ADVERTISEMENT

ಹನೂರು: ಜಿಲ್ಲೆಯಲ್ಲಿ ಕಳ್ಳ ಬೇಟೆಗಾರರ ಜಾಲ ಸಕ್ರಿಯ?

ಕಳ್ಳಬೇಟೆ: ಬಾಲ್ಯದಿಂದಲೇ ಬೇಟೆಯಲ್ಲಿ ಪಳಗಿದ ಬಂಧಿತ ಆರೋಪಿಗಳು, ಹುಲಿಯ ಮೂಳೆ ಎರಡು ವರ್ಷ ಹಳೆಯದು

ಬಿ.ಬಸವರಾಜು
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ವಿವಿಧ ಪ್ರಾಣಿಗಳ ಚರ್ಮಗಳು
ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿರುವ ವಿವಿಧ ಪ್ರಾಣಿಗಳ ಚರ್ಮಗಳು   

ಹನೂರು: ಬಿಳಿಗಿರಿ ರಂಗನಾಥಸ್ವಾಮಿ ಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮದಲ್ಲಿ ಪ್ರಾಣಿಗಳು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ ಹಾಗೂ ಮೂಳೆಗಳನ್ನು ಸಾಗಿಸುವಾಗ ಬಂಧಿಸಲಾಗಿರುವ ನಾಲ್ವರು ಆರೋಪಿಗಳು ಬೇಟೆಯಾಡುವುದರಲ್ಲಿ ಬಾಲ್ಯದಲ್ಲೇ ಪ‍ಳಗಿದವರು. ಅಷ್ಟೇ ಅಲ್ಲ, ಇವರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಆಘಾತಕಾರಿ ಅಂಶ ವಿಚಾರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

‘ಬಂಧಿತರ ಬಳಿ ಇದ್ದ ಪ್ರಾಣಿಗಳ ಚರ್ಮ ಹಾಗೂ ಮೂಳೆಗಳ ಪೈಕಿ, ಎರಡು ಹಾರುವ ಅಳಿಲಿನ ಚರ್ಮ ಅವರ ಸಂಗ್ರಹದಲ್ಲಿ ಇದ್ದಿದ್ದು ಅರಣ್ಯಾಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಹಾರುವ ಅಳಿಲು ಮನುಷ್ಯರ ಕಣ್ಣಿಗೆ ಗೋಚರವಾಗುವುದೇ ಅಪರೂಪ. ಅಂತಹದ್ದರಲ್ಲಿ ಅವುಗಳನ್ನು ಬೇಟೆಯಾಡಿ, ಚರ್ಮ ಸಂಗ್ರಹಿಸಿಟ್ಟಿದ್ದಾರೆಂದರೆ ಅವರು ಬೇಟೆಯಾಡುವುದರಲ್ಲಿ ಎಷ್ಟು ಪಳಗಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು.

ವಶಪಡಿಸಿಕೊಂಡಿರುವಎರಡು ಜಿಂಕೆ, ಎರಡು ಕಾಡುಕುರಿ, ಎರಡು ಹಾರುವ ಅಳಿಲಿನ ಚರ್ಮಗಳು ಸ್ವಲ್ಪ ಹಳೆಯದು. ಇವುಗಳನ್ನೆಲ್ಲ ಒಂದು ವರ್ಷದಿಂದೀಚೆಗೆ ಬೇಟೆಯಾಡಿ ಸಂಗ್ರಹಿಸಿದ್ದು ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

‘ಆದರೆ, ಸೀಳುನಾಯಿಯನ್ನು ಇತ್ತೀಚೆಗೆ ಬೇಟೆಯಾಗಿ ಅದರ ಚರ್ಮವನ್ನು ಸಂಗ್ರಹಿಸಿದ್ದಾರೆ. ಅದರ ಮೂಳೆಗಳಲ್ಲಿ ಈಗಲೂ ವಾಸನೆ ಬರುತ್ತಿದೆ.ಹಣದ ಆಸೆಗೆ ಈ ಕೃತ್ಯ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವರ ಹಿಂದೆ ದೊಡ್ಡ ಜಾಲವೇ ಇದೆ ಎಂಬುದೂ ಗೊತ್ತಾಗಿದೆ. ಸೋಮವಾರ ನ್ಯಾಯಾಲಯದ ಅನುಮತಿ ಪಡೆದು ಪುನಃ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಟಿ.ವಿ ಬಾಕ್ಸ್‌ನಲ್ಲಿ ಸಾಗಣೆ: ಬೇಟೆಯಾಡಿದ ಪ್ರಾಣಿಗಳ ಚರ್ಮಗಳನ್ನು ಬೆಂಕಿಯಲ್ಲಿ ತಾವೇ ಹದಗೊಳಿಸಿದ್ದ ಆರೋಪಿಗಳು ಅದನ್ನು ಜಮೀನುಗಳಲ್ಲಿ ಹುದುಗಿಸಿಟ್ಟದ್ದರು. ಈಗ ಮಾರಾಟಕ್ಕಾಗಿ, ಯಾರಿಗೂ ಅನುಮಾನ ಬಾರದಂತೆ, ಅವುಗಳನ್ನು ಟಿ.ವಿ ಬಾಕ್ಸಿನಲ್ಲಿ ಪ್ಯಾಕ್‌ ಮಾಡಿ ಸಾಗಣೆ ಮಾಡುತ್ತಿದ್ದರು.

