ADVERTISEMENT

ಚಾಮರಾಜನಗರ | ಬಂಡೀಪುರ: ಪ್ರಾಣಿಗಳ ಸ್ವಚ್ಛಂದಕ್ಕೆ ಇಲ್ಲ ಎಣೆ

ಮಾನವನ ಹಸ್ತಕ್ಷೇಪ ರಹಿತ ವಾತಾವರಣ, ಹೆಜ್ಜೆ ಹೆಜ್ಜೆಗೂ ಸಿಗುತ್ತಿವೆ ಜಿಂಕೆ, ಕಾಡೆಮ್ಮೆ, ಆನೆಗಳು

ಮಲ್ಲೇಶ ಎಂ.
Published 25 ಏಪ್ರಿಲ್ 2020, 19:45 IST
Last Updated 25 ಏಪ್ರಿಲ್ 2020, 19:45 IST
ಊಟಿ ರಸ್ತೆಯ ಬದಿಯಲ್ಲಿ ಕಂಡು ಬಂದ ಜಿಂಕೆಗಳು
ಊಟಿ ರಸ್ತೆಯ ಬದಿಯಲ್ಲಿ ಕಂಡು ಬಂದ ಜಿಂಕೆಗಳು   

ಗುಂಡ್ಲುಪೇಟೆ: ಕೋವಿಡ್‌–19 ತಡೆಗಾಗಿ ಜಾರಿ ಮಾಡಲಾಗಿರುವ ಲಾಕ್‌ಡೌನ್‌ ಕಾರಣಕ್ಕೆ ಜನರೆಲ್ಲ ಮನೆಗಳಲ್ಲಿದ್ದರೆ, ಕಾಡಿನಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ.

ಸದಾ ಪ್ರವಾಸಿಗರು ಹಾಗೂ ಪ್ರಯಾಣಿಕರ ವಾಹನಗಳ ಓಡಾಟ ಕಂಡು ಬರುತ್ತಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು ತಿಂಗಳಿನಿಂದೀಚೆಗೆ ಅಕ್ಷರಸಃ ಸ್ಪಬ್ಧಗೊಂಡಿವೆ. ಇದರಿಂದಾಗಿ ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗಿದ್ದು, ಈಗ ಹೆದ್ದಾರಿಯ ಇಕ್ಕೆಲಗಳಲ್ಲೂ ಪ್ರಾಣಿಗಳ ದರ್ಶನ ಹೆಚ್ಚಾಗುತ್ತಿದೆ.

ಪ್ರತಿ ದಿನ ರಾತ್ರಿ ವಾಹನಗಳ ಸಂಚಾರ ನಿಲ್ಲುವರೆಗೂ ಎದುರುಗಡೆ ಬಾರದೆ ಇದ್ದ ಪ್ರಾಣಿಗಳು, ಈಗ ಮಾನವನ ಕಾಟ ಇಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಹೆಜ್ಜೆ ಹೆಜ್ಜೆಗೂ ಜಿಂಕೆ, ಕಾಡೆಮ್ಮೆ, ಆನೆಗಳು ಕಾಣಸಿಗುತ್ತಿವೆ ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ADVERTISEMENT

ಸಾಮಾನ್ಯ ದಿನಗಳಲ್ಲಿ ಹೆದ್ದಾರಿ ಬದಿಗಳಲ್ಲಿ ಪ್ರಾಣಿಗಳನ್ನು ಕಂಡರೆ, ಪ್ರವಾಸಿಗಳು ಅವುಗಳ ಪೊಟೊ ತೆಗೆಯುವುದು, ಕೂಗಾಡುವುದು, ಅವುಗಳಿಗೆ ಆಹಾರ ಕೊಡುವುದು, ರೊಚ್ಚಿಗೇಳಿಸುವುದೆಲ್ಲ ಮಾಡುತ್ತಿದ್ದರು. ಇದರಿಂದ ಪ್ರಾಣಿಗಳು ಹೆದರಿ ಕಾಡಿನೊಳಗೆ ಸೇರುತ್ತಿದ್ದವು.

