
ಚಾಮರಾಜನಗರ: ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಲಾಗಿದ್ದ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾನಿರತರು ಮೆರವಣಿಗೆಯ ಮೂಲಕ ಅಗ್ರಹಾರ ಬೀದಿ, ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಈ ಸಂದರ್ಭ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭಿತ್ತಿಪತ್ರಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಮಾತನಾಡಿ, ಶಿಕ್ಷಣ ಇಲಾಖೆಯು ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದನ್ನು ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆ.ಜಿ, ಯುಕೆಜಿ ನಡೆಯಬೇಕು. ಪ್ರತಿವರ್ಷ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು.
ಅಂಗನವಾಡಿ ನೌಕರರ ಪಾಲಿಗೆ ಕರಾಳವಾಗಿರುವ 4 ಕಾರ್ಮಿಕ ಸಂಹಿತೆಗಳು ರದ್ದುಪಡಿಸಬೇಕು. ಶಾಸನ ಬದ್ದ ಸವಲತ್ತುಗಳನ್ನು ನೀಡದ ‘ಶ್ರಮಶಕ್ತಿ ನೀತಿ 2025 ರದ್ದುಗೊಳಿಸಬೇಕು, ಅಂಗನವಾಡಿ ನೌಕರರಿಗೂ ಮುಟ್ಟಿನ ರಜೆ ನೀಡಬೇಕು. 4.56 ಕೋಟಿ ಸ್ಕೀಂ ಕಾರ್ಮಿಕರ ಸೇವಾ ಷರತ್ತುಗಳ ಸುಧಾರಣೆಗೆ ಪ್ರತ್ಯೇಕ ವೇತನ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ಐಸಿಡಿಎಸ್ ಯೋಜನೆ ಖಾಯಂಗೊಳಿಸಬೇಕು, ಅಲ್ಲಿಯವರೆಗೂ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು. 2018ರ ಫಲಾನುಭವಿಗಳ ಘಟಕ ವೆಚ್ಚವನ್ನು ಹೆಚ್ಚಳ ಮಾಡಬೇಕು, ಸ್ಥಳೀಯ ಆಹಾರ-ಪದಾರ್ಥಗಳನ್ನು ನೀಡಬೇಕು. 2018ರಿಂದ ಕೇಂದ್ರ ಸರ್ಕಾರ ಅಂಗನವಾಡಿ ನೌಕರರಿಗೆ ವೇತನ ಹೆಚ್ಚಳ ಮಾಡಿಲ್ಲ, ಅಗತ್ಯ ವಸ್ತುಗಳ ಬೆಲೆ ಗನಕ್ಕೇರಿದ್ದರೂ ಅಂಗನವಾಡಿ ಕಾರ್ಯಕರ್ತೆಗೆ ₹ 2,700, ಸಹಾಯಕಿಯರಿಗೆ ₹ 1,350 ಮಾತ್ರ ನೀಡಲಾಗುತ್ತಿದ್ದು ಗೌರವಯುತವಾಗಿ ಬದುಕಲು ಸಾದ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರ ಕನಿಷ್ಠ ವೇತನ ಜಾರಿ ಮಾಡಬೇಕು, ಎಫ್‌ಆರ್‌ಎಸ್ ರದ್ದು ಮಾಡಬೇಕು, ತಂತ್ರಜ್ಞಾನ ಯುಗದಲ್ಲಿ ಅಗತ್ಯತೆ ಹೆಚ್ಚಾಗಿದ್ದು ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವೈಫೈ ಸೌಲಭ್ಯ ನೀಡಬೇಕು. ಚುನಾವಣಾ ಕೆಲಸಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತರ ಮೇಲೆ ಏಕಾಏಕಿ ಶಿಸ್ತುಕ್ರಮ ಜರುಗಿಸಬಾರದು, ಬಂಧನವಾದಾಗ ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಕೆಲಸದಿಂದ ವಜಾಗೊಳಿಸಬಾರದು, ಅಂಗನವಾಡಿ ನೌಕರರ ನೌಕರಿ ಖಾಯಂ ಆಗುವವರೆಗೂ ಕನಿಷ್ಠ ₹ 26,000 ವೇತನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷೆ ಗುರುಮಲ್ಲಮ್ಮ, ಕಾರ್ಯದರ್ಶಿ ದೇವಮಣಿ, ಚಾಮರಾಜನಗರ ತಾಲ್ಲೂಕು ಕಾರ್ಯದರ್ಶಿ ಶಾಹಿದಾ ಬಾನು, ಖಜಾಂಚಿ ಗುರುಲಿಂಗಮ್ಮ, ಸಂತೇಮರಹಳ್ಳಿ ಅಧ್ಯಕ್ಷೆ ಪಾರ್ವತಮ್ಮ, ಕಾರ್ಯದರ್ಶಿ ತೊಳಸಮ್ಮ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷೆ
ಶಾಂತಮ್ಮ, ಯಳಂದೂರು ತಾಲ್ಲೂಕು ಅಧ್ಯಕ್ಷೆ ಮೀನಾಕ್ಷೆ, ಬಿಸಿಯೂಟ ಜಿಲ್ಲಾಧ್ಯಕ್ಷೆ, ಶಿವಮ್ಮ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.