ADVERTISEMENT

ಚಾಮರಾಜನಗರ | ಬಂಡೀಪುರ ಕಾನನಕ್ಕೆ ‘ಸ್ವರ್ಣಪುಷ್ಪ’ ಅಲಂಕಾರ

ಹಸಿರಿನಿಂದ ಕಂಗೊಳಿಸುತ್ತಿದೆ ಅರಣ್ಯ, ಪ್ರವಾಸಿಗರಿಗಿಲ್ಲ ಕಣ್ತುಂಬುವ ಭಾಗ್ಯ

ಮಲ್ಲೇಶ ಎಂ.
Published 20 ಏಪ್ರಿಲ್ 2020, 19:39 IST
Last Updated 20 ಏಪ್ರಿಲ್ 2020, 19:39 IST
ಬಂಡೀಪುರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರಳಿ ನಿಂತಿರುವ ಕಕ್ಕೆ ಮರ
ಬಂಡೀಪುರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅರಳಿ ನಿಂತಿರುವ ಕಕ್ಕೆ ಮರ   

ಗುಂಡ್ಲುಪೇಟೆ: ಕೋವಿಡ್‌–19ರ ಕಾರಣಕ್ಕೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸ್ತಬ್ಧಗೊಂಡಿದೆ. ಜನರು, ಪ್ರವಾಸಿಗರ ಓಡಾಟ ತಿಂಗಳಿನಿಂದ ನಿಂತಿದೆ. ಆದರೆ, ಪ್ರಕೃತಿಯ ದಿನಚರಿಯಲ್ಲಿ ಬದಲಾವಣೆಯಾಗಿಲ್ಲ. ಎರಡು ಮೂರು ಮಳೆಯಾಗಿರುವುದರಿಂದ ಕಾನನ ಈಗ ಹಸಿರಾಗಿದೆ. ಕಕ್ಕೆ ಅಥವಾ ಕೊಂದೆ ಮರಗಳು ಹೂವು ಬಿಟ್ಟಿದ್ದು, ಕಾಡನ್ನು ಸ್ವರ್ಣದಿಂದ ಅಲಂಕಾರ ಮಾಡಿದಂತೆ ಭಾಸವಾಗುತ್ತಿದೆ. ಆದರೆ, ಇದನ್ನೆಲ್ಲ ಕಣ್ತುಂಬಿಕೊಳ್ಳುವ ಭಾಗ್ಯ ಈ ಬಾರಿ ಪ್ರವಾಸಿಗರಿಗಿಲ್ಲ.

ಈ ಹೂವಿಗೆ ಕಕ್ಕೆ, ಕೊಂದೆ, ಕೊನ್ನೆ, ಸ್ವರ್ಣಪುಪ್ಪ ಎಂಬ ಹೆಸರುಗಳಿವೆ. ಗಾಢ ಹಳದಿ ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿ ಗಿಡ ಮರಗಳಲ್ಲಿ ತೊನೆದಾಡುತ್ತಿದ್ದರೆ ಕಣ್ಣಿಗೆ ಹಬ್ಬ ಖಚಿತ.

ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯಲ್ಲಿ ಕಕ್ಕೆ ಮರಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಕಾಡಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲೂ ಮರಗಳಿದ್ದು, ಈಗ ಹೂವುಗಳು ಅರಳಿ ನಿಂತಿವೆ.

ADVERTISEMENT

ಮಾರ್ಚ್‌ನಿಂದ ಮೇ ತಿಂಗಳ ನಡುವೆ ಈ ಹೂವುಗಳು ಕಾಣಸಿಗುತ್ತವೆ. ಅರಣ್ಯ ಅಲ್ಲದೇ ಗ್ರಾಮೀಣ ಭಾಗಗಳಲ್ಲೂ ಕಂಡು ಬರುತ್ತವೆ. ನಗರದ ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲಿ ಬೆಳೆಸುವವರೂ ಇದ್ದಾರೆ. ಮಧ್ಯಮದ ಗಾತ್ರದ ಕಕ್ಕೆ ಮರಗಳು 10ರಿಂದ 20 ಮೀಟರ್‌ ಎತ್ತರದವರೆಗೂ ಬೆಳೆಯಬಲ್ಲವು. ಹಳದಿ ಬಣ್ಣದ ಗೊಂಚಲು ಗೊಂಚಲು ಹೂ ಬಿಡುವುದರಿಂದ ಈ ಮರಕ್ಕೆ ಇಂಗ್ಲಿಷ್‌ನಲ್ಲಿ ‘ಗೋಲ್ಡನ್‌ ಶವರ್‌ ಟ್ರೀ’ ಎಂದು ಹೆಸರು.

