ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾಯಿ ಹುಲಿ ನಾಲ್ಕು ಮರಿಗಳೊಂದಿಗೆ ಕೆರೆಯಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಂಡೀಪುರ ಅಭಯಾರಣ್ಯದ ಸಫಾರಿ ಮಾರ್ಗದಲ್ಲಿ ಮೊದಲಿಗೆ ತಾಯಿ ಹುಲಿ ಕಾಣಿಸಿಕೊಳ್ಳುತ್ತದೆ. ಸಫಾರಿ ವಾಹನ ನಿಲುಗಡೆ ಮಾಡಿ ದೃಶ್ಯವನ್ನು ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಒಂದರ ಹಿಂದೆ ಒಂದರಂತೆ ನಾಲ್ಕು ಮರಿಗಳು ತಾಯಿಯನ್ನು ಕೂಡಿಕೊಳ್ಳುತ್ತವೆ. ತಾಯಿ ಹುಲಿ ಕೆರೆಗೆ ಇಳಿದು ನೀರು ಕುಡಿಯುತ್ತದೆ. ಮರಿಗಳು ಒಂದೊಂದಾಗಿ ಇಳಿದು ನೀರು ಕುಡಿಯುವ, ಅತ್ತಿತ್ತ ಕಾತರದಿಂದ ನೋಡುವುದು ವಿಡಿಯೊದಲ್ಲಿದೆ.
ಸಫಾರಿಗೆ ತೆರಳಿದ ಪ್ರವಾಸಿಗರು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಗುರುವಾರ ಸಂಜೆ ನಡೆದಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ಮಾಹಿತಿ ದೊರೆತಿದೆ.
ಈಚೆಗೆ ಸಫಾರಿ ಮಾರ್ಗದಲ್ಲಿ 3 ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿತ್ತು. ಎರಡು ದಿನದ ಹಿಂದೆ ಮುಂಟೀಪುರ ಮತ್ತು ಮೂಖಹಳ್ಳಿ ಮಾರ್ಗದಲ್ಲಿ 2 ಮರಿಗಳೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿದೆ. ಬಂಡೀಪುರದಲ್ಲಿ ಹುಲಿ ಸಂತತಿ ಹೆಚ್ಚಾಗಿದೆ ಎಂದು ವನ್ಯಜೀವಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.