ADVERTISEMENT

ಬಂಡೀಪುರ: ನೌಕರರು, ಅಧಿಕಾರಿಗಳ ಸಂಘರ್ಷದಲ್ಲಿ ಬಡವಾದ ಅರಣ್ಯ

ಎಸಿಎಫ್‌ ಆಶ್ವಾಸನೆ ಬಳಿಕ ಮುಷ್ಕರ ವಾಪಸ್‌ ಪಡೆದ ನೌಕರರು

ಮಲ್ಲೇಶ ಎಂ.
Published 3 ಸೆಪ್ಟೆಂಬರ್ 2021, 16:56 IST
Last Updated 3 ಸೆಪ್ಟೆಂಬರ್ 2021, 16:56 IST
ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ ಅರಣ್ಯ ಇಲಾಖೆಯ ದಿನಗೂಲಿ ನೌಕರರು
ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದ ಅರಣ್ಯ ಇಲಾಖೆಯ ದಿನಗೂಲಿ ನೌಕರರು   

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿವಿಧ ವಲಯಗಳ 205 ದಿನಗೂಲಿ ನೌಕರರು ನಡೆಸುತ್ತಿದ್ದ ಮುಷ್ಕರ ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಕಂಡಿದೆ.

ಆದರೆ, ನೌಕರರು ಹಾಗೂ ಅಧಿಕಾರಿಗಳ ನಡುವಿನ ಸಂಘರ್ಷದಲ್ಲಿ ಬಂಡೀಪುರ ಅರಣ್ಯದ ಸಂರಕ್ಷಣೆಗೆ ತೊಡಕಾಯಿತು.

ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌, ವಿವಿಧ ವಲಯಗಳ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕರ್ತವ್ಯದಲ್ಲಿದ್ದ ಗುತ್ತಿಗೆ ಆಧರಿತ ದಿನಗೂಲಿ ನೌಕರರನ್ನು ಬೇರೆ ಬೇರೆ ವಲಯಗಳಿಗೆ ವರ್ಗಾವಣೆ ಮಾಡಿದ್ದು, ಈ ಸಂಘರ್ಷದ ಮೂಲ.

ADVERTISEMENT

10–15 ವರ್ಷಗಳಿಂದ ಒಂದೇ ಸ್ಥಳದಲ್ಲಿದ್ದ ನೌಕರರನ್ನು 40–50 ಕಿ.ಮೀ ದೂರದ ಸ್ಥಳಕ್ಕೆ ವರ್ಗಾವಣೆ ಮಾಡಿ ಆ.6ರಂದು ಆದೇಶ ಹೊರಡಿಸಲಾಗಿತ್ತು. ಇದರ ಜೊತೆಗೆ ದಿನಗೂಲಿ ನೌಕರಿಯಿಂದ ಹೊರ ಗುತ್ತಿಗೆ ಆಧರಿತ ವ್ಯವಸ್ಥೆಗೆ ವರ್ಗಾವಣೆ ಮಾಡಿದ್ದೂ ನೌಕರರಲ್ಲಿ ಆಕ್ರೋಶ ಉಂಟು ಮಾಡಿತ್ತು. ಹುಲಿ ಯೋಜನೆ ನಿರ್ದೇಶಕರ ನಿರ್ಧಾರವನ್ನು ಖಂಡಿಸಿ ನೌಕರರು ಆ.13ರಂದು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದರು.

ನಂತರ ಈ ವಿಷಯದ ಜೊತೆಗೆ ಅಧಿಕಾರಿಗಳಿಂದ ಆಗುತ್ತಿರುವ ಶೋಷಣೆ, ತಾರತಮ್ಯ, ಸಮಾನ ಕೂಲಿ –ಸಮಾನ ವೇತನ ಮುಂತಾದ ಬೇಡಿಕೆಗಳನ್ನೂ ಸೇರಿಸಿಕೊಂಡು ಹೋರಾಟಕ್ಕೆ ಸಜ್ಜಾದರು.