‘ನಾಲ್ವರು ಕಾಲೇಜಿನ ಯುವಕರಂತೆ ಬ್ಯಾಗ್ ಹಾಕಿಕೊಂಡು ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗರಂತೆ ಕಾಣುತ್ತಿದ್ದರು. ಅವರನ್ನು ಹಿಡಿದು ಪರಿಶೀಲಿಸಿದಾಗಲೇ ಅವರು ಬೇಟೆಗಾರರು ಎಂಬುದು ತಿಳಿದು ಬಂತು’ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲಿಯ ಚರ್ಮ, ಹಲ್ಲು ಮಾರಾಟ?
ಬಂಧಿತರಿಂದ ಒಂದು ಹುಲಿಯ ಮೂಳೆಗಳು ಹಾಗೂ ನಾಲ್ಕು ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹುಲಿಯ ಮೂಳೆಗಳು ಹಾಗೂ ಉಗುರುಗಳನ್ನು ಖಾಸಗಿ ವಾಹನದಲ್ಲಿ ಸಾಗಿಸಿದರೆ ಅನುಮಾನ ಬರುತ್ತದೆ ಎಂದು ಬೆಳ್ಳಿಗ್ಗೆ 8 ಗಂಟೆಗೆ ಗ್ರಾಮಕ್ಕೆ ಬರುವ ಬಸ್ಸಿನಲ್ಲಿ ತಂದಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.

‘ಮೂಳೆ ಹಾಗೂ ಉಗುರುಗಳನ್ನು ಗಮನಿಸಿದರೆ, ಎರಡು ವರ್ಷಗಳ ಹಿಂದೆ ಹುಲಿಯನ್ನು ಬೇಟೆಯಾಡಿರಬಹುದು. ಅದರ ಚರ್ಮ ಹಾಗೂ ಹಲ್ಲುಗಳನ್ನು ಈಗಾಗಲೇ ಮಾರಾಟ ಮಾಡಿದ್ದಾರೆ. ಮೂಳೆ ಹಾಗೂ ಉಗುರುಗಳನ್ನು ಮಣ್ಣಿನಲ್ಲಿ ಹೂತಿಟ್ಟಿದ್ದರು. ಈಗ ಇತರೆ ಪ್ರಾಣಿಗಳ ಚರ್ಮ, ಮೂಳೆಗಳ ಜೊತೆಗೆ ಇವುಗಳನ್ನೂ ಮಾರಾಟ ಮಾಡುವ ಉದ್ದೇಶದಿಂದ ಹುಲಿಯ ಮೂಳೆಗಳು ಹಾಗೂ ನಾಲ್ಕು ಉಗುರುಗಳನ್ನೂ ಸಾಗಿಸಲು ಯತ್ನಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಸತ್ತ ಹುಲಿಯ ಮೂಳೆಗಳನ್ನು ಸಂಗ್ರಹಿಸಿರುವುದಾಗಿ ಬಂಧಿತರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. ಸಂಗ್ರಹಿಸಿರುವ ಮೂಳೆ ಹಾಗೂ ಉಗುರುಗಳನ್ನು ನೋಡಿದರೆ, ‌ಹುಲಿಯನ್ನು ಬೇಟೆಯಾಗಿ ಕೊಂದಿರುವ ಸಾಧ್ಯತೆಯೇ ಹೆಚ್ಚಿದ್ದಂತೆ ಕಾಣಿಸುತ್ತಿದ್ದೆ. ಈ ಪ್ರಕರಣವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‍ಟಿಸಿಎ) ಮೂಲಕವೇ ತನಿಖೆ ನಡೆಸಲಾಗುವುದು ಎಂದು ವಿ.ಏಡುಕುಂಡಲು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.