ADVERTISEMENT

ಹಳೆಗನ್ನಡ ಶಾಸನಗಳಿಗೆ ‘ಕಂಟಕ’ 

ಅನಾಥ ಸ್ಥಿತಿಯಲ್ಲಿವೆ ಭಾಷಾ ವಿಕಾಸಕ್ಕೆ ಮುನ್ನುಡಿ ಬರೆದ ಶಾಸನಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:13 IST
Last Updated 1 ನವೆಂಬರ್ 2025, 4:13 IST
ಯಳಂದೂರು ತಾಲ್ಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದ ಭತ್ತದ ಗದ್ದೆಯಲ್ಲಿ ಹೂತು ಹೋಗಿರುವ ಹಳೆಗನ್ನಡ ಶಾಸನ
ಯಳಂದೂರು ತಾಲ್ಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದ ಭತ್ತದ ಗದ್ದೆಯಲ್ಲಿ ಹೂತು ಹೋಗಿರುವ ಹಳೆಗನ್ನಡ ಶಾಸನ   

ಯಳಂದೂರು: ‘ರಾಜ-ಮಹಾರಾಜರ ಆಳ್ವಿಕೆಯ ಕಥೆ ಹೇಳುವ ಕನ್ನಡ-ತಮಿಳು ಶಾಸನಗಳು, ಬಂಡೆಗಳು, ಮಹಾಸತಿ ಕಲ್ಲುಗಳು ತಾಲ್ಲೂಕಿನಲ್ಲಿದ್ದು ಸೂಕ್ತ ರಕ್ಷಣೆ ಇಲ್ಲದೆ ಅಳಿವಿನಂಚಿನತ್ತ ಸಾಗಿವೆ. ಕರುನಾಡಿನ ಪರಂಪರೆ ಬಿಂಬಿಸುವ ಪಳಿಯುಳಿಕೆಗಳನ್ನು ಉಳಿಸುವತ್ತ ಸಂಬಂಧಪಟ್ಟ ಇಲಾಖೆಗಳು ಚಿತ್ತ ಹರಿಸಬೇಕಿದೆ.

ತಾಲ್ಲೂಕಿನ ಬಹುಭಾಗ 10ನೇ ಶತಮಾನದ ಚರಿತ್ರೆಯ ಭಾಗವಾಗಿದ್ದು, ಹಲವು ಶಿಲ್ಪ–ಕಲ್ಪಗಳ ನೆಲೆಯಾಗಿರುವುದನ್ನು ಇತಿಹಾಸ ತಿಳಿಸುತ್ತದೆ. ಚೋಳ, ಹೊಯ್ಸಳ, ಗಂಗ, ಪಾಳೆಗಾರರು, ವಿಜಯನಗರ ಹಾಗೂ ಮೈಸೂರು ಅರಸರ ಆಳ್ವಿಕೆ ನಡೆಸಿರುವುದಕ್ಕೆ, ಸಾಂಸ್ಕೃತಿಕ ಪರಂಪರೆ ಮರೆದಿರುವುದಕ್ಕೆ ಇಂದಿಗೂ ಸಾಕ್ಷ್ಯಗಳು ಲಭಿಸುತ್ತವೆ.

ಹದಿನಾಡು ಅರಸರ ಬಳೆಯ ಮಂಟಪ, ಚೋಳರ ಕಾಲದ ಶಿವಾಲಯ, ಆಡಳಿತ, ಕಲೆ-ಸಂಸ್ಕೃತಿ ಕಥನಗಳನ್ನು ಸಾರುವ ನೂರಾರು ಶಾಸನಗಳು ತಾಲ್ಲೂಕಿನಲ್ಲಿದ್ದು ಕೆಲವು ಈಗಾಗಲೇ ನಶಿಸಿಹೋಗಿದ್ದರೆ, ಕೆಲವು ಹೊಲ, ಗದ್ದೆಗಳಲ್ಲಿ ಗಡಿಗಲ್ಲುಗಳಾಗಿ ಕರುಗುವ ಹಂತದಲ್ಲಿ ಇವೆ.

ADVERTISEMENT

1490ರಲ್ಲಿ ಅಂದಿನ ರಾಜರು ಭೂದಾನ ಮತ್ತು ಗ್ರಾಮಾಡಳಿತಕ್ಕೆ ನೆರವಾದ ಬಗ್ಗೆ ತಾಲ್ಲೂಕಿನಲ್ಲಿ ಹಲವು ಶಾಸನಗಳು ಬೆಳಕು ಚೆಲ್ಲುತ್ತವೆ. ಪದಿನಾಡಿನ ಅರಸ ಮುದ್ದಭೂಪ ಪಟ್ಟಣವನ್ನು ಕೇಂದ್ರವಾಗಿ ಆಡಳಿತ ನಡೆಸಿದ ಬಗ್ಗೆ ಪುರಾವೆಗಳಿವೆ. ಯಳಂದೂರು ತಾಲ್ಲೂಕಿನ 28 ಊರು-ಕೇರಿಗಳಲ್ಲಿ 208 ಶಾಸನಗಳು ಲಭ್ಯವಾಗಿದೆ.

