ADVERTISEMENT

ಬಂಡೀಪುರ ಸಫಾರಿ ಆರಂಭವಾದರೆ ಹೋರಾಟ:ರಾಜ್ಯ ಸರ್ಕಾರದ ನಿರ್ಧಾರಕ್ಕೆ ರೈತ ಸಂಘ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:09 IST
Last Updated 20 ಫೆಬ್ರುವರಿ 2026, 2:09 IST
<div class="paragraphs"><p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಿಸುವಂತೆ ಒತ್ತಾಯಿಸಿ ಬುಧವಾರ ಸಫಾರಿ ಅವಲಂಬಿತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು</p></div>

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಿಸುವಂತೆ ಒತ್ತಾಯಿಸಿ ಬುಧವಾರ ಸಫಾರಿ ಅವಲಂಬಿತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು

   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಕ್ಕೆ ಬುಧವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ ಬೆನ್ನಲ್ಲೇ ಗುರುವಾರ ತಾಲ್ಲೂಕಿನಾದ್ಯಂತ ರೈತರ ಪ್ರತಿಭಟನೆ ಭುಗಿಲೆದ್ದಿತು.

ನೂರು ದಿನಗಳಿಂದ ಸ್ಥಗಿತಗೊಂಡಿದ್ದ ಸಫಾರಿ ಮರು ಆರಂಭಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ತಾಲ್ಲೂಕಿನಲ್ಲಿ ರೈತರು ಬೀದಿಗಿಳಿದು ಹೋರಾಟ ನಡೆಸಿದರು. ಸಫಾರಿ ಮರು ಆರಂಭಿಸದಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಇದರ ನಡುವೆ ಸಫಾರಿ ಆರಂಭ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿ ಕೆಲವರು ಘೋಷಣೆ ಕೂಗಿ ಮನವಿ ಸಲ್ಲಿಸಿದ ಘಟನೆಯೂ ನಡೆಯಿತು.

ADVERTISEMENT

ರೈತ ಮುಖಂಡ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತ ಸಮೂಹ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಜಮಾಯಿಸಿ ಸರ್ಕಾರ, ಅರಣ್ಯ ಸಚಿವರು ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿರುದ್ಧ ಘೋಷಣೆ ಕೂಗಿ ಸಫಾರಿ ತೆರೆಯದಂತೆ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಹೊನ್ನೂರು ಪ್ರಕಾಶ್ ‘ಸಫಾರಿ ಬಂದ್ ಬಳಿಕ ಮಾನವ ಪ್ರಾಣಿ ಸಂಘರ್ಷ ಕಡಿಮೆಯಾಗಿದ್ದು ಮರು ಆರಂಭಕ್ಕೆ ಮುಂದಾಗಬಾರದು. ರೈತರ ಎಚ್ಚರಿಕೆ ಕಡೆಗಣಿಸಿದರೆ ಹೋರಾಟ ತೀವ್ರಗೊಳ್ಳಲಿದೆ ಎಂದರು.

ರೈತರ ಹಿತ ಮರೆತಿರುವ ಶಾಸಕರು ಹಾಗೂ ಸಚಿವರು ಅರಣ್ಯವನ್ನ ಮಾರಾಟಕ್ಕೆ ಮುಂದಾಗಿದ್ದಾರೆ. ಶಾಸಕ ಗಣೇಶ್ ಪ್ರಸಾದ್ ತಜ್ಞರ ಸಮಿತಿಗೆ ರೈತರನ್ನ ಸೇರಿಸಿಕೊಳ್ಳದೆ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎಂದು ಹೊನ್ನೂರು ಪ್ರಕಾಶ್ ಆಕ್ರೋಶ ಹೊರಹಾಕಿದರು.

ಪಟ್ಟಭದ್ರರ ಪರವಾಗಿ ನಿಂತಿರುವ ಸರ್ಕಾರ ಸಫಾರಿ ಆರಂಭಿಸಲು ಹೊರಟಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವುದಿದ್ದರೆ ಕೃಷಿ ಪ್ರವಾಸೋದ್ಯಮ ಆರಂಭಿಸಿ. ಬದಲಾಗಿ ಸಫಾರಿ ಆರಂಭಿಸಿ ಕಾಡಿನೊಳಗಿರುವ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ, ಮಾನವ ಪ್ರಾಣಿ ಸಂಘರ್ಷ ಹೆಚ್ಚಿಸಬೇಡಿ ಎಂದರು.

