ADVERTISEMENT

ಬಂಡೀಪುರ: ಕಾಳ್ಗಿಚ್ಚಿಲ್ಲ, ಕಳ್ಳಬೇಟೆಯದ್ದೇ ತಲೆನೋವು

ವಿಶ್ವಾಸವಿಟ್ಟು ಕೆಲಸಕೊಟ್ಟರೆ, ಬೆನ್ನಿಗೆ ಚೂರಿ ಹಾಕಿದರು– ಅರಣ್ಯ ಅಧಿಕಾರಿಗಳ ಬೇಸರ

ಸೂರ್ಯನಾರಾಯಣ ವಿ
Published 19 ಏಪ್ರಿಲ್ 2020, 19:33 IST
Last Updated 19 ಏಪ್ರಿಲ್ 2020, 19:33 IST
ಬಂಧಿತರಿಂದ ವಶಪಡಿಸಿಕೊಳ್ಳಲಾಗಿದ್ದ ಜಿಂಕೆ ಮಾಂಸ ಮತ್ತು ನಾಡ ಬಂದೂಕುಗಳು
ಬಂಧಿತರಿಂದ ವಶಪಡಿಸಿಕೊಳ್ಳಲಾಗಿದ್ದ ಜಿಂಕೆ ಮಾಂಸ ಮತ್ತು ನಾಡ ಬಂದೂಕುಗಳು   

ಗುಂಡ್ಲುಪೇಟೆ: ಕಳೆದ ವರ್ಷದ ಬೇಸಿಗೆಯಲ್ಲಿ ಕಾಳ್ಗಿಚ್ಚಿನಿಂದ ಸುದ್ದಿಯಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಬಾರಿ ಕಳ್ಳಬೇಟೆ ಸದ್ದು ಮಾಡುತ್ತಿದೆ.

ಮೂರು ವಾರಗಳ ಅಂತರದಲ್ಲಿ (ಮಾರ್ಚ್‌ 31ರಂದು ಕಾಡು ಬೆಕ್ಕು ಬೇಟೆ, ಏಪ್ರಿಲ್‌ 17ರಂದು ಜಿಂಕೆ ಮಾಂಸ ಸಾಗಾಟ) ಎರಡು ಕಳ್ಳಬೇಟೆ ಪ್ರಕರಣಗಳು ವರದಿಯಾಗಿರುವುದು ಅರಣ್ಯ ಅಧಿಕಾರಿಗಳು ಹಾಗೂ ವನ್ಯಜೀವಿ ಪ್ರೇಮಿಗಳನ್ನು ಚಿಂತೆಗೀಡುಮಾಡಿದೆ.

ಇಡೀ ರಾಜ್ಯವೇ ಲಾಕ್‌ಡೌನ್‌ನಲ್ಲಿರುವ ಕಾಡಂಚಿನ ಪ್ರದೇಶದಲ್ಲಿ ನಾಡ ಬಂದೂಕುಗಳ ಮೊರೆತ ಕೇಳಿಬರುತ್ತಿದ್ದು, ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುವ ಜಾಲ ಬಂಡೀಪುರದ ಸುತ್ತಮುತ್ತ ಸಕ್ರಿಯವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ.

ADVERTISEMENT

ಎರಡು ದಿನಗಳ ಹಿಂದೆ ಪತ್ತೆಯಾದ ಜಿಂಕೆ ಮಾಂಸ ಮಾರಾಟ ಜಾಲದಲ್ಲಿ ಅರಣ್ಯ ಇಲಾಖೆಯು ತಾತ್ಕಾಲಿಕವಾಗಿ ಬೆಂಕಿ ಕಾವಲುಗಾರರಾಗಿ ನೇಮಿಸಿದ್ದ 10 ಮಂದಿ ಭಾಗಿಯಾಗಿರುವುದು ಅರಣ್ಯ ಅಧಿಕಾರಿಗಳಲ್ಲಿ ಆಘಾತ ಉಂಟು ಮಾಡಿದೆ.

