ADVERTISEMENT

ಭ್ರಷ್ಟಾಚಾರ ಮುಚ್ಚಲು ವಿಬಿ ಜಿ ರಾಮ್‌ ಜಿ ಅಪಪ್ರಚಾರ: ಅಶ್ವತ್ಥ್‌ ನಾರಾಯಣ್

ವಿಕಸಿತ ಭಾರತ ಜಿ ರಾಮ್ ಜಿ ಜಿಲ್ಲಾ ಸಮಾವೇಶಕ್ಕೆ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್‌ ನಾರಾಯಣ್ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 2:36 IST
Last Updated 23 ಜನವರಿ 2026, 2:36 IST
ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ವಿಕಸಿತ ಭಾರತ ಜಿ-ರಾಮ್ ಜಿ ಜಿಲ್ಲಾ ಸಮಾವೇಶ ಉದ್ಗಾಟಿಸಿ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ್‌ ನಾರಾಯಣ್ ಮಾತನಾಡಿದರು
ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ವಿಕಸಿತ ಭಾರತ ಜಿ-ರಾಮ್ ಜಿ ಜಿಲ್ಲಾ ಸಮಾವೇಶ ಉದ್ಗಾಟಿಸಿ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ್‌ ನಾರಾಯಣ್ ಮಾತನಾಡಿದರು   

ಚಾಮರಾಜನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ಜಿ ರಾಮ್‌ ಜಿ ಯೋಜನೆಯ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಅಶ್ವತ್ಥ್‌ ನಾರಾಯಣ್ ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಕಸಿತ ಭಾರತ ಜಿ-ರಾಮ್ ಜಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಅವ್ಯವಹಾರ ತಡೆಯಲು, ಪಾರದರ್ಶಕತೆ ಕಾಯ್ದುಕೊಳ್ಳಲು, ಅಭಿವೃದ್ದಿ ಪರವಾದ ಹಾಗೂ ಗ್ರಾಮೀಣ ಜನರ ಸಬಲೀಕಣಕ್ಕೆ ಪೂರಕವಾಗಿ ಬಿಜೆಪಿ ಸರ್ಕಾರ ವಿಬಿ ಜಿ ರಾಮ್‌ ಜಿ ಪರಿಷ್ಕೃತ ಯೋಜನೆ ಜಾರಿಗೊಳಿಸಿದೆ.

ಆದರೆ, ಕಾಂಗ್ರೆಸ್‌ ಸರ್ಕಾರ ಕಾರ್ಯಕ್ರಮದ ಆಶಯಗಳನ್ನೇ ಅರಿಯದೆ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಅಪಪ್ರಚಾರ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಕೈಬಿಟ್ಟಿರುವುದಾಗಿ ದೂಷಿಸುತ್ತಿರುವ ಕಾಂಗ್ರೆಸ್ ನರೇಗಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಯುವ ಪ್ರಯತ್ನ ಮಾಡದಿರುವುದು ವಿಪರ್ಯಾಸ. ಕೇಂದ್ರದ ಮಹತ್ವಪೂರ್ಣ ಯೋಜನೆಯನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಅಶ್ವತ್ಥ್‌ ನಾರಾಯಣ್ ದೂರಿದರು.

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಮೂಲಕ ಸದನದಲ್ಲಿ ಸುಳ್ಳುಗಳನ್ನು ಹೇಳಿಸಲು ಹೊರಟಿದೆ. ಸಂವಿಧಾನ ಬದ್ದವಾಗಿ ರಚನೆಯಾಗಿರುವ ಕೇಂದ್ರ ಸರ್ಕಾರ ವಿಬಿ ಜಿರಾಮ್‌ಜಿ ಕಾಯ್ದೆಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಅಧಿವೇಶನದಲ್ಲಿ ಒಪ್ಪಿಗೆ ಪಡೆದಿದೆ. ರಾಷ್ಟ್ರಪತಿಗಳು ಕೂಡ ಸಹಿ ಹಾಕಿದ್ದಾರೆ. ಹೀಗಿರುವಾಗ ರಾಜಕೀಯ ಕಾರಣಕ್ಕಾಗಿ ಯೋಜನೆಯನ್ನು ವಿರೋಧಿಸಲಾಗುತ್ತಿದೆ ಎಂದರು.

ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ, ಗೃಹ ಲಕ್ಷಿ ಯೋಜನೆಯಲ್ಲೂ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಿಲ್ಲ. ಮುಡಾ ನಿವೇಶನ ಹಗರಣದ ನಡೆಸಿರುವ ಕಾಂಗ್ರೆಸ್ ಸರ್ಕಾರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸದಿರು.

ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಕಾಂಗ್ರೆಸ್ ನಾಯಕರು ಜಿರಾಮ್‌ಜಿ ಕಾಯ್ದೆಯನ್ನು ಓದಿ ಅರ್ಥ ಮಾಡಿಕೊಳ್ಳದೆ ಮಹಾತ್ಮಾ ಗಾಂಧಿ ಹೆಸರು ತೆಗೆದು ಹಾಕಿರುವ ವಿಚಾರವನ್ನೇ ದೊಡ್ಡದು ಮಾಡಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಯೋಜನೆಯನ್ನು ಪರಿಷ್ಕರಿಸಲಾಗಿದೆ ಎಂದರು.

ಸಮಾವೇಶದದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿದರು. ಮುಖಂಡರಾದ ಎಂ. ರಾಮಚಂದ್ರ, ನೂರೊಂದುಶೆಟ್ಟಿ, ಮಮತಾ ಬಾಲಸುಬ್ರಮಣ್ಯ, ಆರ್.ಸುಂದರ್, ಶಾಂತಮೂರ್ತಿ ಕುಲಗಾಣ, ಎಸ್.ಬಾಲಸುಬ್ರಮಣ್ಯ, ಮೂಡ್ನಾಕೂಡು ಪ್ರಕಾಶ್ ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು.

‘ಅಧಿಕಾರ ಉಳಿಸಿಕೊಳ್ಳಲು ವಿರೋಧ’

ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಜಿರಾಮ್‌ಜಿ ಯೋಜನೆಗೆ ವಿರೋಧ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಹಾಗೂ ಗಾಂಧಿ ಕುಟುಂಬವನ್ನು ಮೆಚ್ಚಿಸಿಕೊಳ್ಳಲು ಯೋಜನೆ ವಿರುದ್ಧ ಮಾತನಾಡುತ್ತಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ ಕುತಂತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.