ADVERTISEMENT

ಬಿಆರ್‌ಟಿ: ವಾಹನ ಸವಾರರ ಮೇಲೆ ಅರಣ್ಯ ಇಲಾಖೆಯ ಆ್ಯಪ್‌ ನಿಗಾ

ಅರಣ್ಯ ಇಲಾಖೆ ಹೊಸ ಯೋಜನೆ, ತಿಂಗಳಲ್ಲಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಗೆ ಸಿಸಿಎಫ್‌ ಸೂಚನೆ

ಸೂರ್ಯನಾರಾಯಣ ವಿ
Published 28 ಸೆಪ್ಟೆಂಬರ್ 2020, 11:46 IST
Last Updated 28 ಸೆಪ್ಟೆಂಬರ್ 2020, 11:46 IST
ಮನೋಜ್‌ ಕುಮಾರ್‌
ಮನೋಜ್‌ ಕುಮಾರ್‌   

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ರಸ್ತೆಯಲ್ಲಿಇತ್ತೀಚೆಗೆ ಬೆಂಗಳೂರು ಉದ್ಯಮಿ, ಅವರ ಮಗ ಹಾಗೂ ಕಾರಿನ ಚಾಲಕ ರಾತ್ರಿ ಆರು ಗಂಟೆ ವಾಹನದಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಬಿಆರ್‌ಟಿ ವ್ಯಾಪ್ತಿಯ ರಸ್ತೆಯಲ್ಲಿ ಸಂಚರಿಸುವ ಸವಾರರ ಮೇಲೆ ನಿಗಾ ಇಡಲು ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಚಾಮರಾಜನಗರದಿಂದ ಕೆ.ಗುಡಿ ಮಾರ್ಗವಾಗಿ ಹಾಗೂ ಯಳಂದೂರಿನಿಂದ ಗುಂಬಳ್ಳಿ ಮಾರ್ಗವಾಗಿ ಹೋಗಬಹುದು. ಕೆ.ಗುಡಿ ಮಾರ್ಗದಲ್ಲಿ ಹೊಂಡರಬಾಳು ಹಾಗೂ ಯಳಂದೂರು ಮಾರ್ಗವಾಗಿ ಗುಂಬಳ್ಳಿಯಲ್ಲಿ ಚೆಕ್‌ಪೋಸ್ಟ್‌ಗಳಿವೆ ಇದೆ. ಬೆಟ್ಟಕ್ಕೆ ಹೋಗುವವರ ವಿವರಗಳನ್ನು ಹಾಗೂ ಅವರ ದೂರವಾಣಿ ಸಂಖ್ಯೆಗಳನ್ನು ಇಲ್ಲಿ ಪುಸ್ತಕದಲ್ಲಿ ನಮೂದಿಸಲಾಗುತ್ತದೆ. ಚೆಕ್‌ಪೋಸ್ಟ್‌ ದಾಟಿದವರು ಬೆಟ್ಟದ ಬಳಿ ಇರುವ ಗೇಟನ್ನು ಹಾದುಹೋಗಿದ್ದಾರೆಯೇ ಎಂಬುದರ ಮೇಲೆ ನಿಗಾ ಇಡುವ ಸುಸಜ್ಜಿತ ವ್ಯವಸ್ಥೆ ಈಗ ಇಲ್ಲ (ಟೈಮ್ ಟೋ‌ಕನ್‌ ವ್ಯವಸ್ತೆ ಇತ್ತು. ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ಸವಾರರಿಗೆ ಚೀಟಿ ಕೊಟ್ಟು ಕಳುಹಿಸುತ್ತಿದ್ದರು. ನಿರ್ದಿಷ್ಟ ಸಮಯದ ಒಳಗೆ ಬೆಟ್ಟ ತಲುಪಿ, ಅಲ್ಲಿನ ಚೆಕ್‌ಪೋಸ್ಟ್‌ನಲ್ಲಿ‌ ಆ ಚೀಟಿಯನ್ನು ನೀಡಬೇಕು. ಆದರೆ, ಪಾಲನೆಯಾಗುತ್ತಿಲ್ಲ).

