ADVERTISEMENT

2030ಕ್ಕೆ ಏಡ್ಸ್‌ ಮುಕ್ತ ಜಿಲ್ಲೆ ನಿರ್ಮಾಣ ಗುರಿ: ಶ್ರೀಧರ

ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ: ಜಾಗೃತಿ ಜಾಥಾ, ಬೀದಿ ನಾಟಕ 

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:29 IST
Last Updated 1 ಡಿಸೆಂಬರ್ 2022, 16:29 IST
ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ಡಿಎಚ್‌ಒ ಡಾ.ವಿಶ್ವೇಶ್ವರಯ್ಯ ಇತರರು ಇದ್ದರು
ವಿಶ್ವ ಏಡ್ಸ್‌ ದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ಡಿಎಚ್‌ಒ ಡಾ.ವಿಶ್ವೇಶ್ವರಯ್ಯ ಇತರರು ಇದ್ದರು   

ಚಾಮರಾಜನಗರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನ ಆಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಚಾಮರಾಜೇಶ್ವರ ದೇವಾಲಯದ ಬಳಿ ಏಡ್ಸ್ ಜಾಗೃತಿ ಜಾಥಾಗೆ ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್.ಭಾರತಿ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಚಾಲನೆ ನೀಡಿದರು.

ಇದೇ ವೇಳೆ ಬೀದಿನಾಟಕದ ಮೂಲಕ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಬಳಿಕ ಜಾಥಾವು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜನರಲ್ಲಿ ಅರಿವು ಮೂಡಿಸಿತು. ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ನಗರದ ವರನಟ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ನಡೆದ ವೇದಿಕೆ ಸಮಾರಂಭವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರಎಂ. ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘2030ರ ವೇಳೆಗೆ ಜಿಲ್ಲೆಯನ್ನು ಏಡ್ಸ್ ಮುಕ್ತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಜಿಲ್ಲೆಯಲ್ಲಿ 4,306 ಎಚ್‌ಐವಿ ಸೋಂಕಿತರಿದ್ದಾರೆ. ಏಡ್ಸ್ ಬಗ್ಗೆ ಜನರಲ್ಲಿ ಅರಿವು ಅಗತ್ಯವಾಗಿದೆ. ಎಚ್‌ಐವಿ ಸೋಂಕಿತರನ್ನು ಯಾವುದೇ ಭೇದ ಭಾವವಿಲ್ಲದೇ ಗೌರವಯುತವಾಗಿ ಸಮಾನತೆಯಿಂದ ನೋಡಿಕೊಳ್ಳಬೇಕು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್, ಜೆಎಸ್‌ಎಸ್ ಆಸ್ಪತ್ರೆಯ ಅಧೀಕ್ಷಕ ಡಾ. ಗೋವಿಂದಶೆಟ್ಟಿ, ರಕ್ತ ನಿಧಿ ಕೇಂದ್ರದ ಡಾ. ಮಹೇಶ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮುರುಗೇಂದ್ರ, ಸರ್ಕಾರಿ ನಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮ, ಶಿವಮಲ್ಲಪ್ಪ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.

‘ತಾರತಮ್ಯ ಶಿಕ್ಷಾರ್ಹ ಅಪರಾಧ’

‘ಸೋಂಕಿತರನ್ನು ಕಾಳಜಿಯಿಂದ ನೋಡಿಕೊಳ್ಳುವ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸಿ ಮುಖ್ಯವಾಹಿನಿಗೆ ತರಬೇಕು. ಮುಂಜಾಗ್ರತೆ ಅರಿವು ಮೂಡಿಸಿದಾಗ ರೋಗ ತಡೆಯಲು ಸಾಧ್ಯ. ರಾಜ್ಯದಲ್ಲಿ ಎಚ್‌ಐವಿ ತಡೆಯಲು 2017ರಲ್ಲಿ ಕಾಯ್ದೆ ತರಲಾಗಿದೆ. ಈ ಕಾಯ್ದೆಯ ಪ್ರಕಾರ ಸೋಂಕಿತರನ್ನು ತಾರತಮ್ಯ ಮಾಡುವಂತಿಲ್ಲ. ತಾರತಮ್ಯ ಮಾಡುವುದು ಶಿಕ್ಷಾರ್ಹ ಅಪರಾಧ. ಮೂರು ತಿಂಗಳಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹1ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ’ ಎಂದು ಶ್ರೀಧರ ಹೇಳಿದರು.

‘ಸಮಾಜದಲ್ಲಿ ಸಾಕಷ್ಟು ಜನ ಎಚ್‌ಐವಿ ಸೋಂಕಿತರು ವಾಸ ಮಾಡುತ್ತಿದ್ದಾರೆ. ಅವರಿಗೂ ಬದುಕುವ ಹಕ್ಕಿದೆ. ಅಲ್ಲದೇ ಇಚ್ಛೆ ಬಂದ ಉದ್ಯೋಗ ಮಾಡಲು ಅವಕಾಶವಿದೆ. ಕಾಯಿಲೆ ನೆಪದಲ್ಲಿ ಸೋಂಕಿತರನ್ನು ಹೊರಗಿಡುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.