ಗುಂಡ್ಲುಪೇಟೆ: ಮೈಸೂರು ನೇಚರ್ ಗುಂಪಿನ ಸದಸ್ಯರಾದ ಶ್ರೀಕಂಠ ಹಾಗೂ ಚಿದಾನಂದಸ್ವಾಮಿ ಅವರ ತಂಡ ತಾಲ್ಲೂಕಿನ ವಿವಿಧ ಕೆರೆಗಳಲ್ಲಿರುವ ವಲಸೆ ಹಕ್ಕಿ ಮತ್ತು ಸ್ಥಳೀಯ ಹಕ್ಕಿಗಳ ಗಣತಿ ನಡೆಸಿತು.
ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ಇರುವ ಕಲ್ಲುಕಟ್ಟೆ ಸಾಗರ, ಹಂಗಳ ಗ್ರಾಮದ ದೊಡ್ಡ ಕೆರೆ, ಬೇರಂಬಾಡಿ ಕೇಂಪು ಸಾಗರ ಕೆರೆಗಳಲ್ಲಿ ದಿನ ಪೂರ್ತಿ ಹಕ್ಕಿಗಳ ಚಲನವಲನಗಳನ್ನು ಗುರುತಿಸಿ, ಗಣತಿ ಮಾಡಿದರು.
ಹಕ್ಕಿಗಳ ಗಾತ್ರ, ಮೈಬಣ್ಣ ಹಾಗೂ ಅವುಗಳ ಕೂಗನ್ನು ಗ್ರಹಿಸಿ ಗುರುತಿಸಲಾಯಿತು.
ಈ ಗಣತಿಯಿಂದ ಸ್ಥಳೀಯವಾಗಿ ಇರುವಂತಹ ಪಕ್ಷಿಗಳ ಜೊತೆಗೆ, ಚಳಿಗಾಲದ ಅವಧಿಗೆ ಅಂದರೆ ಅಕ್ಟೋಬರ್‌ನಿಂದ ಏಪ್ರಿಲ್ ನಡುವೆ ಉತ್ತರ ಭಾರತ, ಹಿಮಾಲಯ ಪ್ರದೇಶದಿಂದ ಹಾಗೂ ನೆರೆಯ ರಾಷ್ಟ್ರಗಳಾದ ಮಂಗೋಲಿಯಾ, ಯುರೋಪ್, ಸೌದಿ ಅರೇಬಿಯಾ, ಅಂಟಾರ್ಕ್ಟಿಕಾದಿಂದ ಆಹಾರಕ್ಕಾಗಿ ದಕ್ಷಿಣ ಭಾರತದೆಡೆಗೆ ಹಕ್ಕಿಗಳು ವಲಸೆ ಬರುವ ಹಕ್ಕಿಗಳನ್ನೂ ಪಟ್ಟಿ ಮಾಡಿದರು.
ಬೇರೆಡೆಯಿಂದ ನಮ್ಮಲ್ಲಿಗೆ ವಲಸೆ ಬರುವ ಹಕ್ಕಿಗಳು ನಮ್ಮ ಸ್ಥಳೀಯ ಪರಿಸರದ ಆರೋಗ್ಯವನ್ನೂ ಸೂಚಿಸುತ್ತವೆ ಎಂದು ಪಕ್ಷಿ ವೀಕ್ಷಣೆ ಮಾಡುವವರು ಅಭಿಪ್ರಾಯ ಪಟ್ಟರು.
‘ವಲಸೆ ಬರುವಂತಹ ಹಕ್ಕಿಗಳು, ಕೀಟಾಹಾರಿ ಅಥವಾ ಜಲವಾಸಿಯಾಗಿರಬಹುದು, ಉತ್ತಮ ಪರಿಸರವನ್ನು ನೋಡಿಯೇ ವಲಸೆ ಬರುತ್ತವೆ. ಇದರಿಂದಾಗಿ ಪರಿಸರ ಸಮತೋಲನವಾಗಿರಲೂ ಸಹಕಾರಿ’ ಎಂದು ಪಕ್ಷಿ ವೀಕ್ಷಕ ಶ್ರೀಕಂಠ ತಿಳಿಸಿದರು.
‘ಇಂದಿನ ದಿನಗಳಲ್ಲಿ ಅತಿಯಾದ ಆಧುನಿಕತೆ, ತಂತ್ರಜ್ಞಾನದ ದುರ್ಬಳಕೆ, ಅರಣ್ಯ ನಾಶ, ಪರಿಸರ ಮಾಲಿನ್ಯದಂತಹ ಹಲವು ಕಾರಣಗಳಿಂದ ಜೀವಪರಿಸರದಲ್ಲಿ ಏರುಪೇರಾಗಿದ್ದು, ವಾರ್ಷಿಕ ಮಳೆಯು ಅತಿವೃಷ್ಟಿ, ಅನಾವೃಷ್ಟಿಯಂತಹ ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದು ಹೇಳಿದರು.
‘ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ, ಈ ವರ್ಷ ಕೆರೆಗಳೆಲ್ಲ ಬತ್ತುತ್ತಿವೆ. ಕೆರೆಗಳನ್ನು ಅವಲಂಬಿಸಿ ಬರುತ್ತಿದ್ದ ವಲಸೆ ಹಕ್ಕಿಗಳ ಆಗಮನವೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ’ ಎಂದು ಶ್ರೀಕಂಠ ಮಾತನಾಡಿದರು.
ಗಣತಿಯಲ್ಲಿ 45ಕ್ಕೂ ಹೆಚ್ಚು ಪ್ರಬೇಧದ ಹಕ್ಕಿಗಳನ್ನು ಗುರುತಿಸಲಾಯಿತು. ಸ್ಪೂನ್ ಬಿಲ್ಡ್ ಸ್ಟಾರ್ಕ್(ಚಮಚ ಕೊಕ್ಕಿನ ಕೊಕ್ಕರೆ) ಓಪನ್ ಬಿಲ್ಡ್ ಸ್ಟಾರ್ಕ್ (ತೆರೆದ ಕೊಕ್ಕಿನ ಕೊಕ್ಕರೆ) ಪೈನ್ಟೆಡ್ ಸ್ಟಾರ್ಕ್(ಬಣ್ಣದ ಕೊಕ್ಕರೆ) ವೂಲಿ ನೆಕ್ಡ್ ಸ್ಟಾರ್ಕ್(ಬಿಳಿ ಕತ್ತಿನ ಕೊಕ್ಕರೆ) ಗ್ರೇ ಹೆರಾನ್ (ಬೂದು ಬಕ) ಸ್ಯಾಂಡ್ ಪೈಪರ್ ವೈಟ್ ವ್ಯಾಗ್ಟೇಲ್(ಬಿಳಿ ಸಿಪಿಳೆ) ಪಿಪಿಟ್ ಬ್ಲೂಟೇಡ್ ವಾರ್ಬ್ಲರ್ ಗ್ರೇಟ್ ಈಗ್ರೆಟ್ (ದೊಡ್ಡ ಬೆಳ್ಳಕ್ಕಿ) ಲಿಟ್ಲ್ ಈಗ್ರೆಟ್ ಬ್ಲ್ಯಾಕ್ ವಿಂಗ್ಡ್ ಸ್ಟಿಲ್ಟ್ (ಮೆಟುಗೋಲಿನ ಹಕ್ಕಿ) ಇತರೆ ಹಕ್ಕಿಗಳು ಕಾಣಿಸಿಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.