ADVERTISEMENT

ಬಂಡೀಪುರ: ಕಳ್ಳಬೇಟೆ ತಡೆ, ಅರಣ್ಯ ಸಂಪತ್ತು ರಕ್ಷಣೆಗೆ ಡಾಗ್ ಸ್ಕ್ವಾಡ್‌

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದ ಮೊದಲ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭ

ಎಚ್.ಬಾಲಚಂದ್ರ
ಮಲ್ಲೇಶ ಎಂ.
Published 3 ಡಿಸೆಂಬರ್ 2024, 5:35 IST
Last Updated 3 ಡಿಸೆಂಬರ್ 2024, 5:35 IST
ಕಳ್ಳಬೇಟೆ ತಡೆ ಹಾಗೂ ಪ್ರಕಣಗಳ ಪತ್ತೆ ಉದ್ದೇಶದಿಂದ ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟ್ರಾಕರ್ ಡಾಗ್ ತರಬೇತಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು
ಕಳ್ಳಬೇಟೆ ತಡೆ ಹಾಗೂ ಪ್ರಕಣಗಳ ಪತ್ತೆ ಉದ್ದೇಶದಿಂದ ಗುಂಡ್ಲುಪೇಟೆ ತಾಲ್ಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಟ್ರಾಕರ್ ಡಾಗ್ ತರಬೇತಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು   

ಚಾಮರಾಜನಗರ: ರಾಜ್ಯದ ಐದು ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಅಕ್ರಮ ಬೇಟೆ, ಅರಣ್ಯ ಸಂಪತ್ತು ಕಳ್ಳಸಾಗಣೆ ತಡೆ ಹಾಗೂ ಪ್ರಕರಣಗಳ ಪತ್ತೆಗೆ ದೇಶದಲ್ಲೇ ಮೊದಲ ಟ್ರ್ಯಾಕರ್ ಡಾಗ್‌ ತರಬೇತಿ ಕೇಂದ್ರವನ್ನು ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆರಂಭಿಸಲಾಗಿದೆ.

‘ಮೇಲಕಾಮನಹಳ್ಳಿ ಅರಣ್ಯ ವ್ಯಾಪ್ತಿಗೊಳಪಡುವ ಗೋಪಾಲಸ್ವಾಮಿ ಬೆಟ್ಟ ವಲಯದ ಸಫಾರಿ ಕೇಂದ್ರದ ಬಳಿ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರ ಆರಂಭಿಸಲಾಗಿದ್ದು 8 ಬೆಲ್ಜಿಯಂ ಮಾಲಿನಾಯ್ಸ್‌ (ಹೆಣ್ಣು) ತಳಿಯ ಶ್ವಾನಗಳನ್ನು ತರಿಸಿಕೊಳ್ಳಲಾಗಿದ್ದು ವಾರದಲ್ಲಿ ಇನ್ನೆರಡು ಶ್ವಾನಗಳು ತರಬೇತಿ ಕೇಂದ್ರಕ್ಕೆ ಸೇರ್ಪಡೆಯಾಗಲಿವೆ’ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎನ್‌.ಪ್ರಭಾಕರನ್ ಮಾಹಿತಿ ನೀಡಿದರು.

ನುರಿತ ತಜ್ಞರಾದ ಅಮೃತ್ ಶ್ರೀಧರ್ ಹಿರಣ್ಯ ಅವರ ನೇತೃತ್ವದ ತಂಡ ಶ್ವಾನಗಳಿಗೆ 8 ರಿಂದ 10 ತಿಂಗಳು ತರಬೇತಿ ನೀಡಿ ರಾಜ್ಯದ ಐದು ಹುಲಿ ಸಂರಕ್ಷಿತ ಅರಣ್ಯಗಳಾದ ನಾಗರಹೊಳೆ, ಭದ್ರಾ, ಕಾಳಿ, ಬಂಡೀಪುರ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ಎರಡು ಶ್ವಾನಗಳನ್ನು ಕಳಿಸಿಕೊಡಲಿದ್ದಾರೆ.

ADVERTISEMENT

ನಾಯಿಗಳ ವಿಶೇಷತೆ: ಬೆಲ್ಜಿಯಂ ಮಾಲಿನಾಯ್ಸ್‌ ಶ್ವಾನಗಳು ಮಾದಕವಸ್ತು, ಬಾಂಬ್‌, ಅನಿಲ ಸೋರಿಕೆ ಪತ್ತೆ ಸೇರಿದಂತೆ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚುವಲ್ಲಿ ಪರಿಣತಿ ಹೊಂದಿವೆ. ಈ ಶ್ವಾನಗಳಿಗೆ ತರಬೇತಿ ಕೇಂದ್ರದಲ್ಲಿ ಪ್ರಾಣಿಗಳ ಕಳ್ಳಬೇಟೆ ಪತ್ತೆ ಹಚ್ಚುವ ಬಗ್ಗೆ ತರಬೇತಿ ನೀಡಲಾಗುವುದು.

