
ಯಳಂದೂರು: ‘ಸ್ತ್ರೀಯರು ಮತ್ತು ಬಾಲೆಯರ ಸುರಕ್ಷತೆ ಹಾಗೂ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇನ್ನೂ ಮುಂದೆ ‘ವಿಶೇಷ ಗಸ್ತು ಪಡೆ’ ಸಂಚರಿಸಲಿದೆ’ ಎಂದು ಚಾಮರಾಜನಗರ ಮಹಿಳಾ ಠಾಣಾ ಪೊಲೀಸ್ ಅಕ್ಕಪಡೆಯ ಕಾನ್‌ಸ್ಟೆಬಲ್ ವೈ. ದಿವ್ಯ ಮಾಹಿತಿ ನೀಡಿದರು.
ಪಟ್ಟಣದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಅಕ್ಕಪಡೆ ಪೊಲೀಸರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಕಪಡೆಯಲ್ಲಿ ವಿಶೇಷ ಮಹಿಳಾ ಗಸ್ತು ಪಡೆ ಸಹಾನುಭೂತಿಯಿಂದ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಲಿದೆ. ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಂಕಷ್ಟಕ್ಕೆ ಸಿಲುಕಿದ ಮಕ್ಕಳಿಗೆ ತಕ್ಷಣದ ಬೆಂಬಲ ನೀಡಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದರು.
ತಾಲ್ಲೂಕಿನ ಅಗರ ಮಾಂಬಳ್ಳಿ ಮತ್ತು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸಿ ಜನಪರ ಕೆಲಸ ಮಾಡುತ್ತದೆ. ಪ್ರತಿದಿನ 2 ಪಾಳಿಗಳಲ್ಲಿ ಬಸ್ ನಿಲ್ದಾಣ, ಮಾರುಕಟ್ಟೆ, ದೇವಳ, ಉದ್ಯಾನ, ಶಾಲಾ-ಕಾಲೇಜು, ವಿದ್ಯಾರ್ಥಿನಿರ ಹಾಸ್ಟೆಲ್, ಜನನಿಬಿಡ ಪ್ರದೇಶಗಳಲ್ಲಿ ಗಸ್ತು ನಿರ್ವಹಣೆ ಮಾಡುತ್ತದೆ. ಯುವತಿಯರು ತೊಂದರೆಯ ಸಮಯದಲ್ಲಿ 112 ಹಾಗೂ 1098 ಕೆರೆ ಮಾಡಿದರೆ ಗಸ್ತುಪಡೆ ಸಹಾಯ ಹಸ್ತ ನೀಡಲಿದೆ ಎಂದರು.
ಯೋಜನೆಯೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿದ್ದು ಸುರಕ್ಷಿತ ವಾತಾವರಣ ನಿರ್ಮಿಸುವ ದೆಸೆಯಲ್ಲಿ ನೆರವು ಸಿಗಲಿದೆ. ಯಾವುದೇ ರೀತಿಯ ದೌರ್ಜನ್ಯ, ಭಿಕ್ಷಾಟನೆ, ಮಾದಕದ್ರವ್ಯ ಮಾರಾಟ, ಬಾಲ ಕಾರ್ಮಿಕ ಪದ್ಧತಿ ಹಾಗೂ ನಿಂದನೆ ಸಮಯದಲ್ಲಿ ಅಕ್ಕ ಪಡೆಯ ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರ್, ಮುಖ್ಯ ಶಿಕ್ಷಕಿ, ಚಂದ್ರಕಲಾ, ಉಪನ್ಯಾಸಕರಾದ ಉಮೇಶ್, ಲೋಕೇಶ್, ಶೀಲಾ, ರೂಪ, ಮಾಲತಿ, ಗೃಹ ರಕ್ಷಕ ದಳದ ಭಾಗ್ಯಲಕ್ಷ್ಮಿ, ಸುರೇಶ್, ಮಹದೇವಸ್ವಾಮಿ ಹಾಗೂ ಮಹಿಳಾ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.