ADVERTISEMENT

ಸಂತೇಮರಹಳ್ಳಿ | ಶಾಲೆ ಕೋವಿಡ್ ಕೇಂದ್ರ; ಬಿಲ್ವಿದ್ಯೆ, ಕತ್ತಿ ವರಸೆ ಅಭ್ಯಾಸ ಮೊಟಕು

ಕ್ರೀಡಾ ವಸತಿ ಶಾಲೆ ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತನೆ

ಮಹದೇವ್ ಹೆಗ್ಗವಾಡಿಪುರ
Published 18 ಜನವರಿ 2022, 19:45 IST
Last Updated 18 ಜನವರಿ 2022, 19:45 IST
ಸಂತೇಮರಹಳ್ಳಿಯಲ್ಲಿರುವ ಬಿಲ್ವಿದ್ಯೆ, ಕತ್ತಿವರಸೆ ಕ್ರೀಡಾ ವಸತಿ ಶಾಲೆ
ಸಂತೇಮರಹಳ್ಳಿಯಲ್ಲಿರುವ ಬಿಲ್ವಿದ್ಯೆ, ಕತ್ತಿವರಸೆ ಕ್ರೀಡಾ ವಸತಿ ಶಾಲೆ   

ಸಂತೇಮರಹಳ್ಳಿ:ಜಿಲ್ಲೆಯಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆಸಂತೇಮರಹಳ್ಳಿಯಲ್ಲಿರುವ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಕ್ರೀಡಾ ವಸತಿ ನಿಲಯವನ್ನು ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದ್ದು, ವಿದ್ಯಾರ್ಥಿಗಳು ವಸತಿ ನಿಲಯವನ್ನು ಖಾಲಿ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ತರಬೇತಿ ಮೊಟಕಾಗುತ್ತಿದೆ.

ಈ ಕ್ರೀಡಾ ವಸತಿ ಶಾಲೆಯಲ್ಲಿ ಪ್ರೌಢಶಾಲೆಯಿಂದ ಪದವಿವರೆಗಿನ 40 ವಿದ್ಯಾರ್ಥಿಗಳು ಇದ್ದಾರೆ. ಇದನ್ನು60 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರವಾಗಿ ಪರಿವರ್ತಿಸಲು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.

ಈ ಕ್ರೀಡಾ ವಸತಿ ಶಾಲೆಯಲ್ಲಿ ಬಿಲ್ವಿದ್ಯೆ ಮತ್ತು ಕತ್ತಿ ವರಸೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ 11 ಮಂದಿ ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆ, 16 ಮಂದಿ ಪಿಯು ಕಾಲೇಜಿನಲ್ಲಿ ಹಾಗೂ 13 ವಿದ್ಯಾರ್ಥಿಗಳು ಕುದೇರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಓದುತ್ತಿದ್ದಾರೆ.

ADVERTISEMENT

ಇಲ್ಲಿ ಬಿಲ್ವಿದ್ಯೆ ಹಾಗೂ ಕತ್ತಿವರಸೆ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಹಾಗೂ ಅಂತರ ವಿಶ್ವವಿದ್ಯಾಲಯ ಟೂರ್ನಿಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇವರು ಮುಂದಿನ ಹಂತದ ಸ್ಪರ್ಧೆಗೆ ತರಬೇತಿ ಪಡೆಯಬೇಕಾಗಿದೆ. ಕ್ರೀಡಾ ವಸತಿ ಶಾಲೆ ಕೋವಿಡ್ ಸೆಂಟರ್ ಆಗಿ ಪರಿವರ್ತನೆ ಯಾಗುತ್ತಿರುವುದರಿಂದ ಕ್ರೀಡಾಪಟುಗಳ ಮುಂದಿನ ಅಭ್ಯಾಸಕ್ಕೆ ಅವಕಾಶ ಇಲ್ಲದಂತಾಗಿದೆ.

ರಾಜ್ಯದ ಬೀದರ್, ಹುಬ್ಬಳ್ಳಿ, ಧಾರಾವಾಡ, ಚಿಕ್ಕಮಗಳೂರು, ಬಳ್ಳಾರಿ, ಮೈಸೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಮಕ್ಕಳು ಇಲ್ಲಿದ್ದಾರೆ.

