ಗುಂಡ್ಲುಪೇಟೆ: ‘ಕೃಷಿಯಲ್ಲದೇ ಸಾರಿಗೆ, ರೈಲ್ವೆ, ಕಾರ್ಮಿಕ ಇತರೆ ಇಲಾಖೆಗಳ ಸಚಿವರಾಗಿಯೂ ಬಾಬು ಜಗಜೀವನ್ ರಾಂ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಮುಂದಾಲೋಚನೆ ಇಂದು ಫಲ ಕೊಡುತ್ತಿದೆ’ ಎಂದು ತಹಶೀಲ್ದಾರ್ ಟಿ.ರಮೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದೇಶಕ್ಕೆ ಆಹಾರ ಭದ್ರತೆ ಸಿಗಲು ಬಾಬು ಜಗಜೀವನರಾಂ ಅವರು ಕೃಷಿ ಕ್ಷೇತ್ರದಲ್ಲಿ ಅನುಷ್ಠಾನ ಮಾಡಿದ ದೂರದೃಷ್ಟಿ ಚಿಂತನೆಗಳು ಕಾರಣ ಎಂದು ಹೇಳಿದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆಹಾರದ ಅಗತ್ಯ ಜೀವನದುದ್ದಕ್ಕೂ ಇರುತ್ತದೆ. ಈ ರೀತಿಯ ಅಗತ್ಯ ಪೂರೈಸುವ ಮತ್ತು ಭವಿಷ್ಯದ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಬಾಬುಜೀ ಹಸಿರು ಕ್ರಾಂತಿಗೆ ಮುಂದಾದರು. ಅವರ ಪರಿಶ್ರಮ ಈಗ ಫಲ ಕೊಡುತ್ತಿದೆ ಎಂದು ತಿಳಿಸಿದರು.
ಸಿಕ್ಕ ಅಧಿಕಾರವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬುದು ಬಾಬುಜೀ ಅವರ ಧ್ಯೇಯವಾಗಿತ್ತು. ಇದೇ ಕಾರಣಕ್ಕೆ ಅವರು ಸುದೀರ್ಘ ರಾಜಕೀಯ ಅವಕಾಶಗಳನ್ನು ನಿಶ್ವಾರ್ಥ ಸೇವೆಗೆ ಮುಡಿಪಾಗಿಟ್ಟರು. ಆದ್ದರಿಂದ ಬಾಬುಜೀ ಅವರ ಸ್ಮರಣೆಗೆ ದಿನವನ್ನು ಕಾಯುವ ಬದಲು ನಿತ್ಯವೂ ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.
ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಸದಸ್ಯ ಎಚ್.ಆರ್.ರಾಜಗೋಪಾಲ್, ಬಾಬು ಜಗಜೀವನರಾಂ ಸಂಘಟನೆಯ ಹಂಗಳ ಸಿದ್ದೇಶ್, ನಾಗಯ್ಯ, ಪರಿಸರ ಸಂರಕ್ಷಣಾ ಟ್ರಸ್ಟ್ ಪಿ.ಬಾಲು, ನಿವೃತ್ತ ಮುಖ್ಯ ಶಿಕ್ಷಕ ಬ್ರಹ್ಮಾನಂದ್, ಟಿಎಚ್‌ಒ ಡಾ.ಅಲೀಂಪಾಷ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ರುದ್ರವ್ವ ಕಳಗೇರಿ, ಹೊನ್ನಶೆಟ್ಟರಹುಂಡಿ ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.