ADVERTISEMENT

ವನ್ಯಜೀವಿ ಸಂರಕ್ಷಣೆಯ ಪಾಲುದಾರರಾಗಿ: ಸಿ.ಟಿ.ಶಿಲ್ಪಾ ನಾಗ್‌

ಬಿಆರ್‌ಟಿ: ವನ್ಯಜೀವಿ ಸಪ್ತಾಹ, ವಿದ್ಯಾರ್ಥಿಗಳು, ಅಧಿಕಾರಿಗಳಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 13:21 IST
Last Updated 4 ಅಕ್ಟೋಬರ್ 2023, 13:21 IST
69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಚಾಮರಾಜನಗರದಲ್ಲಿ ಬುಧವಾರ ನಡೆದ ಅರಣ್ಯ ವನ್ಯಜೀವಿ ಸಂರಕ್ಷಣೆಯ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡರು 
69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಚಾಮರಾಜನಗರದಲ್ಲಿ ಬುಧವಾರ ನಡೆದ ಅರಣ್ಯ ವನ್ಯಜೀವಿ ಸಂರಕ್ಷಣೆಯ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡರು    

ಚಾಮರಾಜನಗರ: ‘ಭೂಮಿ, ಪರಿಸರ ಮನುಷ್ಯನಿಗಷ್ಟೇ ಸೇರಿದ್ದಲ್ಲ. ಗಿಡ ಮರ, ಪ್ರಾಣಿ ಪಕ್ಷಗಳಿಗೆ ಸೇರಿದ್ದು. ಅರಣ್ಯ, ವನ್ಯಜೀವಿ ಸಂಪತ್ತನ್ನು ಸಂರಕ್ಷಣೆಯಲ್ಲಿ ಎಲ್ಲರೂ ಪಾಲುದಾರರಾಗಬೇಕು’ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಬುಧವಾರ ಹೇಳಿದರು.

69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಚಾಮರಾಜನಗರ ಅದೃಷ್ಟವಂತ ಜಿಲ್ಲೆ. ಶೇ 50ರಷ್ಟು ಭೂಭಾಗ ಅರಣ್ಯದಿಂದ ಕೂಡಿದೆ. ಅದಕ್ಕೆ ನಾವು ಹೆಮ್ಮೆ ಪಡಬೇಕು. ನಮ್ಮ ಚೆಲುವ ಚಾಮರಾಜನಗರವನ್ನು ಚೆಲುವ ಚಾಮರಾಜನಗರವಾಗಿಯೇ ಉಳಿಸಿಕೊಳ್ಳಬೇಕು. ಈಗಿನ ಮಕ್ಕಳಿಗೆ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರೆ ಜಾಗೃತಿ ಸಂದೇಶ ಮುಂದಿನ ಪೀಳಿಗೆಗೂ ತಲುಪುತ್ತದೆ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಭಾಗಿಗಳನ್ನಾಗಿ ಮಾಡಲಾಗಿದೆ’ ಎಂದರು. 

ADVERTISEMENT

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಮಾತನಾಡಿ, ‘ಬಿಆರ್‌ಟಿ ಅರಣ್ಯ ಪ್ರದೇಶ ಅಪರೂಪವಾದುದು. ಇಲ್ಲಿ ಏಳು ರೀತಿಯ ಅರಣ್ಯ ಇವೆ. ಮಕ್ಕಳಿಗೆ ಅರಣ್ಯದ ಬಗ್ಗೆ ತಿಳಿಸುವ ಉದ್ದೇಶದಿಂದ 2011ರಿಂದ ಚಿಣ್ಣರ ವನದರ್ಶನ ಕಾರ್ಯಕ್ರಮ ಇಲ್ಲಿ ಆರಂಭವಾಗಿತ್ತು. ಇದನ್ನೇ ಮಾದರಿಯಾಗಿಟ್ಟುಕೊಂಡು ಅರಣ್ಯ ಇಲಾಖೆ ರಾಜ್ಯದಾದ್ಯಂತ ವಿಸ್ತರಿಸಿತ್ತು’ ಎಂದರು. 