ವಸತಿ ಶಾಲೆ ಕೋವಿಡ್‌ ಕೇರ್‌ ಕೇಂದ್ರವಾಗಿ ರುವುದರಿಂದ ಹಲವು ವಿದ್ಯಾರ್ಥಿಗಳು ಈಗ ಊರಿಗೆ ತೆರಳಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಓದಿಗೆ ಅವಕಾಶ ಮಾಡಿಕೊಡುವಂತೆ ಅಲ್ಲಿನ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗುವುದು ಎಂದು ಪ್ರೌಢಶಾಲೆಯ ಶಿಕ್ಷಕರು ಮಕ್ಕಳಿಗೆ ತಿಳಿಸಿದ್ದಾರೆ ಎಂದು ಮಕ್ಕಳು ಹೇಳುತ್ತಾರೆ.

ಈ ಬಗ್ಗೆ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಅವರು, ’ಜಿಲ್ಲಾಧಿಕಾರಿಯವರ ಆದೇಶದಂತೆ ಬಿಲ್ವಿದ್ಯೆ ಮತ್ತು ಕತ್ತಿವರಸೆ ವಸತಿ ಶಾಲೆಯಲ್ಲಿ ಸದ್ಯಕ್ಕೆ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಿ ಅವರಿಗೆ ಅನುಕೂವಿರುವ ಕಡೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಚಾಮರಾಜನಗರ ಸರ್ಕಾರಿ ವಸತಿ ನಿಲಯ ಹಾಗೂ ಕುದೇರು ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಸತಿ ನಿಲಯದಲ್ಲಿ ಮಕ್ಕಳಿಗೆ ವ್ಯವಸ್ಥೆ ಮಾಡಲಾಗುವುದು‘ ಎಂದರು.

ಅಭ್ಯಾಸಕ್ಕೆ ಹಿನ್ನಡೆ

ಕ್ರೀಡಾ ವಸತಿ ಶಾಲೆಯನ್ನು ಕಳೆದ ವರ್ಷದ ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್‌ವರೆಗೂ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಆಗ ಲಾಕ್‌ಡೌನ್‌ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಇತ್ತು. ಹಾಗಾಗಿ ವಿದ್ಯಾರ್ಥಿಗಳಿಗೆ ಯಾರಿಗೂ ತೊಂದರೆಯಾಗಿಲ್ಲ.

ಇದೀಗ ವಿದ್ಯಾರ್ಥಿಗಳು ಶಾಲೆ, ವಸತಿ ಶಾಲೆ ಆರಂಭಗೊಂಡು ವಿದ್ಯಾರ್ಥಿಗಳು ಮೂರು ತಿಂಗಳು ಮಾತ್ರ ವ್ಯಾಸಂಗದ ಜೊತೆಗೆ ಬಿಲ್ವಿದ್ಯೆ ಹಾಗೂ ಕತ್ತಿವರಸೆ ಅಭ್ಯಾಸ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಕಲಿಯುವ ಸಮಯಕ್ಕೆ ಹಾಸ್ಟೆಲ್‍ನಿಂದ ಹೊರಹೋಗಬೇಕಲ್ಲ ಎಂಬ ಅಸಹಾಯಕತೆಯನ್ನು ವಿದ್ಯಾರ್ಥಿಗಳು ಹೊರ ಹಾಕುತ್ತಿದ್ದಾರೆ.

ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 60 ಹಾಸಿಗೆಯಿದ್ದು, ಈಗಾಗಲೇ 22 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳಿಂದ ಕೋವಿಡ್‌ ಪ್ರಕರಣ ಏರಿಕೆಯಾಗುತ್ತಿದ್ದು, ಇಲ್ಲಿ ರೋಗಿಗಗಳು ಭರ್ತಿಯಾಗಬಹುದು ಎಂದು ಆರೋಗ್ಯ ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳು ಭರ್ತಿಯಾದ ನಂತರ ರೋಗಿಗಳನ್ನು ಇಲ್ಲಿಗೆ ವರ್ಗಾಯಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.