ಹೊನ್ನೂರು, ಯರಿಯೂರು, ಮಾಂಬಳ್ಳಿ, ಅಗರ ಹಾಗೂ ಕೆಸ್ತೂರು ಗ್ರಾಮಗಳಲ್ಲಿ ಅತಿ ಹೆಚ್ಚು ಶಾಸನಗಳು ಸಿಕ್ಕಿದ್ದು ಕೆಲವು ಮಳೆ, ಬಿಸಿಲಿಗೆ ನಲುಗಿವೆ. ಇದರಿಂದ ನಾಡು-ನುಡಿ ಇತಿಹಾಸ ಅಧ್ಯಯನಕ್ಕೆ ಹಿನ್ನಡೆಯಾಗಿದೆ ಎಂದು ಚಿಂತಕ ಅಂಬಳೆ ನಾಗೇಶ್ ಹೇಳುತ್ತಾರೆ.

ಬಿಳಿಗಿರಿ ಬೆಟ್ಟದ ಶಾಸನಗಳ ಅವನತಿ: ಬಿಳಿಗಿರಿ ಬೆಟ್ಟದ ಶ್ರವಣನ ಹರೆಯಲ್ಲಿ ಬಿದ್ದಿರುವ ಶಾಸನ ಕ್ರಿ.ಶ 1112ರ ಹೊಯ್ಸಳರ ವೀರ ಬಲ್ಲಾಳನ ಬಗ್ಗೆ ತಿಳಿಸುತ್ತದೆ. ಹದಿನಾಡಿನ ತಿರುಮಲ ನಾಯಕನ ಮಗ ಮುದ್ದುರಾಜ ಅಯ್ಯ ಬಿಳಿಕಲ್ಲು ತಿರುವೆಂಕಟನಾಥನಿಗೆ 30 ವರಹಗಳನ್ನು ನವರಾತ್ರಿ ಉತ್ಸವಕ್ಕೆ ನೀಡಿದ ಬಗ್ಗೆ ತಾಮ್ರ ಶಾಸನ ಬೆಳಕು ಚೆಲ್ಲುತ್ತದೆ. ದೇವಳದ ಗರುಡವಾಹನದ ಮೇಲೆ ಶಿಲ್ಪಿ ನಂಜುಂಡಾಚಾರಿಯ ಬಗ್ಗೆ ಉಲ್ಲೇಖವಿದೆ. ಇಂತಹ ಅಮೂಲ್ಯ ಶಾಸನಗಳು ಕಾಲಾಂತರದಲ್ಲಿ ಕಣ್ಮರೆಯಾಗುವ ಆತಂಕ ಎದುರಾಗಿದೆ.

ಬೀದಿಯಲ್ಲಿ ಅನಾಥವಾಗಿ ಬಿದ್ದಿರುವ ಶಿವಲಿಂಗ
ಯರಿಯೂರಿನಲ್ಲಿ ಅಂದ ಕಳೆದುಕೊಂಡ ಬಸವಶಿಲ್ಪ

ಗಡಿಕಲ್ಲಾದ ಶಾಸನಗಳು

ತಾಲ್ಲೂಕಿನ ಆಲ್ಕೆರೆ ಅಗ್ರಹಾರದಲ್ಲಿ ಶಾಸನಗಳು ಕೆಸರಿನಲ್ಲಿ ಸಿಲುಕಿವೆ. ಕೆಲವು ಹೊಲಗಳಲ್ಲಿ ಗಡಿ ಕಲ್ಲುಗಳಾಗಿವೆ. ಬಸವಮೂರ್ತಿ ಶಿವಲಿಂಗ ವೀರಗಲ್ಲು ಮಹಾಸತಿ ಕಲ್ಲು ಹಾಗೂ ವಿಭಿನ್ನ ಶೈಲಿಯಲ್ಲಿ ರಚಿಸಿರುವ ಜೈನ ವಿಗ್ರಹಗಳು ಮುಕ್ಕಾಗುತ್ತಿವೆ. ಕೆಲವೆಡೆ ದ್ರಾವಿಡ ಭಾಷೆಗಳ ಮೂಲವನ್ನು ಚಿತ್ರಿಸಿರುವ ಕನ್ನಡ ಮತ್ತು ತಮಿಳು ಶಾಸನಗಳ ರಕ್ಷಣೆಗೆ ಜನ ಸಮುದಾಯದ ಸಹಕಾರವೂ ಅತ್ಯಗತ್ಯ ಎನ್ನುತ್ತಾರೆ ಕವಿ ಗುಂಬಳ್ಳಿ ಬಸವರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.