ADVERTISEMENT

ಚಾಮರಾಜನಗರ| ಕುಡುಕರ ಮೋಜಿನ ತಾಣಗಳಾದ ಸಾರ್ವಜನಿಕ ಸ್ಥಳಗಳು: ನಾಗರಿಕರಿಗೆ ಕಿರಿಕಿರಿ

ಕ್ರೀಡಾಂಗಣ, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಮದ್ಯವಸ್ಯನ

ಬಾಲಚಂದ್ರ ಎಚ್.
Published 15 ಸೆಪ್ಟೆಂಬರ್ 2025, 2:27 IST
Last Updated 15 ಸೆಪ್ಟೆಂಬರ್ 2025, 2:27 IST
ಚಾಮರಾಜನಗರದ ರಾಮಸಮುದ್ರದಲ್ಲಿರುವ ಮುಕ್ತ ವಿಶ್ವವಿದ್ಯಾಲಯ ರಸ್ತೆಯಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು
ಚಾಮರಾಜನಗರದ ರಾಮಸಮುದ್ರದಲ್ಲಿರುವ ಮುಕ್ತ ವಿಶ್ವವಿದ್ಯಾಲಯ ರಸ್ತೆಯಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು   

ಚಾಮರಾಜನಗರ: ಜಿಲ್ಲೆಯಲ್ಲಿ ಮದ್ಯವ್ಯಸನಿಗಳ ಕಿರಿಕಿರಿ ಮಿತಿಮೀರಿದ್ದು ‌ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಕತ್ತಲಾಗುತ್ತಿದ್ದಂತೆ ಉದ್ಯಾನ, ಕ್ರೀಡಾಂಗಣ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ನಿರ್ಜನ ಪ್ರದೇಶಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಕುಡುಕ‌ರ ಅಡ್ಡೆಗಳಾಗಿ ಬದಲಾಗಿವೆ.

ರಾತ್ರಿಪೂರ್ತಿ ನಶೆಯಲ್ಲಿ ತೇಲಾಡುತ್ತ ಸುತ್ತಮುತ್ತಲ ನಾಗರಿಕರಿಗೆ ತೊಂದರೆ ಕೊಡುತ್ತಿದ್ದಾರೆ, ಜನಸಂಚಾರ ವಿರಳವಿರುವ ರಸ್ತೆಗಳಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವುದೇ ಕಷ್ಟವಾಗಿದೆ.

ಜಿಲ್ಲಾ ಕೇಂದ್ರವಾದ ಚಾಮರಾಜನಗರ ಮೋಜಿನ ಅಡ್ಡೆಯಾಗಿ ಬದಲಾಗಿದೆ. ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದೊಳಗೆ ರಾಜಾರೋಷವಾಗಿ ಮದ್ಯಸೇವನೆ ನಡೆಯುತ್ತಿದೆ. ಕ್ರೀಡಾಂಗಣದ ಸುತ್ತ ಹಾಕಲಾಗಿರುವ ಆಸನಗಳ ಮೇಲೆ ಕುಳಿತು ಮದ್ಯಸೇವಿಸಿ ಬಾಟೆಲ್‌ಗಳನ್ನು ಬಿಸಾಡಲಾಗುತ್ತಿದೆ.

ADVERTISEMENT

ಕಿಡಿಗೇಡಿಗಳು ಅಮಲಿನಲ್ಲಿ ಬಾಟೆಲ್‌ಗಳನ್ನು ಕ್ರೀಡಾಂಗಣದೊಳಗೆಯೇ ಒಡೆದು ಹಾಕುತ್ತಿದ್ದು ಕ್ರೀಡಾಪಟುಗಳು ಅಭ್ಯಾಸ ಮಾಡುವಾಗ ಚುಚ್ಚಿ ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಸಾರ್ವಜನಿಕರು ವಾಕಿಂಗ್ ಮಾಡುವಾಗಲೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಕ್ರೀಡಾಂಗಣಕ್ಕೆ ಬಿಗಿ ಭದ್ರತೆ ಇಲ್ಲದಿರುವುದು, ಒಳ ಪ್ರವೇಶಿಸಲು ಮುಕ್ತ ಮಾರ್ಗಗಳು ಇರುವುದು ಸಮಸ್ಯೆಗೆ ಕಾರಣ.

ಹಗಲಿನಲ್ಲೇ ಮದ್ಯ ಹಾಗೂ ಗಾಂಜಾ ಸೇವಿಸಿ ಕ್ರೀಡಾಂಗಣದ ಆಸನಗಳ ಮೇಲೆ ವಿರಮಿಸುವ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ. ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುವುದು, ವಾಯುವಿಹಾರಕ್ಕೆ ಬರುವ ನಾಗರಿಕರಿಗೆ, ಅಭ್ಯಾಸಕ್ಕೆ ಬರುವ ಕ್ರೀಡಾಪಟುಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ.

