ADVERTISEMENT

ಬಂಡೀಪುರ | ಹುಲಿ ದಾಳಿಯಿಂದ ಪಾರಾದ ಮುಖ್ಯಶಿಕ್ಷಕಿ

ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಎರಗಿದ ಹುಲಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:32 IST
Last Updated 8 ಜುಲೈ 2019, 19:32 IST
ಆನೆ ದಾಳಿಯಿಂದ ಜಖಂ ಆದ ಸಫಾರಿ ಜೀಪ್
ಆನೆ ದಾಳಿಯಿಂದ ಜಖಂ ಆದ ಸಫಾರಿ ಜೀಪ್   

ಗುಂಡ್ಲುಪೇಟೆ: ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯೊಬ್ಬರ ಮೇಲೆ ರಸ್ತೆ ಬದಿ ಮಲಗಿದ್ದ ಹುಲಿಯೊಂದು ಎರಗಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಜುಲೈ 2ರಂದು ನಡೆದಿದ್ದು,‌ ಈಗ ಬೆಳಕಿಗೆ ಬಂದಿದೆ.

ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಥೋಣಿ ಅಮ್ಮಳ್‌ ಅವರು ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ತೀವ್ರವಾಗಿ ಭಯ ಬಿದ್ದಿದ್ದ ಅವರು ಜ್ವರದಿಂದ ಬಳಲಿದ್ದರು. ಈಗ ಸುಧಾರಿಸಿಕೊಂಡಿದ್ದಾರೆ.

ADVERTISEMENT

ಜೀವ ಹೋಗಿ ಬಂದ ಅನುಭವವನ್ನು ಅಮ್ಮಳ್‌ ಅವರು ‘ಪ್ರಜಾವಾಣಿ’ಯೊಂದಿಗೆ ವಿವರಿಸಿದ್ದು ಹೀಗೆ:
‘ಪ್ರತಿದಿನ ನಾನು ಬಂಡೀಪುರದಿಂದ ಶಾಲೆ‌ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತೇನೆ. ಜುಲೈ 2ರಂದು ಬೆಳಿಗ್ಗೆ ಹೋಗುವಾಗ ಬಂಡೀಪುರದ ಇಳಿಜಾರಿನಲ್ಲಿರುವ ಸೇತುವೆ ಬಳಿ ಹುಲಿ ಮಲಗಿತ್ತು. ಯಾವಾಗಲೂ ಓಡಾಡುವ ರಸ್ತೆಯಾಗಿರುವುದರಿಂದ ನಾನು ಮುಂದುವರಿದೆ. ರಸ್ತೆಯ ಉಬ್ಬು ಬಂದಾಗ ದ್ವಿಚಕ್ರವಾಹನದ ವೇಗವನ್ನು ಕಡಿಮೆ ಮಾಡಿದೆ. ಆಗ ಮಲಗಿದ್ದ ಹುಲಿ ಏಕಾಏಕಿ ನನ್ನ ಮೇಲೆ ಹಾರಿತು. ಭಯದಿಂದ ಗಾಡಿಯನ್ನು ವೇಗವಾಗಿ ಚಲಾಯಿಸಿದೆ. ಎದುರುಗಡೆಯಿಂದ ಬಂದ ಕಾರೊಂದು ಜೋರಾಗಿ ಹಾರ್ನ್‌ ಮಾಡಿದ್ದರಿಂದ ಹುಲಿ ರಸ್ತೆಯ ಪಕ್ಕದ ಬೇಲಿಯತ್ತ ಹೋಯಿತು. ನಂತರ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದರು. ಹೆದರಿಕೆಯಿಂದ ನನಗೆ ಜ್ವರ ಕೂಡ ಬಂದಿತ್ತು. ಬಳಿಕ ಚೇತರಿಸಿಕೊಂಡೆ’.

ಬಸ್‌ನಲ್ಲಿ ಶಾಲೆಗೆ ಹೋದರೆ ತಲುಪುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದುದಾಗಿ ತಿಳಿಸಿದ ಅವರು, ಈಗಲೂ ಸ್ಕೂಟರ್‌ನಲ್ಲಿಯೇ ಶಾಲೆಗೆ ಹೋಗುತ್ತಿದ್ದಾರೆ.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಂಡೀಪುರ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ‘ಈ ಭಾಗದಲ್ಲಿ ಒಂದು ವಯಸ್ಸಾದ ಹುಲಿ ಇದೆ. ಅದು ದಾಳಿಗೆ ಯತ್ನಿಸಿರಬಹುದು’ ಎಂದು ಹೇಳಿದರು.

ಜೀಪ್ ಮೇಲೆ ಆನೆ ದಾಳಿ

ಈ ಮಧ್ಯೆ, ಆನೆಯೊಂದು ಬಂಡೀಪುರ ಸಫಾರಿ ಜೀ‍ಪ್‌ ಮೇಲೆ ದಾಳಿ ಮಾಡಿರುವ ಪ್ರಕರಣ ಎರಡು ದಿನಗಳ ಹಿಂದೆ ನಡೆದಿದೆ.

ಸಫಾರಿಗೆ ಸಾಗುವ ಅಣೆಕಟ್ಟು ರಸ್ತೆ ಬಳಿ ಜೀಪಿನ ಮೇಲೆ ಆನೆ ದಾಳಿ ಮಾಡಿದೆ. ಪ್ರವಾಸಿಗರು ಭಯಪಟ್ಟು ಕಿರುಚಿದ್ದಾರೆ. ಜೀಪಿನ ಬಾನೆಟ್‌ಗೆ ಹಾನಿಯಾಗಿದೆ. ಪ್ರವಾಸಿಗರಿಗೆ ಏನೂ ತೊಂದರೆಯಾಗಿಲ್ಲ.

ಆನೆ ದಾಳಿಗೆ ಮುಂದಾಗುತ್ತಲೇ ಚಾಲಕ ಬೊಮ್ಮ ಎಂಬುವವರು ಹೆದರದೆ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿ, ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.

*ದೇವರ ದಯೆಯಿಂದ ಬದುಕಿದೆ ಎನಿಸುತ್ತಿದೆ. ಅನೇಕ ಕಾಡುಪ್ರಾಣಿಗಳನ್ನು ನೋಡಿಕೊಂಡೇ ಇಲ್ಲಿ ಓಡಾಡಿದ್ದೇನೆ. ಯಾವತ್ತೂ ಈ ರೀತಿ ಆಗಿರಲಿಲ್ಲ
–ಅಂಥೋಣಿ ಅಮ್ಮಳ್‌, ಮುಖ್ಯಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.