ADVERTISEMENT

ಆಲಂಬಾಡಿ: 25ಕ್ಕೂ ಹೆಚ್ಚು ಮಂದಿಗೆ ಅನಾರೋಗ್ಯ

15 ದಿನ ಕಳೆದರೂ ಸಿಗದ ಸ್ಪಂದನೆ: ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:14 IST
Last Updated 17 ಅಕ್ಟೋಬರ್ 2019, 20:14 IST
ಆನಾರೋಗ್ಯದಿಂದ ಮಲಗಿರುವ ಆಲಂಬಾಡಿ ಗ್ರಾಮದ ಹಿರಿಯ ಜೀವ 
ಆನಾರೋಗ್ಯದಿಂದ ಮಲಗಿರುವ ಆಲಂಬಾಡಿ ಗ್ರಾಮದ ಹಿರಿಯ ಜೀವ    

ಮಹದೇಶ್ವರ ಬೆಟ್ಟ: ಸಮೀಪದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಲಂಬಾಡಿ ಹಾಗೂ ಪಾಲಾರ್‌ ಗ್ರಾಮಗಳಲ್ಲಿ 25ರಿಂದ 30 ಜನರು ಹೆಚ್ಚು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ.

ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಹದಿನೈದು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಅವರಿಗೆ ಆರೋಗ್ಯ ಸೇವೆ ಇನ್ನೂ ಸಿಕ್ಕಲ್ಲ.

ಇಲ್ಲಿ 25ರಿಂದ 30 ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಾಂಕ್ರಾಮಿಕ ರೋಗ ತಗುಲಿರುವ ಶಂಕೆ ವ್ಯಕ್ತವಾಗಿದೆ.

ADVERTISEMENT

ತಮಿಳುನಾಡಿನ ಮೆಟ್ಟೂರು ಜಲಾಶಯದ ಹಿನ್ನೀರು ಸೋರೆಕಾಯಿ ಮಡುವಿನ ವರೆಗೂ ವಿಸ್ತರಿಸಿದ್ದು, ನಿಂತಿರುವ ನೀರಿನಲ್ಲಿ ಕಸಕಡ್ಡಿ ಮಡುಗಟ್ಟಿವೆ. ಸೊಳ್ಳೆಗಳ ಕಾಟವು ಹೆಚ್ಚಳವಾಗುತ್ತಿದ್ದು, ಪಾಲಾರ್‌ ಗ್ರಾಮದ ಜನರು ಆತಂಕದಲ್ಲಿದ್ದಾರೆ.

ಏಕೈಕ ಆರೋಗ್ಯ ಉಪಕೇಂದ್ರ: ಈ ಭಾಗದಲ್ಲಿರುವ ಗೋಪಿನಾಥಂ, ಪುದೂರು ಮಾರಿಕೊಟ್ಟಾಯಿ, ಆಲಂಬಾಡಿ ಹಾಗೂ ಇನ್ನಿತರ ಗ್ರಾಮಗಳಿಗೆ ಇರುವುದು ಒಂದೇ ಒಂದು ಆರೋಗ್ಯ ಉಪಕೇಂದ್ರ. ಅದು ಗೋಪಿನಾಥಂನಲ್ಲಿದೆ. ಆದರೆ, ಅಲ್ಲಿ ಶುಶ್ರೂಷಕರು ಇಲ್ಲ. ತುರ್ತು ಸಂದರ್ಭದಲ್ಲಿಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಹೋಗಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಕೊಳ್ಳೇಗಾಲದ ಉಪವಿಭಾಗದ ಆಸ್ಪತ್ರೆಗೆ ಹೋಗಬೇಕಿದೆ.

ಕೊಳ್ಳೇಗಾಲ ತುಂಬಾ ದೂರವಿರುವುದರಿಂದಇಲ್ಲಿನ ಜನರು ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ.

ಅಸಮಾಧಾನ: ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೆಗೂ ತೀವ್ರ ಜ್ಚರದಿಂದ ಬಳಲುತ್ತಿದ್ದಾರೆ. 15 ದಿನ ಕಳೆದರೂ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಭೇಟಿ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುಕುಂದ್‌ ಅವರು, ‘ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ಗಮನಕ್ಕೆ ಬಂದಿದೆ.ಗೋಪಿನಾಥಂ ಉಪಕೇಂದ್ರದಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಶುಕ್ರವಾರ ಬೆಳಿಗ್ಗೆ ಆಲಂಬಾಡಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.