‘ಸ್ಥಳೀಯ ಜನರ ಮೇಲೆ ವಿಶ್ವಾಸ ಇಟ್ಟು, ಸಂಬಳ, ಊಟ ಎಲ್ಲ ಕೊಟ್ಟರೆ ಮುಗ್ಧ ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಬೆನ್ನಿಗೆ ಚೂರಿ ಹಾಕಿದರು. ಇನ್ನು ಇವರನ್ನು ನಂಬುವುದಾದರೂ ಹೇಗೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಪ್ರಶ್ನಿಸಿದರು.

‘ಅಪರೂಪಕ್ಕೆ ಎಂಬಂತೆ ಜಿಂಕೆ, ಮೊಲ, ಹಂದಿ, ಕಾಡು ಬೆಕ್ಕುಗಳನ್ನು ಬೇಟೆಯಾಡಲು ಉರುಳು ಹಾಕುವುದು, ನಾಡಬಂದೂಕಿನಿಂದ ಹೊಡೆಯುವ ಪ್ರಕರಣ ನಡೆಯುತ್ತಿತ್ತು. ಕೆಲವು ಪ್ರಕರಣ ಬೆಳಕಿಗೆ ಬಂದರೆ, ಇನ್ನು ಕೆಲವು ಬರುತ್ತಿರಲಿಲ್ಲ. ಆದರೆ, ಈ ರೀತಿಯಾಗಿ ಬೆನ್ನು ಬೆನ್ನಿಗೆ ಪ್ರಕರಣಗಳು ನಡೆದಿರಲಿಲ್ಲ’ ಎಂದು ಅವರು ಹೇಳಿದರು.

ಲಾಕ್‌ಡೌನ್‌ಗೆ ಸಂಬಂಧವಿದೆಯೇ?: ಲಾಕ್‌ಡೌನ್‌ಗೂ ಕಳ್ಳಬೇಟೆಗೂ ಸಂಬಂಧವಿರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಬಾಲಚಂದ್ರ.

‘ಲಾಕ್‌ಡೌನ್‌ ಜಾರಿಯಲ್ಲಿರು ವುದರಿಂದ ಜನರು ಯಾರೂ ಓಡಾಡುತ್ತಿಲ್ಲ. ಅಕ್ರಮ ಚಟುವಟಿಕೆ ನಡೆಸಿದರೆ ಗೊತ್ತಾಗುವುದಿಲ್ಲ ಎಂಬುದು ಅವರ ಯೋಚನೆಯಾಗಿರಬಹುದು. ನಾವು ಯಾವಾಗಲೂ ಎಚ್ಚರವಾಗಿದ್ದೇವೆ. ಖಚಿತ ಮಾಹಿತಿ ಮೇರೆಗೇ ಎರಡೂ ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ’ ಎಂದರು.

‘ಈಗ ಮಾರುಕಟ್ಟೆಯಲ್ಲಿ ಮಟನ್‌ ಬೆಲೆ ₹700 ಇದೆ. ಜಿಂಕೆಯನ್ನು ಬೇಟೆಯಾಗಿ ಕೊಂದರೆ, ಕಾಳಸಂತೆಯಲ್ಲಿ ಕೆಜಿ ಮಾಂಸಕ್ಕೆ ₹250–₹300 ಮಾರಾಟ ಮಾಡಬಹುದು ಎಂಬ ದುರಾಲೋಚನೆಯಿಂದಲೂ ಈ ಕೃತ್ಯ ಎಸಗಿರಬಹುದು’ ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದರು.

‘ನಾವು ಕಾಳ್ಗಿಚ್ಚಿನ ಬಗ್ಗೆ ಈವರೆಗೂ ಹೆಚ್ಚು ತಲೆಕೆಡಿಸಿಕೊಂಡಿದ್ದೆವು. ಇನ್ನೀಗ ಬೆಂಕಿ ಕಂಡು ಬರುವ ಸಾಧ್ಯತೆ ಇಲ್ಲ. ಈಗ ಕಳ್ಳಬೇಟೆಯನ್ನು ಸಂಪೂರ್ಣವಾಗಿ ನಿಲ್ಲಿಸುವನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು.