‘ಹುಲಿ, ಜಿಂಕೆ, ಕಾಡುಕೋಣ ಸಹಿತ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಚರ್ಮ, ಮೂಳೆ, ಉಗುರು, ಆನೆಯ ದಂತ ಹಾಗೂ ಪ್ರಾಣಿಗಳ ಆವಯವಗಳ ಪತ್ತೆ ಹಚ್ಚುವ, ಶ್ರೀಗಂಧ, ರಕ್ತಚಂದನ ಸಹಿತ ಅಮೂಲ್ಯ ಅರಣ್ಯ ಸಂಪತ್ತು ಪತ್ತೆಹಚ್ಚುವ ತರಬೇತಿ ನೀಡಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಗಸ್ತಿನಲ್ಲೂ ಶ್ವಾನಗಳು ಭಾಗವಹಿಸಲಿವೆ’ ಎಂದು ಪ್ರಭಾಕರನ್ ಮಾಹಿತಿ ನೀಡಿದರು.

‘ಒಂದು ಶ್ವಾನಕ್ಕೆ ಇಬ್ಬರು ಹ್ಯಾಂಡ್ಲರ್‌ಗಳಂತೆ 20 ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗಿದೆ. ನಾಯಿಗಳಿಗೆ ವಿಶೇಷ ಆಹಾರ, ಆರೋಗ್ಯ ಕಾಳಜಿ, ಸುರಕ್ಷತೆ, ಪಾಲನೆ ಪೋಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತರಬೇತಿ ಪೂರ್ಣಗೊಂಡ ಬಳಿಕ ಶ್ವಾನಗಳು ಕರ್ತವ್ಯಕ್ಕೆ ಹಾಜರಾಗಲಿದ್ದು ಅರಣ್ಯದೊಳಗೆ ಅಕ್ರಮ ಕಳ್ಳಬೇಟೆ ಪ್ರಕರಣಗಳು ಕಡಿಮೆಯಾಗುವ ವಿಶ್ವಾಸವಿದೆ’ ಎನ್ನುತ್ತಾರೆ ಅವರು.

8 ಬೆಲ್ಜಿಯಂ ಮಾಲಿನಾಯ್ಸ್‌ ತಳಿಯ ಶ್ವಾನ ಆಗಮನ ಶ್ವಾನಗಳಿಗೆ 8 ರಿಂದ 10 ತಿಂಗಳು ತರಬೇತ ಒಂದು ಶ್ವಾನಕ್ಕೆ ಇಬ್ಬರು ಹ್ಯಾಂಡ್ಲರ್‌: 20 ಸಿಬ್ಬಂದಿ ನೇಮಕ 

ಟ್ರ್ಯಾಕರ್ ಡಾಗ್ ಕೇಂದ್ರ ಉದ್ಘಾಟನೆ

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೇಲುಕಾಮನಹಳ್ಳಿ ಬಳಿ ಟ್ರ್ಯಾಕರ್ ಡಾಗ್ ತರಬೇತಿ ಕೇಂದ್ರವನ್ನು ಸೋಮವಾರ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಹಾಗೂ ಮೈಸೂರು ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ರಮೇಶ್ ಕುಮಾರ್ ಉದ್ಘಾಟಿಸಿದರು. ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ವಲಯ ಅರಣ್ಯಾಧಿಕಾರಿ ಮಲ್ಲೇಶ್ ತರಬೇತುದಾರ ಅಮೃತ್ ಶ್ರೀಧರ್ ಹಿರಣ್ಯ ತರಬೇತಿಗೆ ಆಯ್ಕೆಯಾದ ಸಿಬ್ಬಂದಿ ಹಾಜರಿದ್ದರು.

‘ಅಪರಾಧ ಕೃತ್ಯ ಪತ್ತೆಗೆ ಎತ್ತಿದ ಕೈ’

ನಿಪುಣ ಹಾಗೂ ಚಾಕಚಕ್ಯತೆಗೆ ಹೆಸರು ವಾಸಿಯಾಗಿರುವ ಬೆಲ್ಜಿಯಂ ಮಾಲಿನಾಯ್ಸ್‌ ತಳಿಯ ಶ್ವಾನಗಳಿಗೆ ಸೇನೆ ಮಾದರಿಯಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಪೂರ್ಣಗೊಂಡ ಬಳಿಕ ಹುಲಿ ಸಂರಕ್ಷಿತ ಅರಣ್ಯದೊಳಗೆ ನಡೆಯುವ ಅಪರಾಧ ಕೃತ್ಯಗಳ ತಡೆ ಹಾಗೂ ಬೇಧಿಸಲು ಸ್ಫೋಟಕಗಳ ಪತ್ತೆಹಚ್ಚಲು ಶ್ವಾನಗಳು ಬಳಕೆಯಾಗಲಿವೆ. ರಾಷ್ಟ್ರದಲ್ಲೇ ಮೊದಲ ಶ್ವಾನ ತರಬೇತಿ ಕೇಂದ್ರ ಬಂಡೀಪುರದಲ್ಲಿ ಆರಂಭವಾಗಿರುವುದು ವಿಶೇಷ’ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪ್ರಭಾಕರನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.