ಕಾಡಿನರಸ್ತೆಯಲ್ಲಿ ಸಂಚರಿಸುವವರ ಮೇಲೆಡಿಜಿಟಲ್‌ ತಂತ್ರಜ್ಞಾನದ ಮೂಲಕ ನಿಗಾ ಇಡುವ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸುವಂತೆ ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್‌)‌ ಮನೋಜ್‌ಕುಮಾರ್ ಅವರು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಇತ್ತೀಚೆಗೆ ಸೂಚಿಸಿದ್ದಾರೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮನೋಜ್‌ ಕುಮಾರ್ ಅವರು‌, ‘ಎರಡು ಉದ್ದೇಶಗಳಿಂದ ಆ್ಯಪ್‌ ಅಭಿವೃದ್ಧಿ ಮಾಡಲಾಗುತ್ತಿದೆ. ದಾರಿಯಲ್ಲಿ ವಾಹನ ನಿಲ್ಲಿಸಿ ಅನಗತ್ಯವಾಗಿ ಪ್ರಾಣಿಗಳಿಗೆ ತೊಂದರೆ ಕೊಡುವುದನ್ನು ತಪ್ಪಿಸುವುದು. ಇನ್ನೊಂದು, ಅರಣ್ಯದಲ್ಲಿ ಯಾರಾದರೂ ಸಿಕ್ಕಿ ಹಾಕಿಕೊಂಡರೆ ಅವರನ್ನು ರಕ್ಷಿಸುವುದು’ ಎಂದು ಹೇಳಿದರು.

ಕಾರ್ಯನಿರ್ವಹಣೆ ಹೇಗೆ?: ‘ಚೆಕ್‍ಪೋಸ್ಟ್‌ನಲ್ಲಿ ವಾಹನ ಸವಾರರ ವಿವರ, ಮೊಬೈಲ್‌ ಸಂಖ್ಯೆ, ವಾಹನಗಳ ನೋಂದಣಿ ಸಂಖ್ಯೆಯನ್ನು ಮೊಬೈಲ್‌ ಆ್ಯಪ್‌ನಲ್ಲಿ ನಮೂದಿಸಲಾಗುತ್ತದೆ. ಚೆಕ್‌ಪೋಸ್ಟ್‌ ದಾಟಿದ ಸವಾರರು ನಿರ್ದಿಷ್ಟ ಸಮಯದೊಳಗೆ ಬೆಟ್ಟದಲ್ಲಿರುವ ಚೆಕ್‌ಪೋಸ್ಟ್‌ ತಲುಪಬೇಕು. ಅಲ್ಲಿರುವ ಸಿಬ್ಬಂದಿಯ ಮೊಬೈಲ್‌ನಲ್ಲಿ ಈ ಬಗ್ಗೆ ಸಂದೇಶ ಬರುತ್ತದೆ ಅಥವಾ ಅವರು ಆ್ಯಪ್‌ ಮೂಲಕ ಅದನ್ನು ಖಚಿತ ಪಡಿಸಿಕೊಳ್ಳಬಹುದು. ಒಂದು ವೇಳೆ, ಮಿತಿಗಿಂತ ಹೆಚ್ಚಿನ ಸಮಯ ಕಳೆದರೂ ಸವಾರರು ತಲುಪದೇ ಇದ್ದರೆ ಪರಿಶೀಲನೆಗಾಗಿ ಸಿಬ್ಬಂದಿಯನ್ನು ಕಳುಹಿಸಲಾಗುತ್ತದೆ’ ಎಂದರು.

‘ಇದು ಹೊಸತೇನೂ ಅಲ್ಲ. ನಾಗರಹೊಳೆಯಲ್ಲಿ ಹಿಂದೆ ಈ ವ್ಯವಸ್ಥೆ ಇತ್ತು. ಈಗ ಇದೆಯೇ ಎಂಬುದು ತಿಳಿದಿಲ್ಲ. ಒಂದು ತಿಂಗಳೊಳಗೆ ಆ್ಯಪ್‌ ಅಭಿವೃದ್ಧಿ ಪಡಿಸುವಂತೆ ಸೂಚಿದ್ದೇನೆ’ ಎಂದು ಮನೋಜ್‌ಕುಮಾರ್ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.