ಆ.26ರಂದು ಬಂಡೀಪುರಕ್ಕೆ ಅರಣ್ಯ ಸಚಿವ ಉಮೇಶ ಕತ್ತಿ ಭೇಟಿ ನೀಡಿದ್ದ ಸಂದರ್ಭದಲ್ಲಿ ನೌಕರರ ಕುಟುಂಬದ ಸದಸ್ಯರು ನಟೇಶ್‌ ವಿರುದ್ಧ ದೂರುಗಳ ಸುರಿಮಳೆಯನ್ನೇ ಹರಿಸಿದ್ದರು. ದೂರದ ವಲಯಗಳಿಗೆ ವರ್ಗಾವಣೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ‌ಗಿನ ವರ್ಗಾವಣೆ ರದ್ದು ಮಾಡಿ, 30 ಕಿ.ಮೀ ವ್ಯಾಪ್ತಿಯೊಳಗೆ ಕೌನ್ಸೆಲಿಂಗ್‌ ಮಾಡಿ ಕೆಲಸಕ್ಕೆ ನಿಯೋಜಿಸುವ ಭರವಸೆಯನ್ನು ಸಚಿವರು ನೀಡಿದ್ದರು. ಆ ಬಳಿಕ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಇದರ ಮಧ್ಯೆಯೇ, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೆ.1ರಿಂದ ಮುಷ್ಕರ ಆರಂಭಿಸುವುದಾಗಿ ನೌಕರರ ಸಂಘದವರು ಮೊದಲೇ ಘೋಷಿಸಿದ್ದರು. ಅದರಂತೆ ಮುಷ್ಕರವನ್ನೂ ಆರಂಭಿಸಿದ್ದರು. ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆಲವು ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಕೆಲಸಕ್ಕೆ ಹಾಜರಾಗಲು ನೌಕರರು ಒಪ್ಪಿದ್ದರು. ಅದರಂತೆ, ಗುರುವಾರ ಕೆಲಸಕ್ಕೆ ಹಾಜರಾದಾಗ ವಲಯ ಅರಣ್ಯ ಅಧಿಕಾರಿಗಳು, ಯೋಜನಾ ನಿರ್ದೇಶಕರಿಂದ ಪತ್ರ ತೆಗೆದುಕೊಂಡು ಬಂದರೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಮತ್ತೆ ಮುಷ್ಕರ ಮುಂದುವರಿಸಿದ್ದರು.

ಅರಣ್ಯ ಸಂರಕ್ಷಣೆಗೆ ತೊಂದರೆ: ಕಳ್ಳ ಬೇಟೆ ತಡೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುವವರು ಬಹುತೇಕರು ಸ್ಥಳೀಯ ಗಿರಿಜನರು. ಕಾಡಿನ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ಬಂಡೀಪುರದ ಇಂಚಿಂಚೂ ಇವರಿಗೆ ಗೊತ್ತು. ಅರಣ್ಯ ರಕ್ಷಣೆಯಲ್ಲಿ ಇವರ ಪಾಲು ದೊಡ್ಡದಿದೆ. ಅಂತಹವರು ಕರ್ತವ್ಯದಲ್ಲಿ ಇಲ್ಲದಿದ್ದರೆ ಅರಣ್ಯ ಸಂರಕ್ಷಣೆಗೆ ತೊಡಕಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯ.

‘ಅಧಿಕಾರಿಗಳ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಈ ಪ್ರಕರಣ ನಡೆದಿದ್ದು, ಇದರಿಂದ ಅರಣ್ಯಕ್ಕೆ ಧಕ್ಕೆಯಾಗಲಿದೆ. ಅಧಿಕಾರಿಗಳು ಸ್ಥಳೀಯ ಸಿಬ್ಬಂದಿಯ ವಿಶ್ವಾಸ ಗಳಿಸದಿದ್ದರೆ ಕಾಳ್ಗಿಚ್ಚಿನಂತಹ ಪ್ರಕರಣಗಳು ಮರುಕಳಿಸುತ್ತವೆ’ ಎಂಬುದು ಅವರ ವಾದ.

