
ಚಾಮರಾಜನಗರ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ರಾಜ್ಯಸರ್ಕಾರ ಜಾರಿಗೊಳಿಸಿರುವ ‘ಅಕ್ಕ ಪಡೆ’ ಗಸ್ತು ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಶನಿವಾರ ನಗರದಲ್ಲಿ ಚಾಲನೆ ನೀಡಿದರು.
ಜಿಲ್ಲಾ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಕ್ಕ ಪಡೆ ವಾಹನಕ್ಕೆ ಹಸಿರು ನಿಶಾನೆ ತೋರಿದ ಉಸ್ತುವಾರಿ ಸಚಿವರು ಗಸ್ತು ವಾಹನವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವ ಹಾಗೂ ಪರಿಣಾಮಕಾರಿಯಾಗಿ ಸ್ಪಂದಿಸುವ ಉದ್ದೇಶದಿಂದ ಸರ್ಕಾರ ಅಕ್ಕ ಪಡೆ ಗಸ್ತು ವಾಹನ ಸೇವೆಯನ್ನು ಆರಂಭಿಸಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳಸಾಗಣೆ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳದಂತಹ ದೌರ್ಜನ್ಯಗಳನ್ನು ತಡೆಯಲು ಅಕ್ಕ ಪಡೆ ಗಸ್ತು ವಾಹನ ಮಹಿಳೆಯರ ನೆರವಿಗೆ ಬರಲಿದೆ ಎಂದರು.
ರಕ್ಷಣೆಗೆ ದಾವಿಸುವುದರ ಜೊತೆಗೆ ಮಹಿಳೆಯರು, ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳ ವಿರುದ್ಧ ಕಾನೂನು ಅರಿವು ಮೂಡಿಸುವುದು, ಸಂಕಷ್ಟದಲ್ಲಿ ಸಿಲುಕಿದವರಿಗೆ ರಕ್ಷಣೆ ನೀಡುವುದರ ಜೊತೆಗೆ ಕಾನೂನು ನೆರವು ನೀಡುವ ಕಾರ್ಯವನ್ನು ಅಕ್ಕ ಪಡೆ ಮಾಡಲಿದೆ.
ಅಕ್ಕ ಪಡೆಯ ಗಸ್ತು ವಾಹನದಲ್ಲಿ ಮಹಿಳಾ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಇರಲಿದ್ದು ನೆರವು ನೀಡಲಿದ್ದಾರೆ. ಗಸ್ತು ವಾಹನವು ಪ್ರತಿದಿನ ಶಾಲಾ–ಕಾಲೇಜು, ಬಸ್, ರೈಲು ನಿಲ್ದಾಣ, ಬಾಲಕಿಯರ ವಿದ್ಯಾರ್ಥಿ ನಿಲಯ, ಮಾರುಕಟ್ಟೆ, ಜನದಟ್ಟಣೆ ಹಾಗೂ ನಿರ್ಜನ ಪ್ರದೇಶಗಳು, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿನೀಡಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಲಿದೆ. ದೌರ್ಜನ್ಯಗಳನ್ನು ತಡೆಯಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಅಕ್ಕ ಪಡೆಯು ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ವಿದ್ಯಾರ್ಥಿನಿಯರಿಗೆ ದೌರ್ಜನ್ಯಗಳ ಕುರಿತು ಅರಿವು ಮೂಡಿಸಲಿದೆ. ಅಪಾಯ ಎದುರಾಗುವ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಪೋಕ್ಸೊ ಹಾಗೂ ಸೈಬರ್ ಅಪರಾಧ, ಮಾದಕ ವಸ್ತುಗಳ ಸೇವನೆಗಳಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲಿದೆ.
ಅಶಕ್ತ ಮಹಿಳೆಯರು ಹಾಗೂ ಮಕ್ಕಳಿಗ ಸಾಂತ್ವ ಹೇಳಿ ಧೈರ್ಯ ತುಂಬಲಿದೆ. ವಾರದಲ್ಲಿ ಒಂದು ದಿನ ಜಿಲ್ಲೆಯ ಇತರೆ ತಾಲ್ಲೂಕುಗಳ ವ್ಯಾಪ್ತಿಯಲ್ಲೂ ವಾಹನ ಸಂಚರಿಸಲಿದೆ. ಜನಸಂದಣಿ ಪ್ರದೇಶಗಳಲ್ಲಿ ನಡೆಯಬಹುದಾದ ದೌರ್ಜನ್ಯಗಳನ್ನು ತಡೆಯುವ ಕೆಲಸ ಮಾಡಲಿದೆ. ಈ ಮೂಲಕ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಲಿದೆ ಎಂದು ಸಚಿವರು ಹೇಳಿದರು.
ಶಾಸಕರಾದ ಸಿ.ಪುಟ್ಟರಂಗ ಶೆಟ್ಟಿ, ಎಚ್.ಎಂ. ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಆರ್. ಸುರೇಶ್, ಡಿ.ವೈ.ಎಸ್.ಪಿಗಳಾದ ಸ್ನೇಹಾರಾಜ್, ಧರ್ಮೇಂದ್ರ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
ಶಾಲಾ ಕಾಲೇಜು, ಜನನಿಬಿಡ ಸ್ಥಳಗಳಲ್ಲಿ ಸಂಚರಿಸಲಿದೆ ವಾಹನ ವಾಹನದಲ್ಲಿ ಇರಲಿದ್ದಾರೆ ಹೋಂ ಗಾರ್ಡ್ಸ್, ಮಹಿಳಾ ಪೊಲೀಸ್ ತುರ್ತು ನೆರವಿಗೆ ಧಾವಿಸುವುದರ ಜತೆಗೆ ರಕ್ಷಣೆಗೆ ಒತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.