‘ಖಾಸಗಿ ಬಸ್‌ ನಿಲ್ದಾಣದಿಂದ ಹಾಗೂ ಕ್ರೀಡಾಂಗಣದ ಹಿಂಬದಿ ರಸ್ತೆಯಿಂದ ಸ್ಟೇಡಿಯಂನೊಳಗೆ ಮುಕ್ತವಾಗಿ ಪ್ರವೇಶಿಸಬಹುದಾಗಿದ್ದು ಎರಡೂ ದ್ವಾರಗಳನ್ನು ಬಂದ್ ಮಾಡಿ, 24 ತಾಸು ಭದ್ರತೆಗೆ ಕಾವಲುಗಾರರನ್ನು ನಿಯೋಜಿಸಿದರೆ ಕುಡುಕರ ಹಾವಳಿ ತಡೆಯಬಹುದು’ ಎನ್ನುತ್ತಾರೆ ಕ್ರೀಡಾಪಟು ನಾಗರಾಜ್‌.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ತಮಿಳು ಹಾಗೂ ಉರ್ದು ಶಾಲೆಗಳ ಆವರಣಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪೌಚ್‌, ಪ್ಲಾಸ್ಟಿಕ್ ಲೋಟಗಳು ಮೈದಾನದ ತುಂಬೆಲ್ಲ ಹರಡಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಬರುವ ಯುವಕ ಯುವತಿಯರಿಗೆ, ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ.

ರಾಮಸಮುದ್ರದ ವಿದ್ಯಾನಗರ ಬಡಾವಣೆಯ ನಾಗರಿಕರು ಕುಡುಕರ ಹಾವಳಿಗೆ ಹೈರಾಣಾಗಿದ್ದಾರೆ. ರಾತ್ರಿ ಹೊತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸಂಪರ್ಕಿಸುವ ರಸ್ತೆಯಲ್ಲಿ ಪ್ರತಿದಿನ ಮೋಜಿನ ಪಾರ್ಟಿಗಳು ನಡೆಯುತ್ತವೆ. ರಸ್ತೆ ಮೇಲೆ ಹಾಗೂ ಬದಿಗಳಲ್ಲಿ ಬಾಟಲಿಗಳ ರಾಶಿ ಬಿದ್ದಿರುತ್ತವೆ. ರಾತ್ರಿ ದ್ವಿಚಕ್ರ ವಾಹನಗಳು ಚಲಿಸುವಾಗ ಚಕ್ರಕ್ಕೆ ಬಾಟಲಿಗಳು ಸಿಕ್ಕು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ಬಡಾವಣೆಯ ಮಹಿಳೆಯರು ಓಡಾಡಲು ಮುಜುಗರ ಅನುಭವಿಸುತ್ತಿದ್ದಾರೆ.

ಧೀನಬಂಧು ಶಾಲೆಯ ಹಿಂಭಾಗದ ನಿರ್ಜನ ಪ್ರದೇಶದಲ್ಲೂ ಸಮಸ್ಯೆ ಗಂಭೀರವಾಗಿದೆ. ಮೈದಾನದಲ್ಲಿಯೇ ಮದ್ಯಸೇವಿಸಿ ಬಾಟೆಲ್‌ಗಳನ್ನು ಒಡೆಯಲಾಗುತ್ತಿದ್ದು ಆಟವಾಡಲು ಬರುವ ಮಕ್ಕಳು ಗಾಯ ಮಾಡಿಕೊಳ್ಳುತ್ತಿದ್ದಾರೆ.

ಕೊಳ್ಳೇಗಾಲದಲ್ಲೂ ಸಮಸ್ಯೆ ಗಂಭೀರ:

ಕೊಳ್ಳೇಗಾಲದ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಉದ್ಯಾನಗಳಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ರಾತ್ರಿ ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಓಡಾಡಲು ಭಯಪಡುತ್ತಿದ್ದಾರೆ. ನಗರ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು ತರಕಾರಿ ಮಾರುಕಟ್ಟೆ, ಪಾರ್ಕ್, ಶಾಲಾ-ಕಾಲೇಜುಗಳ ಸಮೀಪದಲ್ಲಿಯೇ ಮದ್ಯ ಸೇವನೆ ನಡೆಯುತ್ತಿದೆ. ನಶೆಯಲ್ಲಿ ಮನೆಯ ಕಾಂಪೌಂಡ್‌ಗಳ ಮೇಲೆ ಕುಳಿತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಸಾರ್ವಜನಿಕರ ನೆಮ್ಮದಿ ಹರಣವಾಗುತ್ತಿದೆ.