ಇದೀಗ ಸರಕು ಸಾಗಣೆಯ ವಾಹನಗಳನ್ನು ಬಿಟ್ಟರೆ, ಬೇರೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಪ್ರಾಣಿಗಳು ರಸ್ತೆ ಬದಿಯಲ್ಲೇ ಕಾಣಸಿಗುತ್ತವೆ. ಅದರಲ್ಲೂ ವಿಶೇಷವಾಗಿ ಜಿಂಕೆಗಳ ಹಿಂಡು ಮರಿಗಳೊಂದಿಗೆ ಮೇಯುತ್ತಾ ಇರುತ್ತವೆ. ಈ ದೃಶ್ಯಗಳನ್ನು ಕರ್ತವ್ಯದಲ್ಲಿರುವ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಮೇಲುಕಾಮನಹಳ್ಳಿಯ ಅರಣ್ಯ ಇಲಾಖೆಯ ಚೆಕ್‌ ಪೋಸ್ಟ್‌ ದಾಟಿದರೆ ಸಾಕು, ಪ್ರಾಣಿಗಳು ರಸ್ತೆಯ ಬದಿಯಲ್ಲಿ ಸಿಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಹೆಚ್ಚು ಆನೆಗಳು ಕಂಡು ಬರುತ್ತಿವೆ.

‘ಈಗ ಸಫಾರಿ ಇಲ್ಲ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವೂ ಕಡಿಮೆ ಇದೆ. ಮಳೆಯಾಗಿರುವುದರಿಂದ ಹಸಿರು ಚಿಗುರಿದೆ. ಮನುಷ್ಯರ ಚಲನವಲನ ಕಡಿಮೆ ಇರುವುದರಿಂದ ಪ್ರಾಣಿಗಳು ನೆಮ್ಮದಿಯಾಗಿ ರಸ್ತೆಯ ಬದಿಯಲ್ಲಿ ಮೇಯುತ್ತಾ ಇರುತ್ತವೆ. ಕೆಲ ಸಮಯದಲ್ಲಿ ರಸ್ತೆಯ ಮದ್ಯದಲ್ಲಿ ಮಲಗಿದ್ದ ದೃಶ್ಯವನ್ನೂ ಕಂಡಿದ್ದೇವೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ ಪ್ರಾಣಿಗಳು ಸಹಜವಾಗಿಯೇಮನುಷ್ಯರಿಂದ ದೂರ ಇರಲು ಇಚ್ಚಿಸುತ್ತವೆ. ವಾಹನಗಳ ಸಂಚಾರ ಸಮಯದಲ್ಲಿ ಪ್ರಾಣಿಗಳು ರಸ್ತೆಯ ಬದಿಯಲ್ಲಿ ಕಂಡರೆ ಚೇಷ್ಟೆ ಮಾಡಿ ತೊಂದರೆ ಕೊಡುತ್ತಿದ್ದರು. ಪೋಟೊ ತೆಗೆಯುವುದು, ಹಾರ್ನ್ ಮಾಡುವುದರಿಂದ ಪ್ರಾಣಿಗಳಿಗೆ ಕಿರಿಕಿಯಾಗುತ್ತದೆ. ಈಗ ಅದೆಲ್ಲವೂ ನಿಂತಿದೆ’ ಎಂದು ಹೇಳಿದರು.

**

ಕೋವಿಡ್‌–19ರಿಂದಾಗಿ ನಮ್ಮ ಆದಾಯಕ್ಕೆ ಹೊಡೆತ ಬಿದ್ದಿರುವುದು ನಿಜ. ಆದರೆ, ಕಾಡಿನಲ್ಲಿ ಪ್ರಾಣಿಗಳು ನೆಮ್ಮದಿಯಿಂದ ಇವೆ
-ಟಿ.ಬಾಲಚಂದ್ರ, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.