ಯಳಂದೂರು: ಸೋಲಿಗರು ಭೂಮಿ ಮತ್ತು ಸಮುದಾಯ ಸಂಪನ್ಮೂಲ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಏಟ್ರೀ ಸಂಸ್ಥೆಯ ಸಂಶೋಧಕ ಡಾ. ಆರ್. ಸಿದ್ದಪ್ಪಶಟ್ಟಿ ಹೇಳಿದರು.
ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಯರಕನಗದ್ದೆ ಕಾಲೊನಿಯಲ್ಲಿ ಭಾನುವಾರ ಏಟ್ರೀ ಸಂಸ್ಥೆ ಸಹಭಾಗಿತ್ವದಲ್ಲಿ ಅರಣ್ಯ ಹಕ್ಕು ಸಮಿತಿಗಳ ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬಿಳಿಗಿರಿಬೆಟ್ಟದ ಹುಲಿ ಯೋಜನೆ ವ್ಯಾಪ್ತಿಯ ಸೋಲಿಗರು ಅರಣ್ಯ ಹಕ್ಕು ಕಾಯ್ದೆ-2006ರ ಅಡಿಯಲ್ಲಿ ಭೂಮಿ ಹಕ್ಕು, ಸಂಪನ್ಮೂಲ ಸಂಗ್ರಹಿಸುವ ಹಕ್ಕು ಪಡೆದಿದ್ದಾರೆ. ಕಾಯ್ದೆಯ ಧ್ಯೇಯೋದ್ದೇಶಕ್ಕೆ ತಕ್ಕಂತೆ ಸಮುದಾಯ ಸಂರಕ್ಷಣಾ ಯೋಜನೆ ತಯಾರಿಸಿಕೊಂಡು ಅರಣ್ಯ ಸಂರಕ್ಷಣೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದರು.
ಲಂಟಾನ ಸಮಸ್ಯೆ, ನೆಲ್ಲಿ ಮರ ಅಳಿವಿಗೆ ಕಾರಣವಾದ ಉಪ್ಪಿಲು ನಿಯಂತ್ರಣ, ಕಾಡುಗಳ್ಳರು ಮತ್ತು ಬೇಟೆಗಾರರ ಮಾಹಿತಿ, ಪ್ಲಾಸ್ಟಿಕ್ ನಿಷೇಧ, ಗಣಿಗಾರಿಕೆಗೆ ತಡೆ, ಪ್ರವಾಸೋದ್ಯಮದ ಅಗತ್ಯತೆ, ಬರಗಾಲ ನಿರ್ವಹಣೆ, ಹವಾಮಾನ ವೈಪರೀತ್ಯದ ಅರಿವು, ಪ್ರಾಣಿ ಮತ್ತು ಮಾನವ ಸಂಘರ್ಷ ತಗ್ಗಿಸುವುದು ಮತ್ತು ಸೋಲಿಗರ ಜೀವನೋಪಾಯ ಮತ್ತು ಅಡಳಿತ ನಿರ್ವಹಣೆ ಕುರಿತು ಕಾರ್ಯಗಾರದಲ್ಲಿ ಚರ್ಚಿಸಲಾಯಿತು.
ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ, ತಾಲ್ಲೂಕು ಸೋಲಿಗ ಅಭಿವೃದ್ದಿ ಸಂಘದ ಅಧ್ಯಕ್ಷ ದಾಸೇಗೌಡ, ಅಡವಿ ಸಂಘದ ಅಧ್ಯಕ್ಷಕ್ಷೆ ಮಾದಮ್ಮ, ಮುಖಂಡರಾದ ಸಿದ್ದೇಗೌಡ, ಸಣ್ಣರಂಗೇಗೌಡ, ಮಸಣಮ್ಮ, ರಂಗಮ್ಮ, ಸಿದ್ದಮ್ಮ, ಗಿರಿಮಾದೇಗೌಡ, ಶಿವಕುಮಾರ, ಮರಿಯನ ಕೇತೇಗೌಡ, ಅಚ್ಚುಗೇಗೌಡ, 60ಕ್ಕೂ ಸದಸ್ಯರು, 6 ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.