ಹೊಸ ಬಡಾವಣೆಗಳಲ್ಲಿ ಪಾರ್ಟಿಗಳು ನಡೆಯುತ್ತಿದ್ದು ರಾತ್ರಿಪೂರ್ತಿ ಚೀರಾಟ, ಅಸಭ್ಯವಾಗಿ ವರ್ತಿಸುವುದು ನಡೆಯುತ್ತಿದೆ. ಹಲ್ಲೆ ಮಾಡುವ ಭಯದಿಂದ ‌ಸ್ಥಳೀಯರು ಪ್ರಶ್ನಿಸಲಾಗದೆ ಅಸಹಾಯಕರಾಗಿದ್ದಾರೆ. ಹೊಸ ಬಡಾವಣೆಗಳಲ್ಲಿ ಗಸ್ತು ಸರಿಯಾಗಿ ನಡೆಯದಿರುವುದು ಕುಡುಕರ ಅಟ್ಟಹಾಸ ಹೆಚ್ಚಾಗಲು ಕಾರಣ ಎನ್ನುತ್ತಾರೆ ಸಾರ್ವಜನಿಕರು

ಗ್ರಾಮೀಣ ಭಾಗಗಳ ಬಸ್ ನಿಲ್ದಾಣ, ಅರಳಿ ಕಟ್ಟೆ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಹೆಚ್ಚಾಗಿದ್ದು ಶಾಲಾ ಕಾಲೇಜು ಮುಗಿಸಿ ಮನೆಗೆ ಬರುವ ವಿದ್ಯಾರ್ಥಿನಿಯರು ಕಿರುಕುಳ ಅನುಭವಿಸುತ್ತಿದ್ದಾರೆ. ಧನಗೆರೆ, ಮುಳ್ಳೂರು, ನರೀಪುರ, ಸಿದ್ದಯ್ಯನಪುರ, ಮದುವನಹಳ್ಳಿ, ಕೆಂಪನಪಾಳ್ಯ, ಗುಂಡೇಗಾಲ, ಪಾಳ್ಯ, ದೊಡ್ಡಿಂದುವಾಡಿ ಗ್ರಾಮಗಳಲ್ಲಿ ಬಹಿರಂಗವಾಗಿ ಮದ್ಯವ್ಯಸನ ಹೆಚ್ಚಾಗಿದ್ದು ರಾತ್ರಿ ಭಯದಲ್ಲಿ ಓಡಾಡಬೇಕಿದೆ ಎನ್ನುತ್ತಾರೆ ಸಿದ್ದಯ್ಯನಪುರ ಗ್ರಾಮದ ಪ್ರವೀಣ್.

ಸಾರ್ವಜನಿಕರಿಗೆ ಕಿರಿಕಿರಿ:

ಯಳಂದೂರು ಪಟ್ಟಣದ ಸುತ್ತಮುತ್ತ ಪಾದಚಾರಿ ಮಾರ್ಗದಲ್ಲೇ ಮದ್ಯಸೇವಿಸಿ ಮಲಗಿರುವ ದೃಶ್ಯಗಳು ಕಾಣಸಿಗುತ್ತವೆ. ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ನಿತ್ಯ  ಮುಜುಗರ ಅನುಭವಿಸುತ್ತಿದ್ದಾರೆ. ಪೇಟೆಯೊಳಗೆ ಸಂಚರಿಸುವುದೇ ಕಷ್ಟವಾಗಿದೆ, ಪಟ್ಟಣದೊಳಗಿರುವ ಮದ್ಯದಂಗಡಿಗಳ ಮುಂದೆಯೇ ಮದ್ಯಪಾನ ಮಾಡುವುದು, ರಸ್ತೆಯಲ್ಲಿ ನಿಂತು ಮೂತ್ರ ವಿಸರ್ಜಿಸುವುದು, ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು ಹೆಚ್ಚಾಗಿದೆ. ಪುಂಡರ ಹಾವಳಿ ಹೆಚ್ಚಾಗಿರುವ ಬಗ್ಗೆ ಈಚೆಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದರೂ ಸಮಸ್ಯೆ ಬಗೆಹರಿಸಿಲ್ಲ.

