ADVERTISEMENT

ಲಾಕ್‌ಡೌನ್‌ನಿಂದ ಸಂಚಾರಕ್ಕೆ ಬ್ರೇಕ್: ಬಂಡೀಪುರದಲ್ಲೂ ಪ್ರಾಣಿಗಳ ಸ್ವಚ್ಛಂದ ಓಡಾಟ

ಮಲ್ಲೇಶ ಎಂ.
Published 4 ಜೂನ್ 2021, 19:30 IST
Last Updated 4 ಜೂನ್ 2021, 19:30 IST
ರಾಷ್ಟ್ರೀಯ ಹೆದ್ದಾರಿ 212ನಲ್ಲಿ ರಸ್ತೆ ದಾಟುತ್ತಿರುವ ಜಿಂಕೆಗಳು  ಚಿತ್ರ: ಮಲ್ಲೇಶ ಎಂ.
ರಾಷ್ಟ್ರೀಯ ಹೆದ್ದಾರಿ 212ನಲ್ಲಿ ರಸ್ತೆ ದಾಟುತ್ತಿರುವ ಜಿಂಕೆಗಳು  ಚಿತ್ರ: ಮಲ್ಲೇಶ ಎಂ.   

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೂ ಲಾಕ್‌ಡೌನ್‌ ಕಾರಣದಿಂದ ವಾಹನಗಳ ಸಂಚಾರ, ಪ್ರವಾಸಿಗರ ಓಡಾಟಕ್ಕೆ ಬ್ರೇಕ್‌ ಬಿದ್ದಿದ್ದು, ಕಾಡಿನಲ್ಲಿ ಪ್ರಾಣಿಗಳುಸ್ವತಂತ್ರವಾಗಿ ರಸ್ತೆಯ ಬದಿಯಲ್ಲಿ ಮೇಯುತ್ತ ಅಲೆದಾಡುತ್ತಿವೆ.

ಅರಣ್ಯ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಜಿಂಕೆ, ಆನೆ ನವಿಲು, ಕಾಡೆಮ್ಮೆಗಳ ದರ್ಶನ ಹೆಚ್ಚಾಗುತ್ತಿದೆ. ಮಳೆಯಾಗಿ ಕಾಡು ಕಳೆಗಟ್ಟಿರುವುದರಿಂದ ಪ್ರಾಣಿಗಳು ಕೂಡ ಸ್ವಚ್ಛಂದವಾಗಿ ವಿಹರಿಸುತ್ತಿವೆ.

‘ಲಾಕ್ಡೌನ್‌ನಿಂದಾಗಿ ಸರಕು ಸಗಾಣೆ ವಾಹನ ಬಿಟ್ಟು ಉಳಿದೆಲ್ಲ ವಾಹನಗಳಿಗೆ ನಿರ್ಬಂಧ ಹೇರಿರುವುದರಿಂದ ವಾಹನಗಳು ಸಂಖ್ಯೆ ಕಡಿಮೆ ಇದ್ದು ಪ್ರಾಣಿಗಳ ಒಡಾಟಕ್ಕೆ ಅನುಕೂಲವಾಗಿಲ್ಲ. ಹಿಂದೆ ಈ ರಸ್ತೆಯಲ್ಲಿ ಪ್ರಾಣಿಗಳು ಕಂಡರೆ ಪ್ರಾವಾಸಿಗರು ವಾಹನಗಳನ್ನು ನಿಲ್ಲಿಸಿ ಪೋಟೋ ತೆಗೆಯುವುದು, ಆಹಾರ ನೀಡುವುದು, ಕಾಡು ಪ್ರಾಣಿಗಳನ್ನು ಪ್ರಚೋದಿಸುವ ಕೆಲಸವನ್ನು ಮಾಡಿ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆ ಮಾಡುತ್ತಿದ್ದರು. ಇದೀಗ ಯಾವುದೇ ತೊಂದರೆ ಇಲ್ಲದೆ ಅಡ್ಡಿ ಆತಂಕ ಇಲ್ಲದೇ ರಸ್ತೆಯ ಬದಿಯಲ್ಲಿ ಇರುತ್ತವೆ’ ಎಂದು ಇಲಾಖೆ ಬೀಟ್ ಸಿಬ್ಬಂದಿ ತಿಳಿಸಿದರು.

ADVERTISEMENT

‘ತಾಲ್ಲೂಕಿನ ಕಾಡಂಚಿನ ಭಾಗದಲ್ಲಿ ಐಷಾರಾಮಿ ಹೋಟೆಲ್‌ಗಳು ಸಹ ಮುಚ್ಚಿರುವುದರಿಂದ ಹಂದಿಗಳ ಹಾವಳಿ ಸಹ ಕಡಿಮೆಯಾಗಿದೆ. ಹೋಟೆಲ್, ಹೋಂ ಸ್ಟೇ ನಡೆಸುವವರು ತ್ಯಾಜ್ಯವನ್ನು ಪಕ್ಕದಲ್ಲೇ ಸುರಿಯುವ ಕಾರಣ ಇವುಗಳನ್ನು ತಿನ್ನಲು ಹಂದಿಗಳು ಅದೇ ಸ್ಥಳದಲ್ಲಿ ಬೀಡು ಬಿಡುತ್ತಿದ್ದವು. ರಾತ್ರಿ ಸಮಯದಲ್ಲಿ ರೈತರ ಜಮೀನುಗಳಿಗೆ ಬೆಳೆ ಹಾಳು ಮಾಡುತ್ತಿದ್ದವು.ಹೋಟೆಲ್, ಹೋಂ ಸ್ಟೇ ಮುಚ್ಚಿರುವ ಕಾರಣ ಹಂದಿಗಳ ಹಾವಳಿ ಕಡಿಮೆ ಆಗಿದೆ’ ಎಂದು ಮಂಗಲ ಗ್ರಾಮದ ಉಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.