ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರದಿಂದ ಲಾಕ್‌ಡೌನ್ ನಿರ್ಬಂಧಗಳು ಮತ್ತಷ್ಟು ಸಡಿಲವಾಗಲಿವೆ. ಹವಾನಿಯಂತ್ರಿತ ಮಳಿಗೆಗಳನ್ನು ಬಿಟ್ಟು ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ.
ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅನ್ನು ಮತ್ತಷ್ಟು ಸಡಿಲ ಮಾಡುವ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಆದೇಶ ಹೊರಡಿಸಿದ ನಂತರ, ಜಿಲ್ಲೆಯ ಮಟ್ಟಿಗೆ ಲಾಕ್‌ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ, ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಮಳಿಗೆಗಳು, ಮಾಲ್‌ಗಳು (ಜಿಲ್ಲೆಯಲ್ಲಿ ಇಲ್ಲ) ಬಿಟ್ಟು, ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಬಹುದು. ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಆದೇಶದಲ್ಲಿ ಹೇಳಲಾಗಿದೆ.
ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ತುರ್ತು ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.