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದೊಳಗೆ ಬಿದ್ದಿರುವ ಮದ್ಯದ ಬಾಟಲಿಗಳು
ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಿದ್ದಿರುವ ಮದ್ಯದ ಪೌಚ್ ಹಾಗೂ ಬಾಟಲಿಗಳು
ಯಳಂದೂರು ಪಟ್ಟಣದಲ್ಲಿ ಮದ್ಯದ ಪೌಚ್‌ಗಳನ್ನು ಬಿಸಾಡಿರುವುದು
‘ರಾತ್ತಿ ಗಸ್ತು ಹೆಚ್ಚಳ’ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಹೊಸ ಬಡಾವಣೆಗಳಲ್ಲಿ ರಾತ್ರಿವೇಳೆ ಗಸ್ತು ಹೆಚ್ಚಿಸಲಾಗುವುದು ಸ್ಥಳೀಯರು ಮಾಹಿತಿ ನೀಡಿದರೆ ಪುಂಡರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಿ.ಟಿ.ಕವಿತಾ ಎಸ್‌ಪಿ  ನಿಯಮ ಉಲ್ಲಂಘಿಸಿದರೆ ಕ್ರಮ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಸೇವನೆ ಕಾನೂನುಬಾಹಿರವಾಗಿದ್ದು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮದ್ಯಸೇವಿಸಿ ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಿದ್ದೇವೆ.
ಧರ್ಮೇಂದ್ರ ಕೊಳ್ಳೇಗಾಲ ಡಿವೈಎಸ್‌ಪಿ
‘ಕ್ರೀಡಾಂಗಣದ ದ್ವಾರ ಬಂದ್‌’ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಖಾಸಗಿ ಬಸ್ ನಿಲ್ದಾಣದಿಂದ ಮುಕ್ತ ಪ್ರವೇಶವಿದ್ದು ಶೀಘ್ರ ಬಂದ್ ಮಾಡಲಾಗುವುದು. ಕ್ರೀಡಾಂಗಣದೊಳಗೆ ಮದ್ಯ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಶೀಘ್ರ ದ್ವಾರಗಳನ್ನು ಮುಚ್ಚಿ ಕ್ರೀಡಾಂಗಣದೊಳಗೆ ಕುಡುಕರು ಬಾರದಂತೆ ಕ್ರಮ ಕೈಗೊಳ್ಳಲಾಗುವುದು.
ಸುರೇಶ್‌ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ
ಸಾರ್ವಜನಿಕ ಸ್ಥಳಗಳಲ್ಲಿ ಕುಡಿತ ಹೆಚ್ಚಾಗಿದ್ದು ಮಹಿಳೆಯರು ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ. ಪೊಲೀಸ್ ಇಲಾಖೆ ಗಮನ ಹರಿಸಿ ಗಸ್ತು ಹೆಚ್ಚಿಸಬೇಕು ರಾತ್ತಿಯ ಹೊತ್ತು ಹಲವು ಬಾರಿ ಗಸ್ತು ತಿರುಗಿದರೆ ಸಮಸ್ಯೆ ಬಗೆಹರಿಸಬಹುದು.
ಸುಮನ್ ಕೊಳ್ಳೇಗಾಲ
ಸಂಚಾರ ದುಸ್ತರ ಬಳೆಪೇಟೆ ವೃತ್ತದಲ್ಲಿ ಮುಂಜಾನೆ ಹಾಗೂ ಸಂಜೆ ಜನರು ಸಂಚರಿಸುವುದೇ ದುಸ್ತರವಾಗಿದೆ. ರಸ್ತೆ ಮಧ್ಯೆಯೇ ಕುಡಿದು ಬೀಳುವುದರಿಂದ ಸಾರ್ವಜನಿಕರಿಗೆ ಮುಜುಗರವಾಗುತ್ತಿದೆ.
ಲಿಂಗರಾಜ ಮೂರ್ತಿ ನಾಮನಿರ್ದೇಶನ ಸದಸ್ಯ ಪಟ್ಟಣ ಪಂಚಾಯಿತಿ
ಯಳಂದೂರು ದಂಡ ವಿಧಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ಅಸಭ್ಯವಾಗಿ ವರ್ತಿಸಿ ತೊಂದರೆ ಕೊಡುತ್ತಿದ್ದಾರೆ. ಕುಡುಕರಿಗೆ ಹೆಚ್ಚಿನ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಬೇಕು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ನಿಷೇಧ ಹೇರಬೇಕು.
ರವಿಕುಮಾರ್ ನಡುಕಲಮೋಳೆ

ಅಕ್ರಮ ಮದ್ಯ ಮಾರಾಟ

ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಲು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿರುವುದು ಪ್ರಮುಖ ಕಾರಣ. ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ’ ಎಂದು ದೂರುತ್ತಾರೆ ಮುಖಂಡ ಸಿದ್ದರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.