
ಬಿ. ಬಸವರಾಜು
ಹನೂರು: ಮುಖ್ಯರಸ್ತೆಯಲ್ಲೇ ಹರಿಯುತ್ತಿರುವ ಚರಂಡಿ ನೀರು, ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಕೆಲಸಕ್ಕೆ ಬಾರದೆ ನಿಂತಿರುವ ಕಸ ಸಾಗಿಸುವ ವಾಹನ, ಗ್ರಾಮಕ್ಕೆ ಪ್ರವೇಶ ನೀಡುತ್ತಿದ್ದಂತೆ ಸ್ವಾಗತಿಸುವ ರಸ್ತೆಯಲ್ಲಿರುವ ಬಾರಿ ಗಾತ್ರದ ಹೊಂಡಗಳು...
ಜಿಲ್ಲೆಯಲ್ಲಿಯೇ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ತಾಲ್ಲೂಕಿನ ಮಾರ್ಟಳ್ಳಿ ಗ್ರಾಮಕ್ಕೆ ಹೋಗುತ್ತಿದ್ದಂತೆ ಗೋಚರವಾಗುವ ಸಮಸ್ಯೆಗಳಿವು.
ಗಡಿಭಾಗದಲ್ಲಿರುವ ಈ ಗ್ರಾಮ ಇಂದಿಗೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಗ್ರಾಮಪಂಚಾಯಿತಿ ಕೇಂದ್ರಸ್ಥಾನದಲ್ಲೇ ಈ ಪರಿಸ್ಥಿತಿಯಾದರೆ, ಇದರ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಪರಿಸ್ಥಿತಿಯನ್ನೂ ಊಹಿಸಬಹುದು. ರಸ್ತೆ, ಕುಡಿಯುವ ನೀರು, ಚರಂಡಿ ಮುಂತಾದ ಕನಿಷ್ಠ ಸೌಕರ್ಯಗಳು ಇಲ್ಲಿನ ಜನರಿಗೆ ಮರಿಚಿಕೆಯಾಗಿಯೇ ಉಳಿದಿವೆ.
ಮಾರ್ಟಳ್ಳಿಯಲ್ಲಿ ಆಗಿರುವ ಅವೈಜ್ಞಾನಿಕ ಚರಂಡಿ ವವಸ್ಥೆ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದುಶ್ರೀನಿವಾಸ್, ಇಒ, ಹನೂರು ತಾಲ್ಲೂಕು ಪಂಚಾಯಿತಿ
ಅರ್ಧಕ್ಕೆ ನಿಂತ ಕಾಮಗಾರಿ: ಮಾರ್ಟಳ್ಳಿ ಗ್ರಾಮದ ಮುಖ್ಯ ರಸ್ತೆ ಕಾಮಗಾರಿಗೆ ಅಂದಿನ ಶಾಸಕ ಆರ್. ನರೇಂದ್ರ ಮಾರ್ಚ್ 8ರಂದು ಭೂಮಿಪೂಜೆ ನೆರವೇರಿಸಿದ್ದರು.
ಬಳಿಕ ಇರುವ ಜಲ್ಲಿಕಲ್ಲಿನ ರಸ್ತೆಯನ್ನು ಕಿತ್ತು ರಸ್ತೆ ಅಗಲೀಕರಣ ಮಾಡಿ ಎರಡೂ ಕಡೆ ಚರಂಡಿಯನ್ನೂ ನಿರ್ಮಿಸಲಾಗಿತ್ತು. ಚುನಾವಣೆ ಬಂತು ಎಂಬ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿತು. ಆದರೆ ಚುನಾವಣೆ ಮುಗಿದು ತಿಂಗಳಾಗುತ್ತಾ ಬಂದರೂ ಕಾಮಗಾರಿ ಆರಂಭವಾಗಿಲ್ಲ. ಗುಂಡಿ ಬಿದ್ದ ರಸ್ತೆಯಲ್ಲೇ ಹರಸಾಹಸಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಅವೈಜ್ಞಾನಿಕ ಚರಂಡಿ
ಗ್ರಾಮದ ಪಾಳಿಮೇಡು ಬಳಿ ಚರಂಡಿ ನಿರ್ಮಿಸಿ ಅದನ್ನು ಮುಖ್ಯರಸ್ತೆಗೆ ಸಂಪರ್ಕಿಸಲಾಗಿದೆ! ಅಲ್ಲಿಂದ ಮುಂದೆ ಚರಂಡಿ ನಿರ್ಮಿಸದ ಪರಿಣಾಮ ಕೊಳಚೆ ನೀರೆಲ್ಲಾ ರಸ್ತೆಯ ಮಧ್ಯೆಭಾಗದಲ್ಲೇ ಹರಿಯುತ್ತಿದೆ.