ಪಾಳು ಜಮೀನಿನಲ್ಲಿ ಕೃತ್ಯ: ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿನಲ್ಲಿ ಗಸ್ತು ತಿರುಗಿತ್ತಿದ್ದರೂ, ಕಾಡಂಚಿನಲ್ಲಿರುವ ಪಾಳು ಬಿದ್ದಿರುವ ಜಮೀನುಗಳಲ್ಲಿ ಕಳ್ಳಬೇಟೆ ಹೆಚ್ಚು ನಡೆಯುತ್ತಿದೆ.

‘ಕಾಡಂಚಿನಲ್ಲಿರುವ ಪಾಳು ಬಿದ್ದಿರುವ ಜಮೀನುಗಳನ್ನು ಗುರಿಯಾಗಿಸಿಕೊಂಡು ಇಲಾಖೆ ಸಿಬ್ಬಂದಿ ಹೆಚ್ಚು ಗಸ್ತು ತಿರುಗಬೇಕು. ಆಗ ಪ್ರಕರಣಗಳು ಹೊರಗೆ ಬರುತ್ತದೆ. ಬೇಟೆಯಾಡುವುದು ಕಡಿಮೆಯಾಗುತ್ತದೆ’ ಎಂದು ಪರಿಸರ ಪ್ರೇಮಿ ಶಶಿಕುಮಾರ್ ಅವರು ಅಭಿಪ್ರಾಯ ಪಟ್ಟರು.

ಸುಲಭವಾಗಿ ಸಿಗುತ್ತಿದೆ ನಾಡಬಂದೂಕು
ಬಂಡೀಪುರದ ಸುತ್ತಮುತ್ತಲಿನ ಕೆಲವು ಹಳ್ಳಿಗಳಲ್ಲಿ ನಾಡ ಬಂದೂಕು ಸುಲಭವಾಗಿ ಸಿಗುತ್ತಿರುವುದು ಕಳ್ಳಬೇಟೆಗಾರರಿಗೆ ವರವಾಗಿ ಪರಿಣಮಿಸಿದೆ.

ತಾಲ್ಲೂಕಿನ ಕೋಡಹಳ್ಳಿ, ಅಣ್ಣೂರುಕೇರಿ, ಹಗ್ಗದಹಳ್ಳ, ಬನ್ನಿತಾಳಪುರ, ಭೀಮನಬೀಡು, ಕೋಟೆಕೆರೆ ಗ್ರಾಮದಲ್ಲಿ ಬೇಟೆಯಾಡುವ ಪದ್ಧತಿ ಇದೆ. ಮೊನ್ನೆ ಬಂಧನಕ್ಕೆ ಒಳಗಾದ ಏಳು ಮಂದಿಯೂ ಹಗ್ಗದ ಹಳ್ಳದವರು. ಮಾರ್ಚ್‌ 31ರಂದು ಕಾಡು ಬೆಕ್ಕುಗಳನ್ನು ಬೇಟೆಯಾಡಿ ಬಂಧನಕ್ಕೆ ಒಳಗಾದ ಇಬ್ಬರೂ ಕೋಡಹಳ್ಳಿಯವರು.ಕೋಡಹಳ್ಳಿಯಲ್ಲಿ ನಾಡಬಂದೂಕುಗಳನ್ನು ತಯಾರಿಸುವವರೇ ಇದ್ದಾರೆ.

‘ಕಳ್ಳಬೇಟೆ ಕೃತ್ಯಕ್ಕೆ ಬಳಸಲಾದ ನಾಡಬಂದೂಕುಗಳು ಸ್ಥಳೀಯವಾಗಿ ತಯಾರಾದವು. ಕೋಡಹಳ್ಳಿಯಲ್ಲಿ ಸಿಗುತ್ತಿವೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಇದನ್ನು ಪೊಲೀಸರ ಗಮನಕ್ಕೂ ತಂದಿದ್ದೇವೆ. ಪತ್ತೆಯಾಗಿರುವ ಎರಡು ಪ್ರಕರಣಗಳ ಆರೋಪಿಗಳು ಇದೇ ಊರಿನವರು. ಹಾಗಾಗಿ, ಕಳ್ಳಬೇಟೆಗಾರರ ಜಾಲ ಈ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂಬ ಅನುಮಾನ ಇದೆ’ ಎಂದು ಟಿ.ಬಾಲಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.