ADVERTISEMENT

ತುಂಬುತ್ತಿದೆ ಅಮಾನಿಕೆರೆ, ಏರಿ ಒಡೆಯುವ ಆತಂಕ

ನಿರಂತರ ಮಳೆ; ಐದು ವರ್ಷಗಳ ಬಳಿಕ ಭರ್ತಿಗೆ ದಿನಗಣನೆ, 2017ರಲ್ಲಿ ಏರಿ ಒಡೆದು ಫಸಲು ಹಾನಿ

ಮಲ್ಲೇಶ ಎಂ.
Published 17 ಸೆಪ್ಟೆಂಬರ್ 2022, 16:52 IST
Last Updated 17 ಸೆಪ್ಟೆಂಬರ್ 2022, 16:52 IST
ಗುಂಡ್ಲುಪೇಟೆ ತಾಲ್ಲೂಕಿನ ವಿಜಯಪುರ ಅಮಾನಿಕೆರೆಯಲ್ಲಿ ನೀರು ತುಂಬಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ವಿಜಯಪುರ ಅಮಾನಿಕೆರೆಯಲ್ಲಿ ನೀರು ತುಂಬಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾದ, ಪಟ್ಟಣದ ಸಮೀಪವೇ ಇರುವ ವಿಜಯಪುರ ಅಮಾನಿಕೆರೆ ಐದು ವರ್ಷಗಳ ನಂತರ ತುಂಬುತ್ತಿದ್ದು, ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಏರಿ ಕುಸಿಯುವ ಆತಂಕದಲ್ಲಿ ಈ ಭಾಗದ ರೈತರು ಇದ್ದಾರೆ.

2017ರಲ್ಲಿ ಮಳೆಯಿಂದಾಗಿ ಕೆರೆ ತುಂಬುತ್ತಿದ್ದ ಸಂದರ್ಭದಲ್ಲಿ ಏರಿ ಒಡೆದು ಭಾರಿ ಪ್ರಮಾಣದ ನೀರು ಹೊರ ಹೋಗಿ ಸುತ್ತಮುತ್ತಲಿನ ರೈತರ ಫಸಲು ಹಾಳಾಗಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಕೆರೆ ಸುಮಾರು 450 ಎಕರೆ ವಿಸ್ತೀರ್ಣವಿದೆ. ಕೆರೆ ತುಂಬಿದರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ. ಈ ಕೆರೆ ತುಂಬಿದರೆ ಗುಂಡ್ಲುಪೇಟೆ ಪಟ್ಟಣದಲ್ಲೂ ನೀರಿನ ಸಮಸ್ಯೆ ಇರುವುದಿಲ್ಲ. ಈ ಕೆರೆಯಿಂದ ಇಷ್ಟ ಅನುಕೂಲಗಳಿದ್ದರೂ ಜನಪ್ರತಿಗಳಾಗಲಿ, ಅಧಿಕಾರಿಗಳಾಗಲಿ ಇದನ್ನು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ ಎಂಬುದು ಈ ಭಾಗದ ಜನರ ಅನಿಸಿಕೆ.

ADVERTISEMENT

ತಿಂಗಳಿನಿಂದ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಹಿರಿಕೆರೆ, ಹಂಗಳ ದೊಡ್ಡ ಕೆರೆ ಕೋಡಿ ಬಿದ್ದಿದೆ. ಅಲ್ಲದೆ ಶಿವಪುರ ಕೆರೆ ಕೋಡಿ ಬಿದ್ದು ಎರಡು ಕಡೆಯಿಂದ ನೀರು ಅಮಾನಿಕೆರೆಗೆ ಸರಾಗವಾಗಿ ಹರಿದು ಬರುತ್ತಿದ್ದು, ಕೆರೆ ತುಂಬುವ ಹಂತಕ್ಕೆ ಬಂದಿದೆ.

‘ಈ ಕೆರೆ ಕೋಡಿ ಬೀಳಲು ಮೂರ್ನಾಲ್ಕು ಅಡಿಗಳಷ್ಟು ಮಾತ್ರ ಬಾಕಿ ಇದೆ. ಹಿಂದೆ ಬಿರುಕು ಬಿಟ್ಟು ಒಡೆದು ಹೋಗಿದ್ದ ಜಾಗದಲ್ಲಿ ಮತ್ತೆ ನೀರು ಸೋರಿಕೆ ಆಗುತ್ತಿದೆ. ಜನರು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಈ ಕೆರೆಯಿಂದಾಗಿ ಅಣ್ಣೂರು, ಅಣ್ಣೂರು ಕೇರಿ ಹಾಗೂ ಕೊಡಹಳ್ಳಿ, ಬೆಟ್ಟಹಳ್ಳಿ, ಕಂದೇಗಾಲ ಗ್ರಾಮಗಳ ಸುತ್ತಮುತ್ತ ಅಂತರ್ಜಲ ಮಟ್ಟ ಹೆಚ್ಚಿದೆ. ಅನೇಕ ದಿನಗಳಿಂದ ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳಿಗೆ ಜೀವ ಬಂದಿದೆ.

‘ಹಿಂದೆ ಈ ಕೆರೆ ಭರ್ತಿಯಾದರೆ ಸುತ್ತಮುತ್ತಲಿನ ಜನರು ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಕಾಲುವೆಯ ಮೂಲಕ ನೀರು ಬೀಡುತ್ತಿದ್ದರು. ಕಾಲ ಕ್ರಮೇಣ ಕಾಲುವೆಗಳೆಲ್ಲ ಮುಚ್ಚಿ ಹೋಯಿತು. ಸರ್ಕಾರ ರೈತರ ಹಿತದೃಷ್ಟಿಯಿಂದ ಕೆರೆಗಳಿಗೆ ಮರುಜೀವ ನೀಡಿ ಕಾಲುವೆಗಳನ್ನು ಸರಿಪಡಿಸಿದರೆ ಹಿಂದಿನಂತೆ ಈಗಲೂ ಕೃಷಿಗೆ ಹೆಚ್ಚಿನ ಉಪಯೋಗ ಆಗುತ್ತದೆ’ ಎಂದು ಸ್ಥಳೀಯ ರೈತರಾದ ಎಸ್.ಬಸವಯ್ಯ , ಎಂ.ಸ್ವಾಮಿ, ಬಸವಣ್ಣ, ಚಿಕ್ಕಡ್ಡಿ, ಮುದ್ದು ಮಾದಯ್ಯ, ಲಿಂಗಯ್ಯ, ಚನ್ನರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋರಿಕೆ ಆಗುತ್ತಿಲ್ಲ’

‘ಸರ್ಕಾರದಿಂದ ತುಂಬಿಸಲು ಆಗದ ಕೆರೆಗಳು ಈಗ ಮಳೆಯಿಂದ ತುಂಬಿವೆ. ಯಾವುದೇ ರೀತಿಯ ಅಪಾಯ ಎದುರಾಗದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗಮನವಹಿಸಬೇಕು’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಒತ್ತಾಯಿಸಿದರು.

‘ಕೆರೆಯಲ್ಲಿ ಯಾವುದೇ ರೀತಿಯ ಸೋರಿಕೆ ಕಂಡು ಬಂದಿಲ್ಲ. ಕೆರೆ ತುಂಬಲು ಇನ್ನೂ ಐದಾರು ಅಡಿ ಬಾಕಿ ಇದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸಲಾಗುತ್ತದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಯಶವಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.