‘ಅರಣ್ಯ ರಕ್ಷಣೆ ಅರಣ್ಯ ಇಲಾಖೆಯ ಕೆಲಸ ಮಾತ್ರ ಅಲ್ಲ. ಪ್ರತಿಯೊಬ್ಬರೂ ಅರಣ್ಯ ಇಲಾಖೆ ಜೊತೆ ಕೈಜೋಡಿಸಬೇಕು. ನೆಲ, ಜಲ, ನಾಡಿನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಂವಿಧಾನ ಹೇಳಿದೆ’ ಎಂದರು.  

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಮಾತನಾಡಿ, ‘ವನ್ಯಜೀವಿಗಳು ನಮ್ಮ ಬಳಿ ಇರುವ ದೊಡ್ಡ ಸಂಪತ್ತು. ಅವುಗಳನ್ನು ಸಂರಕ್ಷಿಸಬೇಕು ಎಂಬ ಸಂದೇಶ ಸಾರಲು ಪ್ರತಿ ವರ್ಷ ಅ.2ರಿಂದ 8ರವರೆಗೆ ಸಪ್ತಾಹ ಆಚರಿಸಲಾಗುತ್ತದೆ. ನಮ್ಮ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಅರಣ್ಯ ವಿಸ್ತಾರವಾಗುತ್ತಿಲ್ಲ. ಗಿಡ ಮರಗಳನ್ನು ನೆಟ್ಟು  ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ನಿರೀಕ್ಷಿತ ವೇಗದಲ್ಲಿ ಅರಣ್ಯ ನಿರ್ಮಾಣವಾಗುತ್ತಿಲ್ಲ. ಹೀಗಾಗಿ ಮಾನವ ವನ್ಯಜೀವಿ ಸಂಘರ್ಷ ಜಾಸ್ತಿಯಾಗಿದೆ’ ಎಂದರು. 

‘ಪೋಷಕರು, ಸಮಾಜಕ್ಕೆ ತಿಳಿಹೇಳುವ ಸಾಮರ್ಥ್ಯ ಮಕ್ಕಳಲ್ಲಿದೆ. ದೊಡ್ಡ ಬದಲಾವಣೆಯನ್ನೇ ಅವರು ತರಬಲ್ಲರು. ಆ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯದಲ್ಲಿ ಸಕ್ರಿಯವಾಗಿ ಅವರನ್ನು ಭಾಗವಹಿಸುವಂತೆ ಮಾಡಲಾಗುತ್ತಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಮಾತನಾಡಿದರು.

ಗಮನ ಸೆಳೆದ ಜಾಗೃತಿ ಜಾಥಾ

ಇದಕ್ಕೂ ಮೊದಲು ನಗರದ ಸುಲ್ತಾನ್‌ ಷರೀಫ್‌ ವೃತ್ತದ ಬಳಿ ಇರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಚಾಲನೆ ನೀಡಿದರು.

ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದ ಜಾಥಾವು ಡೀವಿಯೇಷನ್‌ ರಸ್ತೆ ಭುವನೇಶ್ವರಿ ವೃತ್ತ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮುಕ್ತಾಯಕಂಡಿತು. 

ಜಾಥಾದಲ್ಲಿ ಹುಲಿವೇಷಧಾರಿಗಳು ಗಮನಸೆಳೆದರು. ವಿದ್ಯಾರ್ಥಿಗಳು ಹುಲಿ ಮತ್ತು ಆನೆಯ ಮುಖವಾಡವನ್ನು ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.  ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಜಿ.ಪಂ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಬಿಆರ್‌ಟಿ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಎಸಿಎಫ್‌ ಸುರೇಶ್‌ ವಲಯ ಅರಣ್ಯ ಅಧಿಕಾರಿಗಳು ಜಾಥಾದಲ್ಲಿ ಹೆಜ್ಜೆ ಹಾಕಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.