ADVERTISEMENT

ಚಾ.ನಗರ| ಗ್ರ್ಯಾಚ್ಯುಟಿ ಬಿಡುಗಡೆಗೆ ಒತ್ತಾಯ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 3:09 IST
Last Updated 30 ಅಕ್ಟೋಬರ್ 2025, 3:09 IST
<div class="paragraphs"><p>2011 ರಿಂದ 2023ರ ಅವಧಿಯಲ್ಲಿ ನಿವೃತ್ತರಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರ್ಯಾಚ್ಯುಟಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಸಿಡಿಪಿಒಗೆ ಮನವಿ ಸಲ್ಲಿಸಲಾಯಿತು</p></div>

2011 ರಿಂದ 2023ರ ಅವಧಿಯಲ್ಲಿ ನಿವೃತ್ತರಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರ್ಯಾಚ್ಯುಟಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಸಿಡಿಪಿಒಗೆ ಮನವಿ ಸಲ್ಲಿಸಲಾಯಿತು

   

ಚಾಮರಾಜನಗರ: ನಿವೃತ್ತರಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸುಪ್ರೀಂಕೋರ್ಟ್ ಆದೇಶದಂತೆ ಗ್ರ್ಯಾಚ್ಯುಟಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂಭಾಗ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗ್ರ್ಯಾಚ್ಯುಟಿ ನೀಡುವಂತೆ ಆಗ್ರಹಿಸಿದರು.

ADVERTISEMENT

ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ.ಸುಜಾತಾ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ನಾಗೇಶ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಾಹಿದಾ ಬಾನು, ಖಜಾಂಚಿ ಗುರುಲಿಂಗಮ್ಮ, ಪ್ರಮುಖರಾದ ಚಿಕ್ಕತಾಯಮ್ಮ, ಸೋಮಮ್ಮ, ಜಯಮ್ಮ, ಪುಷ್ಪಾವತಿ, ಕಾವೇರಿ, ನಾಗರತ್ನ, ಸಂಪತ್ಕುಮಾರಿ, ರಾಜಮ್ಮ, ಶಶಿಕಲಾ, ಲಕ್ಷ್ಮಿ, ಮಣಿ, ಮಾದಲಾಂಬಿಕೆ ಪಾಲ್ಗೊಂಡಿದ್ದರು.

ಗುಂಡ್ಲುಪೇಟೆ ವರದಿ: ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುಪ್ರಿಂ ಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಾಲ್ಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಕರ್ನಾಟಕ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎಂಡಿಸಿಸಿ ಬ್ಯಾಂಕ್ ಮೂಲಕ ಸಾಗಿ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದರು. 

 ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷೆ ಗುರುಮಲ್ಲಮ್ಮ ಮಾತನಾಡಿ, 1975 ಅಕ್ಟೋಬರ್ 2 ರಂದು ಪ್ರಾರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹೆಮ್ಮರವಾಗಿದೆ. ರಾಜ್ಯದ ಸುಮಾರು 50 ಲಕ್ಷ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯುತ್ತಿರುವ ಕಾರಣಕ್ಕೆ ಮಾನವ ಸಂಪನ್ಮೂಲಗಳ ಬೆಳವಣಿಗೆಯನ್ನು ಖಾತ್ರಿಪಡಿಸುವ ಯೋಜನೆಯಾಗಿ ರೂಪುಗೊಂಡಿದೆ. ಯೋಜನೆಯ ಅಭಿವೃದ್ಧಿಗೆ ₹75 ಮತ್ತು ₹150 ಕನಿಷ್ಠ ಗೌರವಧನಕ್ಕೆ ಸಾವಿರಾರು ಜನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿದಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸುಮಾರು ₹ 183 ಕೋಟಿ ಅನುದಾನದ ಬಿಡುಗಡೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಆದರೆ ಇಲಾಖೆ ವಿಳಂಬ ಮಾಡುತ್ತಿದೆ. ಕೂಡಲೇ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಮೊಬೈಲ್ ಫೋನ್‌ ಕೊಟ್ಟು ಮೂರರಿಂದ ಆರು ವರ್ಷದೊಳಗಿನ ಮಕ್ಕಳ ಗಣತಿ ಕಾರ್ಯ ಮಾಡಿ, ಫೋಟೊ ತೆಗೆದು ಅಪ್‌ಲೋಡ್ ಮಾಡುವಂತೆ ಹೇಳಿದೆ. ಆದರೆ ಹಲವಡೆ ನೆಟ್‍ವರ್ಕ್ ಇಲ್ಲದಿರುವುದರಿಂದ ಆ ಹೆಚ್ಚುವರಿ ಕೆಲಸದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ, ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಸಂಘಟನೆ ತಾಲ್ಲೂಕು ಉಪಾಧ್ಯಕ್ಷೆ ಎಸ್.ಮಂಜುಳಾ, ಪ್ರಧಾನ ಕಾರ್ಯದರ್ಶಿ ದೇವಮ್ಮ, ಖಜಾಂಚಿ ಸುಮಿತ್ರ ಸೇರಿದಂತೆ ತಾಲೂಕಿನ ಅಂಗನವಾಡಿ ಎಲ್ಲಾ ವೃತ್ತದ ಪದಾಧಿಕಾರಿಗಳು ಹಾಗೂ ಅಂಗನವಾಡಿ ನಿವೃತ್ತ ಕಾರ್ಯಕರ್ತೆಯರು, ಸಹಾಯಕರು ಹಾಜರಿದ್ದರು.

