ADVERTISEMENT

ಬಂಡೀಪುರ: ಆತಂಕ ಸೃಷ್ಟಿಸಿದ್ದ ವ್ಯಾಘ್ರನ ಸೆರೆ

ಎಡಗಾಲಿಗೆ ಗಾಯ, ಚಿಕಿತ್ಸೆಗಾಗಿ ಮೈಸೂರು ಮೃಗಾಲಯಕ್ಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 21:38 IST
Last Updated 19 ಮೇ 2020, 21:38 IST
ಸೆರೆ ಸಿಕ್ಕ ವ್ಯಾಘ್ರ
ಸೆರೆ ಸಿಕ್ಕ ವ್ಯಾಘ್ರ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಕಾಡಂಚಿನ ಪ್ರದೇಶದಲ್ಲಿ ಒಂದೂವರೆ ತಿಂಗಳಿನಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ, 20ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕೇವಲ ಒಂದೂವರೆ ದಿನದ ಕಾರ್ಯಾಚರಣೆಯಲ್ಲಿ ವ್ಯಾಘ್ರನನ್ನು ಸೆರೆ ಹಿಡಿಯಲಾಗಿದ್ದು, ಅಭಿಮನ್ಯು ಸೇರಿದಂತೆ ಆರು
ಸಾಕಾನೆಗಳನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

‘ಸೆರೆ ಸಿಕ್ಕಿರುವ ಗಂಡು ಹುಲಿ, 4–5 ವರ್ಷ ವಯಸ್ಸಿನದು. ಎಡಗಾಲಿಗೆ ಗಾಯವಾಗಿದ್ದು, ಚಿಕಿತ್ಸೆಗೆ ಮೈಸೂರು ಮೃಗಾಲಯಕ್ಕೆ ಕಳುಹಿಸಲಾಗಿದೆ. ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಡುವುದರ ಬಗ್ಗೆ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ನಿರ್ಧರಿಸಲಿದ್ದಾರೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸೋಮವಾರ ಮಧ್ಯಾಹ್ನ ನಡೆದಿದ್ದ ಕಾರ್ಯಾಚರಣೆ ಯಶಸ್ಸಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭವಾಗಿದ್ದು,11 ಗಂಟೆ ವೇಳೆಗೆ ಇಲಾಖೆ ಸಿಬ್ಬಂದಿ ಅಕ್ರಂ ಹುಲಿಯತ್ತ ಅರಿವಳಿಕೆ ಚುಚ್ಚುಮದ್ದು ಹೊಡೆದರು. ಚುಚ್ಚು
ಮದ್ದು ತಗುಲಿದ ವ್ಯಾಘ್ರ ಜಮೀನೊಂದರಲ್ಲಿ ಪ್ರಜ್ಞೆ ತಪ್ಪಿ ಬಿದ್ದಿತು. ನಂತರ ಬಲೆ ಹಾಕಿ ಸೆರೆ ಹಿಡಿಯಲಾಯಿತು.

‘ಮತ್ತೊಂದು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಈ ಹುಲಿ ಗಾಯಗೊಂಡಿರುವ ಸಾಧ್ಯತೆ ಇದೆ. ಕಾಡಿನೊಳಗೆ
ಬೇಟೆಯಾಡುವ ಸಾಮರ್ಥ್ಯವನ್ನು ಅದು ಕಳೆದುಕೊಂಡಿತ್ತು. ಹಾಗಾಗಿ, ಕಾಡಂಚಿನ ಗ್ರಾಮದಲ್ಲಿ ಓಡಾಡುತ್ತಾ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು’ ಎಂದು ಬಾಲಚಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.