ADVERTISEMENT

ಚಾಮರಾಜನಗರ: ಬಕ್ರೀದ್‌ ಸಾಂಪ್ರದಾಯಿಕ ಆಚರಣೆ

ಕೋವಿಡ್‌–19 ಮುಂಜಾಗ್ರತಾ ನಿಯಮಗಳ ಪಾಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 12:37 IST
Last Updated 1 ಆಗಸ್ಟ್ 2020, 12:37 IST
ಚಾಮರಾಜನಗರದ ಮದೀನಾ ಮಸೀದಿಯಲ್ಲಿ ಬಕ್ರೀದ್‌ ಅಂಗವಾಗಿ ಮುಸ್ಲಿಮರು ಸುರಕ್ಷಿತ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು
ಚಾಮರಾಜನಗರದ ಮದೀನಾ ಮಸೀದಿಯಲ್ಲಿ ಬಕ್ರೀದ್‌ ಅಂಗವಾಗಿ ಮುಸ್ಲಿಮರು ಸುರಕ್ಷಿತ ಅಂತರ ಕಾಪಾಡಿಕೊಂಡು ಪ್ರಾರ್ಥನೆ ಸಲ್ಲಿಸಿದರು   

ಚಾಮರಾಜನಗರ:ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ (ಈದ್‌ ಉಲ್‌ ಅದ್‌ಹಾ) ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಕೋವಿಡ್‌–19 ಕಾರಣದಿಂದಾಗಿ ಹಬ್ಬದ ಆಚರಣೆ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿತ್ತು. ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಮಸೀದಿಗಳಲ್ಲಿ ಒಮ್ಮೆಗೆ ಗರಿಷ್ಠ ಎಂದರೆ 50 ಮಂದಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಲಾಗಿತ್ತು. ಎಲ್ಲರೂ ಸುರಕ್ಷಿತ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ಪ್ರವಚನ ನೀಡಿದರು.

ಕಾಣದ ಸಂಭ್ರಮ: ಕೋವಿಡ್‌–19 ಕಾರಣದಿಂದಾಗಿ ಸಮುದಾಯದವರಲ್ಲಿ ಹಬ್ಬದ ಸಂಭ್ರಮ ಹೆಚ್ಚು ಕಂಡು ಬಂದಿರಲಿಲ್ಲ. ಮಕ್ಕಳು ಹಾಗೂ ಹಿರಿಯರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಹಸ್ತಲಾಘವ ಹಾಗೂ ಆಲಿಂಗನ ಮಾಡಿಕೊಂಡು ಶುಭಾಶಯ ವಿನಿಮಯ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಹಾಗಾಗಿ, ದೂರದಿಂದಲೇ ಪರಸ್ಪರ ಶುಭಾಶಯ ಕೋರಿದರು. ದೂರವಾಣಿ, ಸಾಮಾಜಿಕ ಜಾಲತಾಣಗಳ ಮೂಲಕ ಆತ್ಮೀಯರಿಗೆ ಶುಭಾಶಯ ಕೋರಿದರು.

ADVERTISEMENT

ಸೋಂಕಿನ ಕಾರಣದಿಂದಾಗಿ ಮುಸ್ಲಿಮರು ತಮ್ಮ ಮನೆಗಳಿಗೆ ಹೆಚ್ಚು ನೆಂಟರು, ಸ್ನೇಹಿತರನ್ನೂ ಆಹ್ವಾನಿಸಿರಲಿಲ್ಲ. ಬಕ್ರೀದ್‌ನಲ್ಲಿ ದಾನಕ್ಕೆ ವಿಶೇಷ ಮಹತ್ವವಿದ್ದು, ಆರ್ಥಿಕವಾಗಿ ಪ್ರಬಲರಾಗಿದ್ದವರು ಬಡವರಿಗೆ ದಾನ ಮಾಡಿದರು. ಈ ಬಾರಿ ದಾನದ ಪ್ರಮಾಣವೂ ಕಡಿಮೆ ಇತ್ತು ಎಂದು ಮುಖಂಡರು ತಿಳಿಸಿದರು.

‘ಕೋವಿಡ್‌ ಕಾರಣದಿಂದಾಗಿ ಈ ವರ್ಷ ಬಕ್ರೀದ್‌ ಅನ್ನು ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಮಸೀದಿಗಳಲ್ಲಿ ಪ್ರಾರ್ಥನೆ ನಡೆಸುವಾಗಲು ಅಂತರ ಕಾಯ್ದುಕೊಳ್ಳಲಾಗಿದೆ’ ಎಂದು ಸಮುದಾಯ ಹಾಗೂ ಎಸ್‌ಡಿಪಿಐ ಮುಖಂಡ ಅಬ್ರಾರ್‌ ಅಹಮದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕರು ಈ ವರ್ಷ ಹೊಸ ಬಟ್ಟೆಗಳನ್ನು ಖರೀದಿಸಿರಲಿಲ್ಲ. ಮಕ್ಕಳು, ಹಿರಿಯರಿಗೆ ಮಸೀದಿಗಳಿಗೆ ಬರಲು ಅವಕಾಶ ನೀಡಿರಲಿಲ್ಲ. ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಮನೆಗಳಿಗೆ ನೆಂಟರಿಷ್ಟರು, ಸ್ನೇಹಿತರ ಭೇಟಿಯೂ ಕಡಿಮೆ ಇತ್ತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.