ADVERTISEMENT

ಧೂಪ ಮಾರಾಟ ಟೆಂಡರ್: ಕೈ ಬಿಡುವಂತೆ ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:06 IST
Last Updated 26 ಡಿಸೆಂಬರ್ 2025, 6:06 IST

ಹನೂರು: ಮಹದೇಶ್ವರ ಬೆಟ್ಟದ ತಪ್ಪಲಿನ ತಾಳುಬೆಟ್ಟದಲ್ಲಿ ಧೂಪ ಮಾರಾಟದ ಟೆಂಡರ್ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಧೂಪ ಮಾರಾಟಗಾರರು ಶಾಸಕ ಎಂ.ಆರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಮಹದೇಶ್ವರ ಬೆಟ್ಟದ ತಪ್ಪಲಿನ ತಾಳುಬೆಟ್ಟದಲ್ಲಿ ಕಳೆದ ಹಲವು ವರ್ಷಗಳಿಂದ ಸುಮಾರು 70ಕ್ಕೂ ಹೆಚ್ಚು ಬಡ ಕುಟುಂಬಗಳು ಧೂಪ ಮಾರಾಟದ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬಗಳ ಜೀವನೋಪಾಯವನ್ನು ನಡೆಸಿಕೊಂಡು ಬರುತ್ತಿವೆ. ಇದು ನಮಗೆ ಏಕೈಕ ಆದಾಯದ ಮೂಲವಾಗಿದ್ದು, ಯಾವುದೇ ಸರ್ಕಾರಿ ಸಹಾಯವಿಲ್ಲದೆ ಸ್ವಾವಲಂಬನೆಯಿಂದ ಬದುಕು ಸಾಗಿಸುತ್ತಿರುವ ಕುಟುಂಬಗಳಾಗಿವೆ. ಆದರೆ ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರವು ಧೂಪ ಮಾರಾಟಕ್ಕೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಮುಂದಾಗಿರುವುದು ಅತ್ಯಂತ ಖಂಡನೀಯ ಹಾಗೂ ಬಡ ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆಯುವ ಕ್ರಮವಾಗಿದೆ. ಈ ರೀತಿಯ ಟೆಂಡರ್ ಪ್ರಕ್ರಿಯೆ ಜಾರಿಯಾದರೆ, ದಶಕಗಳಿಂದ ದೂಪ ಮಾರಾಟದ ಮೇಲೆ ಅವಲಂಬಿತವಾಗಿರುವ ಈ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸರ್ಕಾರಕ್ಕೆ ಆದಾಯ ಸಂಗ್ರಹಿಸಲು ಸಾವಿರಾರು, ಲಕ್ಷಾಂತರ ಮಾರ್ಗಗಳಿವೆ. ಆದರೆ ಬಡವರ ಬದುಕಿನ ಮೇಲೆ ಬಲವಂತವಾಗಿ ಹೊಡೆದು ಹಣ ಸಂಗ್ರಹಿಸುವುದು ಯಾವುದೇ ರೀತಿಯಿಂದಲೂ ನ್ಯಾಯಸಮ್ಮತವಲ್ಲ. ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ, ಅದರಿಂದಲೇ ಸಾಕಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ದೂಪ ಮಾರಾಟದ ಟೆಂಡರ್ ಎಂಬುದು ಅದರ ಪರಿಹಾರವಲ್ಲ.

ADVERTISEMENT

ಆದ್ದರಿಂದ, ತಾವುಗಳು ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಿ, ಯಾವುದೇ ಕಾರಣಕ್ಕೂ ತಾಳುಬೆಟ್ಟದಲ್ಲಿ ಧೂಪ ಮಾರಾಟವನ್ನು ಟೆಂಡರ್ ವ್ಯಾಪ್ತಿಗೆ ಒಳಪಡಿಸಬಾರದೆಂದು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ತಾವು ನೀಡಿರುವ ಮನವಿಯಲ್ಲಿತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.