‘ಪ್ರತಿನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೊಳಚೆ ನೀರನ್ನು ದಾಟಿಕೊಂಡೇ ಹೋಗಬೇಕಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಗ್ರಾಮದ ಸಬಾಸ್ಟಿಯನ್ ಆಗ್ರಹಿಸಿದರು.
ಗುಂಡಿ ಬಿದ್ದ ರಸ್ತೆ
‘ಗ್ರಾಮದ ಬಸ್ ನಿಲ್ದಾಣದಲ್ಲಿ ರಸ್ತೆಯೇ ಇಲ್ಲ. ಭಾರಿ ಗಾತ್ರದ ಗುಂಡಿ ನಿರ್ಮಾಣವಾಗಿದೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬುತ್ತದೆ. ಗುಂಡಿ ಆಳ ತಿಳಿಯದೇ ಗುಂಡಿಗಳಿಗೆ ವಾಹನಗಳನ್ನು ಇಳಿಸುವ ಸವಾರರು ಬೀಳುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಗುಂಡಿ ಮಣ್ಣು ತಂದು ಹಾಕುತ್ತಾರೆ. ಮಳೆಯಾದರೆ ಮತ್ತೆ ಗುಂಡಿಗಳಾಗುತ್ತದೆ. ಶಾಶ್ವತವಾಗಿ ಗುಂಡಿ ಮುಚ್ಚುವ ಮೂಲಕ ವಾಹನ ಸವಾರರ ಆತಂಕ ನಿವಾರಿಸಬೇಕು’ ಎಂದು ಸ್ಥಳೀಯ ನಿವಾಸಿ ಜೋಯ್ ಒತ್ತಾಯಿಸಿದರು.
ವಾಹನ ನಿರುಪಯುಕ್ತ
ಗ್ರಾಮದಲ್ಲಿ ಕಲ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಪ್ರತಿ ಮನೆಗಳಲ್ಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಲು ಪಂಚಾಯಿತಿ ವತಿಯಿಂದ ಕಸ ಸಾಗಿಸುವ ವಾಹನವನ್ನು ಖರೀದಿಸಲಾಗಿದೆ.
‘ಆರು ತಿಂಗಳು ಕಳೆಯುತ್ತಾ ಬಂದರೂ ವಾಹನವನ್ನು ಉಪಯೋಗಿಸುತ್ತಿಲ್ಲ. ಖಾಸಗಿ ಜಮೀನಿನಲ್ಲಿ ನಿರುಪಯುಕ್ತವಾಗಿ ನಿಂತಿದೆ. ವಾಹನವನ್ನು ಸುಮ್ಮನೆ ನಿಲ್ಲಿಸಿದ್ದರೆ ಅದನ್ನು ಖರೀದಿ ಮಾಡಿದ ಉದ್ದೇಶವಾದರೂ ಏನು’ ಎಂದು ಗ್ರಾಮದ ರಾಬರ್ಟ್ ಪ್ರಶ್ನಿಸಿದರು.
ಬಸ್ ವ್ಯವಸ್ಥೆಗೆ ಆಗ್ರಹ
ವಡಕೆಹಳ್ಳದಿಂದ ನಾಲ್‌ರೋಡ್‌ವರೆಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಈ ಭಾಗದಲ್ಲಿ ಶಾಲಾ ಕಾಲೇಜುಗಳು ಹೆಚ್ಚಾಗಿವೆ. ಆದರೆ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಖಾಸಗಿ ಆಟೊ ಟೆಂಪೊಗಳನ್ನು ಆಶ್ರಯಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಹಾಗೂ ಜನರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.