ADVERTISEMENT

ಯುಗಾದಿ ಸಂಭ್ರಮ: ಮಾದಪ್ಪನಿಗೆ ಅಮಾವಾಸ್ಯೆ ಪೂಜೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 16:01 IST
Last Updated 31 ಮಾರ್ಚ್ 2022, 16:01 IST
ಮಹದೇಶ್ವರಬೆಟ್ಟದಲ್ಲಿ ಯುಗಾದಿ ಜಾತ್ರೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡಬ ಶ್ರೀನಿವಾಸ್‌ ತಂಡವು ಜಾನಪದ ಜಾದೂ ಪ್ರದರ್ಶನ ನೀಡಿತು
ಮಹದೇಶ್ವರಬೆಟ್ಟದಲ್ಲಿ ಯುಗಾದಿ ಜಾತ್ರೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡಬ ಶ್ರೀನಿವಾಸ್‌ ತಂಡವು ಜಾನಪದ ಜಾದೂ ಪ್ರದರ್ಶನ ನೀಡಿತು   

ಮಹದೇಶ್ವರ ಬೆಟ್ಟ: ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಗುರುವಾರ ಅಮಾವಾಸ್ಯೆ ತ್ರಿಕಾಲ ಪೂಜೆ ಹಾಗೂ ಬೆಳ್ಳಿ ದೀವಟಿಗೆಯ ಪಂಜಿನ ಸೇವೆ ನಡೆಯಿತು.

ಅಮಾವಾಸ್ಯೆ ಪ್ರಯುಕ್ತ ಗುರುವಾರ ಮುಂಜಾನೆ ಮೂರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಕ್ಷೇತ್ರದಲ್ಲಿ ವಿವಿಧ ಪೂಜೆ ಪುನಸ್ಕಾರಗಳು ನಡೆದವು. ಸಂಜೆ 6.30 ರಿಂದ ರಾತ್ರಿ 8.30 ವರೆಗೆ ತ್ರಿಕಾಲ ಹಾಗೂ ವಿಶೇಷ ಅಮವಾಸ್ಯೆ ಪೂಜೆ ಜರುಗಿತು.

ಮಹದೇಶ್ವರ ಸ್ವಾಮಿಗೆ ರಾತ್ರಿ 8.30ರಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿಯ ದೀವಟಿಗೆಯ ಪಂಜಿನ ಸೇವೆ ನಡೆಯಿತು. ಬಳಿಕ ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ಸೇವೆ ಜರುಗಿತು.

ADVERTISEMENT

ಕಳೆಗಟ್ಟಿದ ಸಾಂಸ್ಕೃತಿಕ ಕಾರ್ಯಕ್ರಮ:ಜಾತ್ರೋತ್ಸವದ ಅಂಗವಾಗಿ ಎರಡು ದಿನಗಳ ಸಾಂಸ್ಕೃತಿಕ ಉತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು. ಬಯಲು ರಂಗಮಂದಿರ ಹಾಗೂ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಂಗಳೂರಿನ ಕಡಬ ಶ್ರೀನಿವಾಸ್‌ ಮತ್ತು ತಂಡದ ಜಾನಪದ ಜಾದೂ ಕಾರ್ಯಕ್ರಮ ಗಮನ ಸೆಳೆಯಿತು.

ಚಾಮರಾಜನಗರದ ಅವತಾರ್‌ ನೃತ್ಯ ಅಕಾಡೆಮಿಯ ಪ್ರವೀಣ್ ಮತ್ತು ತಂಡವು ಬಯಲು ರಂಗಮಂದಿರದಲ್ಲಿ ನೃತ್ಯ ಪ್ರದರ್ಶನ ನೀಡಿತು. ದೇವಾಲಯದ ಬಳಿ ಇರುವ ರಂಗಮಂದಿರದಲ್ಲಿ ಕಡಬ ಶ್ರೀನಿವಾಸ್‌ ಮತ್ತು ತಂಡ ಜಾನಪದ ಜಾದೂ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿತು. ಗುಂಡ್ಲುಪೇಟೆ ಬಾಚನಹಳ್ಳಿಯ ಮಾದೇಶ್‌ ಮತ್ತು ತಂಡವು ಮಹದೇಶ್ವರರ ಗೀತೆಗಳನ್ನು ಹಾಡಿ ಭಕ್ತರನ್ನು ಪುಳಕಗೊಳಿಸಿತು.

ರಂಗಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಾವಿರಾರು ಭಕ್ತರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಪ್ತಸ್ವರ ಆರ್ಟ್ಸ್‌ ಅಂಡ್‌ ಕ್ರಿಯೇಷನ್ಸ್‌ನ ಮಂಜುಳ ಪರಮೇಶ್‌ ತಂಡವು ಎರಡು ಗಂಟೆಗಳ ಕಾಲ ‘ಕಲಾ ವೈಭವ’ ನೃತ್ಯ ಪ್ರದರ್ಶನ ನೀಡಲಿದೆ. ಯಳಂದೂರು ತಾಲ್ಲೂಕಿನ ಕೊಮಾರನಪುರದ ಆರ್.ಮಹೇಂದ್ರ ಮತ್ತು ತಂಡವು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿದೆ. ಚಾಮರಾಜನಗರ ಮಹೇಶ್‌ ಮತ್ತು ತಂಡ ನೃತ್ಯ ವೈಭವ ಕಾರ್ಯಕ್ರಮ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.