ಕಾಡಿನೊಳಗೆ ಮಾನವ ಹಸ್ತಕ್ಷೇಪ ಸಲ್ಲದು, ಮೋಜು ಮಸ್ತಿಗೆ ಅರಣ್ಯವನ್ನು ಬಲಿ ಕೊಡಬೇಡಿ, ಸಫಾರಿ ಬಂದ್ ಮಾಡದಿದ್ದರೆ ಆಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಪಟ್ಟು ಹಿಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಡಿವೈಎಸ್ಪಿ ಕೆಲವು ರೈತರನ್ನು ವಶಕ್ಕೆ ಪಡೆದರು. ಈ ಸಂದರ್ಭ ಕೇಕೆ ಹಾಕಿದ ಸಫಾರಿ ಪರವಾಗಿದ್ದ ಕೆಲವರನ್ನು ವಶಕ್ಕೆ ಪಡೆಯಲಾಯಿತು.

ಸಫಾರಿ ಆರಂಭಕ್ಕೆ ಮನವಿ: ಮತ್ತೊಂದೆಡೆ ಹೋಟೆಲ್ , ರೆಸಾರ್ಟ್, ಹೋಂ ಸ್ಟೇ ಮಾಲೀಕರು ಹಾಗೂ ಸಿಬ್ಬಂದಿ ಮೇಲುಕಾಮನಹಳ್ಳಿ ಗ್ರಾಮದ ಚೆಕ್‌ಪೋಸ್ಟ್‌ನಿಂದ ಸಫಾರಿ ಕೇಂದ್ರದವರೆಗೆ ಕಾಲ್ನಡಿಗೆ ಜಾಥಾ ಹೊರಟು ಸಫಾರಿ ಮರು ಆರಂಭಕ್ಕೆ ಎಸಿಎಫ್ ನವೀನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಗುರು ಪ್ರಸಾದ್ ಹೋಟೆಲ್ ಮಾಲೀಕ ಮಾತನಾಡಿ, ‘2012ರ ನಂತರ ಬಂಡೀಪುರ ಹುಲಿ ಸಂರಕ್ಷಿತ ಸೂಕ್ಷ್ಮಪರಿಸರದಲ್ಲಿ ರೆಸಾರ್ಟ್ ತೆರೆದಿಲ್ಲ. ಆದರೆ, ಹೋಂ ಸ್ಟೇಗಳು ತಲೆ ಎತ್ತಿವೆ, ಅರಣ್ಯ ಪ್ರದೇಶದ ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಇರುವುದನ್ನು ದೊಡ್ಡದಾಗಿ ಬಿಂಬಿಸಿ ಸಫಾರಿ ನಿಲ್ಲಿಸಿರುವುದು ಖಂಡನೀಯ ಎಂದರು.

ಪ್ರವಾಸೋದ್ಯಮ ಚಟುವಟಿಕೆ ಮೇಲೆ 8 ಸಾವಿರ ಕುಟುಂಬಗಳು ಅವಲಂಬಿತವಾಗಿದ್ದು, ಸಫಾರಿಗೆ ನಿರ್ಬಂಧ ಹೇರಿದ್ದರಿಂದ ಉದ್ಯೋಗವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಚಾಮರಾಜನಗರ ಮೈಸೂರು ಭಾಗದಲಿ ಡೇರಿ ಉತ್ಪನ್ನಗಳ ಮಾರಾಟ ಕುಸಿದಿದೆ. ರೈತರು ಸೇರಿದಂತೆ ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದ ಕಾರಣ ನೀಡಿ ಹೆದ್ದಾರಿ ಬಂದ್ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು ಶೀಘ್ರ ಸಫಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕ ಎಂ.ಸಿ.ನಾಗರಾಜು, ಹೋಂ ಸ್ಟೇ ಮಾಲೀಕ ಮಂಗಲ ಉಮೇಶ್ ಸೇರಿದಂತೆ ಹಲವು ಸಿಬ್ಬಂದಿ ಹಾಗೂ ಸ್ಥಳೀಯರು ಇದ್ದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭ ವಿರೋಧಿಸಿ ಗುರುವಾರ ಮೇಲುಕಾಮನಹಳ್ಳಿ ಬಳಿ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು

ಎಸ್‌ಪಿ ಬೇಸರ

ರೈತ ಸಂಘಟನೆ ಹಾಗೂ ಸ್ಥಳೀಯರು ಸಫಾರಿ ಪರ ಹಾಗೂ ವಿರುದ್ಧವಾಗಿ ಪ್ರತಿಭಟನೆ ನಡೆಸುವಾಗ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಯತ್ನಿಸಿದರು. ಈ ವೇಳೆ ಅರಣ್ಯ ಇಲಾಖೆ ನೌಕರರೂ ಸಫಾರಿ ಕೌಂಟರ್ ಮುಂಭಾಗ ಪ್ರತಿಭಟನೆಗೆ ಮುಂದಾದಾಗ ಎಸ್‌ಪಿ ಎಂ.ಮುತ್ತುರಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಇಲಾಖೆಯ ನೌಕರರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.