ಈ ಹೂವು ನೆರೆ ಕೇರಳದ ರಾಜ್ಯ ಪುಷ್ಪ. ಮಲಯಾಳದಲ್ಲಿ ಇದಕ್ಕೆ ಕಣಿಕೊನ್ನ ಎಂದು ಹೆಸರು. ಸೌರಮಾನ ಯುಗಾದಿ (ವಿಷು) ಸಂದರ್ಭದಲ್ಲಿ ಕೇರಳ ಹಾಗೂ ರಾಜ್ಯದ ಕರಾವಳಿಯಲ್ಲಿ ಈ ಹೂವಿಗೆ ಭಾರಿ ಮಹತ್ವವಿದೆ. ದೇವರ ಮುಂದೆ ಇಡಲಾಗುವ ‘ಕಣಿ’ಯಲ್ಲಿ ಈ ಹೂವು ಇರಲೇ ಬೇಕು. ಅಂದು ದೇವಾಲಯಗಳಲ್ಲಿ ಈ ಹೂವುವನ್ನು ದೇವರಿಗೆ ಅರ್ಪಿಸುವ ಸಂಪ್ರದಾಯವೂ ಇದೆ. ಐಶ್ವರ್ಯದ ದ್ಯೋತಕವಾಗಿ ಈ ಹೂವು ಹೆಚ್ಚು ಪ್ರಾಮುಖ್ಯ ಪಡೆದಿದೆ.

‘ನಮ್ಮಲ್ಲೂ ಬುಡಕಟ್ಟು ಜನಾಂಗದವರುಮತ್ತು ಕಾಡಂಚಿನ ಗ್ರಾಮದಲ್ಲಿ ಜನರು ಶುಭ ಕಾರ್ಯಗಳಿಗೆ ಈ ಹೂವನ್ನು ಬಳಸುತ್ತಾರೆ. ಇದರಲ್ಲಿ ಔಷಧೀಯ ಗುಣಗಳಿವೆ. ಹೂವನ್ನು ಕೊಯ್ದು ಕೇರಳಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವವರೂ ಇದ್ದಾರೆ’ ಎಂದು ಪರಿಸರ ಪ್ರೇಮಿ ಮೇಲುಕಾಮನಹಳ್ಳಿ ಗ್ರಾಮದ ಡಬ್ಬಿ ರವಿಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತ, ಆಗ್ನೇಯ ಏಷ್ಯಾ ಮೂಲ
ಕ್ಯಾಸಿಯ ಫಿಸ್ಟುಲ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಕಕ್ಕೆ ಮರ, ಫಾಬಾಸಿ ಕುಟುಂಬಕ್ಕೆ ಸೇರಿದ್ದು, ಭಾರತ ಮತ್ತು ಏಷ್ಯಾದ ಆಗ್ನೇಯ ಭಾಗಗಳು ಇದರ ತವರು. ಭಾರತ ಮಾತ್ರವಲ್ಲದೇ ಮ್ಯಾನ್ಮಾರ್‌, ಥಾಯ್ಲೆಂಡ್‌, ಶ್ರೀಲಂಕಾ, ಪಾಕಿ‌ಸ್ತಾನಗಳಲ್ಲಿ ಕಕ್ಕೆ ಮರ ಕಂಡು ಬರುತ್ತದೆ.ಅಲಂಕಾರಿಕ ಸಸ್ಯವಾಗಿರುವ ಈ ಮರದಲ್ಲಿ ಔಷಧೀಯ ಗುಣಗಳೂ ಇವೆ. ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.