ಬೇಡಿಕೆ ಈಡೇರಿಕೆಗೆ ಮನವಿ

ಸಂತೇಮರಹಳ್ಳಿ: ಗ್ರಾಚ್ಯುಟಿ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ಹಾಗೂ ಸಂತೇಮರಹಳ್ಳಿ ತಾಲ್ಲೂಕು ಸಮಿತಿ ವತಿಯಿಂದ ಬುಧವಾರ ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರು ಚಾಮರಾಜನಗರ ಮುಖ್ಯ ರಸ್ತೆ ಮಾರ್ಗ ಮೂಲಕ ಸಂತೇಮರಹಳ್ಳಿ ಶಿಶು ಅಭಿವೃದ್ಧಿ ಇಲಾಖೆ ಕಚೇರಿ ವರೆಗೆ ಮೆರವಣಿಗೆ ಮೂಲಕ ಸಾಗಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಪಾರ್ವತಮ್ಮ, ಕಾರ್ಯದರ್ಶಿ ತುಳಸಮ್ಮ, ಖಜಾಂಚಿ ಜಯಮಾಲ, ರಾಜಮ್ಮ, ಮಮತ, ಪುಟ್ಟಮ್ಮ, ಸುಶೀಲ, ಚಂದ್ರಕಲಾ, ಸುಧಾ, ಕೆ.ಬಿ.ಮೀಣಾ, ಕಾಂಚನಾ, ರತ್ನಮ್ಮ, ನಾಗರತ್ನ ಇದ್ದರು.

‘ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ’

ಕೊಳ್ಳೇಗಾಲ: ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸುಪ್ರೀಂ ಕೋರ್ಟ್ ಆದೇಶದಂತೆ ಗ್ರ್ಯಾಚ್ಯುಟಿ ಮೊತ್ತವನ್ನು ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಬಳಿಕ ಮೇಲ್ವಿಚಾರಕಿ ಶಿವಲೀಲಾ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಸಿಐಟಿಯು ಅಧ್ಯಕ್ಷೆ ಶಾಂತಮ್ಮ ಮಾತನಾಡಿ, ಗ್ರ್ಯಾಚ್ಯುಟಿ ಮೊತ್ತ ನೀಡದಿರುವುದು ಅನ್ಯಾಯ, ಹಾಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಿಐಟಿಯು ಸದಸ್ಯರಾದ ನಳಿನಾ, ಭಾಗ್ಯಲಕ್ಷ್ಮೀ, ಸುಮಾ, ನಿವೃತ್ತ ನೌಕರರಾದ ಪುಟ್ಟಸಿದ್ದಮ್ಮ, ಸುವರ್ಣ, ವಿಜಯ, ಶಾಂತಮ್ಮ, ರತ್ನಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.