್ಟುಹಾಕಲಾಗಿದೆ.

ಬಂಡೀಪುರ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡ್ಗಿಚ್ಚು ತಡೆ ಸಂಬಂಧ ಜಾಗೃತಿ ಕಾರ್ಯಕ್ರಮ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ಹಾಕುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

ಸ್ಥಳೀಯರಿಗೆ ಜಾಗೃತಿ

ಅರಣ್ಯದೊಳಗೆ ಕಾಡ್ಗಿಚ್ಚಿನಂತಹ ಅವಘಡಗಳು ಸಂಭವಿಸದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕಾಡಂಚಿನ ಗ್ರಾಮಗಳಲ್ಲಿ ಅರಿವು ಮೂಡಿಸಲಾಗಿದೆ. ಗ್ರಾಮಗಳ ಮುಖಂಡರು ಹಾಗೂ ಆದಿವಾಸಿ ಸಮುದಾಯಗಳ ನಾಯಕರ ನೇತೃತ್ವದಲ್ಲಿ ಸಮನ್ವಯ ಸಭೆಗಳನ್ನು ನಡೆಸಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತಿನ ಮಹತ್ವ ಹಾಗೂ ಕಾಡ್ಗಿಚ್ಚಿನ ದುಷ್ಪರಿಣಾಮಗಳನ್ನು ತಿಳಿಸಲಾಗಿದೆ. ಜನುವಾರು ಮೇಯಿಸುವಾಗ ಕಾಡಂಚಿನ ಗ್ರಾಮಗಳಲ್ಲಿ  ಬೆಂಕಿ ಹಾಕುವುದು ಬೀಡಿ ಸಿಗರೇಟು ಸೇದಿ ಎಸೆಯುವುದನ್ನು ಮಾಡದಂತೆ ಸೂಚಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ಅರಿವು ಮೂಡಿಸಲಾಗಿದೆ ಎಂದು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಎಸ್‌.ಪ್ರಭಾಕರನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.