‘ಅರಣ್ಯ ರಕ್ಷಣೆ, ವನ್ಯಜೀವಿ ಹತ್ಯೆ, ಕಳ್ಳಬೇಟೆ ತಡೆ, ಗಡಿರಕ್ಷಣೆ ಕಾವಲು, ಬೆಂಕಿಯಿಂದ ಅರಣ್ಯ ರಕ್ಷಣೆ, ವಾಹನ ಚಾಲನೆ, ರಾತ್ರಿ ಪಾಳಿಯಲ್ಲಿ ಆನೆ ಕಾಯುವುದು ಮುಂತಾದ ಕೆಲಸಗಳಲ್ಲಿ ದಿನಗೂಲಿ ನೌಕರರು 10-20 ವರ್ಷಗಳಿಂದ ದುಡಿಯುತ್ತಿದ್ದಾರೆ. ಸರ್ಕಾರಿ ಕಾಯಂ ಸಿಬ್ಬಂದಿಗಳಾಗಲಿ, ಅಧಿಕಾರಿಗಳಿಗಳಾಲಿ ಕಾಡು ಸುತ್ತುವುದಿಲ್ಲ, ಪ್ರತಿ ಹತ್ತಾರು ಕಿ.ಮೀ ಕಾಡು ಸುತ್ತಿ ಅರಣ್ಯ ಕಾಯುವವರ ಕೆಲವು ಬೇಡಿಕೆಗಳನ್ನಾದರೂ ಸರ್ಕಾರ ಈಡೇರಿಸಬೇಕು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆ ಈಡೇರಿಕೆ ಪ್ರಯತ್ನದ ಭರವಸೆ: ಮುಷ್ಕರ ವಾಪಸ್‌

ಈ ಮಧ್ಯೆ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರವೂ ಮುಷ್ಕರ ಮುಂದುವರಿಸಿದ್ದ ನೌಕರರು ಸಂಜೆಯ ಹೊತ್ತಿಗೆ ಮುಷ್ಕರ ವಾಪಸ್‌ ಪಡೆದರು.

ಮುಷ್ಕರ ನಿರತ ಸ್ಥಳಕ್ಕೆ ಎಸಿಎಫ್ ಕೆ.ಪರಮೇಶ್ ಬಂದು ‘ವಲಯ ಅರಣ್ಯಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಂದಿನಂತೆ ಕೆಲಸಕ್ಕೆ ಹಾಜರಾಗಿ. ನಮ್ಮ ಹಂತದಲ್ಲಾಗುವ ಬೇಡಿಕೆಯನ್ನು ಈಡೇರಿಸುತ್ತೇವೆ. ಉಳಿದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ’ ಎಂದು ಭರವಸೆ ನೀಡಿದರು. ಆ ಬಳಿಕವಷ್ಟೇ ಮುಷ್ಕರವನ್ನು ವಾಪಸ್‌ ಪಡೆದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರಾಜ್ಯ ಅರಣ್ಯ ಇಲಾಖೆ ದಿನಗೂಲಿ/ಕ್ಷೇಮಾಭಿವೃದ್ಧಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಂ.ನಾಗರಾಜು ಅವರು, ‘ಸ್ಥಳೀಯವಾಗಿ ಸಾಧ್ಯವಾಗುವ ಬೇಡಿಕೆಗಳನ್ನು ಈಡೇರಿಸುತ್ತೇವೆ. ಉಳಿದ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ, ಮುಷ್ಕರ ವಾಪಸ್‌ ನಿರ್ಧಾರ ಮಾಡಿದ್ದೇವೆ’ ಎಂದರು.

‘ಅಧಿಕಾರಿಗಳಾಗಿ ನಾವು ಸರ್ಕಾರದ ಆದೇಶ ಪಾಲಿಸಬೇಕಾಗುತ್ತದೆ. ನಮ್ಮ ಹಂತದಲ್ಲಿ ಸಾಧ್ಯವಾಗುವ ಎಲ್ಲ ಬೇಡಿಕೆ ಈಡೇರಿಸುತ್ತೇವೆ. ಕರ್ತವ್ಯ ಸ್ಥಳ ಬದಲಾವಣೆ ಮಾಡಿರುವುದನ್ನು ಸಚಿವರ ಆದೇಶದಂತೆ ಕೌನ್ಸೆಲಿಂಗ್‌ ಮಾಡಿ ಸರಿ ಪಡಿಸಲಾಗುವುದು’ ಎಂದು ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ತಿಳಿಸಿದರು.

---

ನೌಕರರ ಮುಷ್ಕರದಿಂದ ಅರಣ್ಯ ಸಂರಕ್ಷಣೆ ಕಾರ್ಯಕ್ಕೆ ಧಕ್ಕೆಯಾಗಿಲ್ಲ. ಕಳ್ಳ ಬೇಟೆ ತಡೆ ಶಿಬಿರಗಳಲ್ಲಿ ಕಾಯಂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

-ಎಸ್‌.ಆರ್‌.ನಟೇಶ್‌, ಬಂಡೀಪುರ ಹುಲಿಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.