
ಚಾಮರಾಜನಗರ: ಪ್ರಪಂಚದ ಸರ್ವಶ್ರೇಷ್ಠ ಸಂವಿಧಾನವನ್ನು ರಚನೆ ಮಾಡಿದವರು ಅಂಬೇಡ್ಕರ್ ಒಬ್ಬರೇ ಎಂದು ಚಿಂತಕ ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಅಭಿಪ್ರಾಯಪಟ್ಟರು.
ರಂಗವಾಹಿನಿ ಸಂಸ್ಥೆಯ ವತಿಯಿಂದ ಭೋಗಾಪುರ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ, ಅಂಬೇಡ್ಕರ್ ಹಬ್ಬ ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಅಂಬೇಡ್ಕರ್ ಮಾತ್ರವಲ್ಲ; ಹಲವರು ಸೇರಿ ದೇಶದ ಸಂವಿಧಾನ ರಚಿಸಿದ್ದಾರೆ ಎಂದು ಕೆಲವರು ವಾದಿಸುತ್ತಾರೆ. ಇಂತಹ ವಾದಗಳು ಅಂಬೇಡ್ಕರ್ ಅವರ ಪ್ರಾಮುಖ್ಯತೆಯನ್ನು ನಗಣ್ಯ ಮಾಡುವ ಅಂಬೇಡ್ಕರ್ ವಿರೋಧಿ ಹುನ್ನಾರವಾಗಿದೆಯಷ್ಟೆ’ ಎಂದರು.
‘ಸಂವಿಧಾನ ರಚನಾ ಸಮಿತಿಯ ಸದಸ್ಯರು ಹಲವು ಕಾರಣಗಳನ್ನು ನೀಡಿ ದೂರ ಉಳಿದಾಗ ಅಂಬೇಡ್ಕರ್ ವಿಶೇಷ ಬದ್ಧತೆ ಮತ್ತು ವಿದ್ವತ್ತುಗಳನ್ನು ಪ್ರದರ್ಶಿಸಿ ಜನಮುಖಯಾದ ಭಾರತದ ಸಂವಿಧಾನ ರಚಿಸಿದರು. ಸಂವಿಧಾನ ರಚನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡವರು ಅಂಬೇಡ್ಕರ್ ಮಾತ್ರ. ಈ ವಿಚಾರವನ್ನು ಸಂವಿಧಾನ ರಚನಾ ಸಮಿತಿಯ ಸದಸ್ಯರಲ್ಲೊಬ್ಬರಾದ ಕೃಷ್ಣಮಾಚಾರಿ ಅವರೇ ರಚನಾ ಸಭೆಯಲ್ಲಿ ಮಂಡಿಸಿದ್ದು, ನಡಾವಳಿಯಲ್ಲಿ ದಾಖಲಾಗಿದೆ’ ಎಂದರು.
‘ಸತ್ಯ ತಿಳಿದಿದ್ದರೂ ಇತಿಹಾಸವನ್ನು ತಿರುಚುವ ಕೆಲಸ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಂಬೇಡ್ಕರ್ ವಿಚಾರಧಾರೆಗಳನ್ನು ತಿರುಚಲಾಗುತ್ತಿದೆ. ಇಂತಹ ಪ್ರಯತ್ನಗಳು ಚರಿತ್ರೆಯನ್ನು ತಿರುಚುವ ಮತ್ತು ಅಂಬೇಡ್ಕರ್ ವಿದ್ವತ್ತಿಗೆ ಮಸಿ ಬಳಿಯುವ ಕೆಲಸವಾಗಿದೆ’ ಎಂದರು.
‘ಅಂಬೇಡ್ಕರ್ ವಿಚಾರಧಾರೆಗಳನ್ನು ತಿರುಚುವುದನ್ನು ದೇಶ ವಿರೋಧಿ ಕೃತ್ಯ ಎಂದು ಪರಿಗಣಿಸಿ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ಅಂಬೇಡ್ಕರ್ ಕುರಿತಾಗಿ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ಹಂಚಿಕೊಳ್ಳಬಾರದು’ ಎಂದು ಸಲಹೆ ನೀಡಿದರು.
‘ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಭಾರತದ ಸಂವಿಧಾನ ಪೀಠಿಕೆ ಸಂವಿಧಾನದ ಮೌಲ್ಯಗಳು ಮತ್ತು ಮಾರ್ಗದರ್ಶಿ ತತ್ವಗಳನ್ನು ವಿವರಿಸುವ ಸಂಕ್ಷಿಪ್ತ ಪರಿಚಯಾತ್ಮಕ ಭಾಗವಾಗಿದೆ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ, ವರ್ಗ ಹಾಗೂ ಇತರ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಹಿತ ಸಮಾನ ಹಕ್ಕುಗಳನ್ನು ನೀಡಿದವರು ಅಂಬೇಡ್ಕರ್’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ‘ಜಗತ್ತು ಇಂದು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿಯುತ್ತಿದೆ. ತುಳಿತಕ್ಕೊಳಗಾದವರೆಲ್ಲರಿಗೂ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಮತ್ತು ಆತ್ಮ ಗೌರವ ನೀಡಿದವರು ಅಂಬೇಡ್ಕರ್’ ಎಂದರು.
ಸಮಾರಂಭದಲ್ಲಿ ನಿಸರ್ಗ ಟ್ರಸ್ಟ್ ನಾಗರಾಜು, ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಮೇಶ್ ಬಾಬು, ರಂಗಸ್ವಾಮಿ, ದೀಪಕ್ ವಿಲ್ಸನ್ ಯಶೋಧಾ ದೇವಿ, ಸುದರ್ಶನ್, ಹಸನ್ ಮಹಮದ್ ಇದ್ದರು. ಪೂಜಾ ಮತ್ತು ತಂಡ ಅಂಬೇಡ್ಕರ್ ಮತ್ತು ಬುದ್ಧನ ಗೀತೆಗಳನ್ನು ಹಾಡಿದರು. ಇದೇ ವೇಳೆ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಜಾಲತಾಣಗಳಲ್ಲಿ ಅಂಬೇಡ್ಕರ್ ವಿಚಾರಧಾರೆ ತಿರುಚುವ ಯತ್ನ ಕಿಡಿಗೇಡಿಗಳಿಂದ ಅಂಬೇಡ್ಕರ್ ಕುರಿತು ವದಂತಿ ಅಂಬೇಡ್ಕರ್ ವಿಚಾರಧಾರೆಗಳು ಪ್ರತಿಯೊಬ್ಬರಿಗೂ ತಲುಪಲಿ
‘ಜಿಲ್ಲೆಯಾದ್ಯಂತ ಅಂಬೇಡ್ಕರ್ ಕಾರ್ಯಕ್ರಮ’
‘ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಅಂಬೇಡ್ಕರ್ ಹಬ್ಬ ಅಂಬೇಡ್ಕರ್ ಮತ್ತು ಸಂವಿಧಾನ ಅಂಬೇಡ್ಕರ್ ಮತ್ತು ಮಹಿಳೆ ಅಂಬೇಡ್ಕರ್ ಮತ್ತು ಕಾನೂನು ಕುರಿತು ವಿಚಾರ ಸಂಕಿರಣ ಅಂಬೇಡ್ಕರ್ ಕುರಿತು ಪ್ರಬಂಧ ಸ್ಪರ್ಧೆ ಅಂಬೇಡ್ಕರ್ ಹಾಡು ಹಬ್ಬ ಮತ್ತು ಬೆಲ್ಲದ ದೋಣಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.